ರಾಂಚಿ: ಮಾಂಸದ ಅಡುಗೆ ಮಾಡುತ್ತಿದ್ದ ಮನೆಗೆ ನುಗ್ಗಿದ್ದ ಹುಲಿ ಮಹಿಳೆ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಜಾರ್ಖಂಡ್ ನ ರಾಮ್ ಕಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಾಶಿಯಾ ದೇವಿ ರಾಮ್ ಕಾಂಡಾದ ಕುಶ್ವಾರ್ ಗ್ರಾಮದಲ್ಲಿ ಅರಣ್ಯದ ಸಮೀಪವೇ ಜೋಪಡಿಯಲ್ಲಿ ವಾಸವಾಗಿದ್ದರು. ಈ ಜೋಪಡಿ ಸುತ್ತಮುತ್ತ ಇತರರ ಮನೆಯೂ ಇದೆ. ಅರಣ್ಯದೊಳಗಿಂದ ಪ್ರಾಣಿಗಳು ಕೂಗುವ ಸದ್ದು ಇವರಿಗೆ ದಿನಂಪ್ರತಿ ಕೇಳುತ್ತಿರುತ್ತದೆ. ಅಷ್ಟೇ ಅಲ್ಲ ಮನುಷ್ಯರನ್ನು ಹುಲಿ, ಚಿರತೆ, ಆನೆಗಳಿಗೆ ಆಹುತಿಯಾಗುವುದು ಮುಂದುವರಿದಿದೆ.
ಮಂಗಳವಾರ ಕಲಾಶಿಯಾ ದೇವಿ ಮಾಂಸದ ಅಡುಗೆ ಮಾಡುತ್ತಿದ್ದರು. ಈ ವೇಳೆ ಅದರ ವಾಸನೆ ಜಾಡು ಹಿಡಿದು ಬಂದ ಹುಲಿ ನೇರವಾಗಿ ಬಂದಿದ್ದು ಜೋಪಡಿಯೊಳಗೆ..ಸುತ್ತಮುತ್ತ ನೋಡಿದ ಹುಲಿ ಒಳಗಡೆ ಇದ್ದ ಕಲಾಶಿಯಾ ದೇವಿ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಜೋಪಡಿಯೊಳಗಿನಿಂದ ಆಕೆಯನ್ನು ಹೊರಗೆ ಎಳೆದು ತಂದ ಹುಲಿ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದಿರುವುದಾಗಿ ವರದಿ ವಿವರಿಸಿದೆ. ಆಕೆ ಕೂಗಿಕೊಂಡ ಶಬ್ದ ಕೇಳಿ ಸ್ಥಳೀಯರು ಓಡಿ ಬಂದಿದ್ದರು. ಆದರೆ ಹುಲಿ ಆಕೆಯನ್ನು ಕಾಡಿನೊಳಗೆ ಬಹುದೂರ ಕೊಂಡೊಯ್ದಿತ್ತು. ಮನೆಯೊಳಗೆ ಬಂದು ನೋಡಿದವರಿಗೆ ಆಘಾತವಾಗಿತ್ತು. ಯಾಕೆಂದರೆ ಕಲಾಶಿಯಾ ದೇವಿಯ ದೇಹದ ಮಾಂಸದ ಚೂರುಗಳು ನೆಲದ ಮೇಲೆ ರಕ್ತಸಿಕ್ತವಾಗಿ ಬಿದ್ದಿರುವುದನ್ನು ಕಂಡಿದ್ದರು.
ಘಟನೆಯನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಆಕೆಯನ್ನು ಕೊಂದು ಹಾಕಿರುವುದು ಹುಲಿಯಲ್ಲ, ಚಿರತೆ ಎಂದು ತಿಳಿಸಿದ್ದಾರೆ.