Advertisement
ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ತೆಲುಗು ಟೈಟಾನ್ಸ್ ತಂಡವನ್ನು ಮೂರು ಬಾರಿ ಆಲೌಟ್ ಮಾಡಿತು. ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪಂದ್ಯ ನೀರಸವಾಗಿ ಸಾಗಿತು. ಟೈಟಾನ್ಸ್ ವಿರುದ್ಧ ಮುಂಬೈ ಸವಾರಿ ಮಾಡುತ್ತಲೇ ಸಾಗಿತು. ಅರ್ಜುನ್ ದೆಶ್ವಾಲ್ (9 ಅಂಕ) ಉತ್ತಮ ದಾಳಿ ಮಾಡಿದರು. ಇವರಿಗೆ ರೋಹಿತ್ ಬಲಿಯಾನ್ ಸಾಥ್ ನೀಡಿದರು. ಮುಂಬಾ ಪರ ಫಜಲ್ ಅಟ್ರಾಚೆಲಿ ರಕ್ಷಣೆಯಲ್ಲಿ 6 ಅಂಕಗಳಿಸಿ ತಂಡದ ಗೆಲುವಿಗೆ ನೆರವಾದರು. ತಾರಾ ಆಟಗಾರ ರಾಹುಲ್ ಚೌಧರಿ ತಮಿಳ್ ತಲೈವಾಸ್‌ಗೆ ವಲಸೆ ಹೋಗಿರುವುದರಿಂದ, ತೆಲುಗು ಟೈಟಾನ್ಸ್‌ಗೆ ಅದರಿಂದ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಸತತ ಸೋಲನು ಅನುಭವಿಸುತ್ತ ಕೂಟದಲ್ಲಿ 9ನೆ ಸ್ಥಾನದಲ್ಲಿದೆ. ತೆಲುಗು ಪರ ಇದ್ದಿದ್ದರಲ್ಲಿ ರಾಕೇಶ್ ಗೌಡ (7 ಅಂಕ) ಹಾಗೂ ಸಿದ್ಧಾರ್ಥ್ ದೇಸಾಯಿ ( 4 ಅಂಕ) ಪರವಾಗಿಲ್ಲ ಎನ್ನುವಂತಹ ಆಟವಾಡಿದರು.
ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 15-15 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ, ಎರಡನೆ ಅವಧಿಯ ಆಟ ಆರಂಭವಾಗಿ ಎರಡೇ ನಿಮಿಷದಲ್ಲಿ ಯು ಮುಂಬಾ ತಂಡ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು. ಈ ಹಂತದಲ್ಲಿ ಯು ಮುಂಬಾ 19-16ರಿಂದ ಮುನ್ನಡೆ ಪಡೆದಿತ್ತು. ನಂತರದ ಹಂತದಲ್ಲಿಯೂ ಯು ಮುಂಬಾ ತಂಡ ತನ್ನ ಆಕ್ರಮಣದ ಆಟವನ್ನು ಮುಂದುವರಿಸಿತು. ಟೈಟಾನ್ಸ್ ಕೋಟೆಯಲ್ಲಿದ್ದ ಒಬ್ಬೊಬ್ಬರೇ ಆಟಗಾರರು ಅಂಕಣದಿಂದ ಹೊರ ಹೋಗುತ್ತಿದ್ದರು. ಇದರ ಫಲವಾಗಿ ಪಂದ್ಯ ಮುಗಿಯಲು ಇನ್ನೂ 9 ನಿಮಿಷ ಬಾಕಿ ಇರುವಂತೆಯೇ ಟೈಟಾನ್ಸ್ ತಂಡ ಮತ್ತೂಮ್ಮೆ ಆಲೌಟ್ ಆಯಿತು. ಈ ಹಂತದಲ್ಲಿ ಮುಂಬಾ ತಂಡ 30-22ರಿಂದ ಭಾರೀ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.