Advertisement

fishing ಋತುವಿಗೆ ತಾತ್ಕಾಲಿಕ ವಿರಾಮ; ಮತ್ಸ್ಯಕ್ಷಾಮ, ದರ ಇಲ್ಲ

04:04 PM Jun 02, 2023 | Team Udayavani |

ಕುಂದಾಪುರ: ಇನ್ನು ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ. ಪ್ರತಿ ಬಾರಿ ಆಗಸ್ಟ್‌ ತಿಂಗಳಿನಿಂದ ಆರಂಭವಾಗುವ ಮೀನುಗಾರಿಕೆ ಮೇ ತಿಂಗಳ ಅಂತ್ಯಕ್ಕೆ ಕೊನೆಗೊಂಡಿದೆ. ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ಅನೇಕ ಸಮಸ್ಯೆ ಎದುರಿಸಿದ್ದು, ಋತುವಿನ ಕೊನೆಯ ನಾಲ್ಕೈದು ತಿಂಗಳುಕಾಡಿದ ಮತ್ಸ್ಯಕ್ಷಾಮ, ಮೀನಿಗೆ ನಿಗದಿತ ಮಾರುಕಟ್ಟೆ ದರ ದೊರೆಯದ ಹಿನ್ನೆಲೆ, ಕಡಲಿನಲ್ಲಿ ಹೆಚ್ಚುತ್ತಿರುವ ತೂಫಾನ್‌ ಪರಿಣಾಮ ಮೀನುಗಾರರು ನಿರಾಶೆಯಲ್ಲಿಯೇ ಮೀನುಗಾರಿಕಾ ಋತು ಅಂತ್ಯಗೊಳಿಸಿದ್ದಾರೆ.

Advertisement

ಬೇರೆಡೆ ವ್ಯವಹಾರ
ಗಂಗೊಳ್ಳಿಯಲ್ಲಿ ಅನೇಕ ಸಮಸ್ಯೆಗಳ ನಡುವೆ ಮೀನುಗಾರಿಕಾ ಋತು ನಿರಾಶಾದಾಯಕ ಅಂತ್ಯ ಕಾಣುವಂತಾಗಿದೆ. ಮೀನುಗಾರಿಕಾ ಋತುವಿನ ಆರಂಭದಿಂದ ಉತ್ತಮ ಸಂಪಾದನೆ ಆಗಿದ್ದು ಉತ್ತಮ ಮೀನುಗಾರಿಕೆ ನಡೆದಿದೆ. ಇಲ್ಲಿ ಸುಮಾರು 70ಕ್ಕೂ ಅಧಿಕ ಆಳ ಸಮುದ್ರ, 40ಕ್ಕೂ ಮಿಕ್ಕಿ ಪರ್ಸಿನ್‌, 70ಕ್ಕೂ ಮಿಕ್ಕಿ ಫಿಶಿಂಗ್‌ ಬೋಟು
ಗಳು, 250ಕ್ಕೂ ಮಿಕ್ಕಿ ಮೀನುಗಾರಿಕಾ ದೋಣಿಗಳು ಇವೆ. ಬಂದರಿನಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಗಂಗೊಳ್ಳಿಯ ಬೋಟು ಬೇರೆ ಬೇರೆ ಬಂದರಿನಲ್ಲಿ ವ್ಯವಹಾರ ನಡೆಸುವ ಅನಿವಾರ್ಯ ಪರಿಸ್ಥಿತಿ ಇದೆ.

ಲಂಗರು
ಕಳೆದ ಮೂರು ತಿಂಗಳಿನಲ್ಲಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆಯದಿರುವುದರಿಂದ ಬಹುತೇಕ ಬೋಟುಗಳು ಮ್ಯಾಂಗನೀಸ್‌ ರಸ್ತೆ ವಠಾರ, ಪೋರ್ಟ್‌ ಆಫೀಸಿನ ಬಳಿ ಲಂಗರು ಹಾಕಿದ್ದವು. ಋತುವಿನ ಕೊನೆಯಲ್ಲಾದರೂ ಆಶಾದಾಯಕ ಮೀನುಗಾರಿಕೆ ನಡೆಯಬಹುದೆಂಬ ಆಸೆ ಈಡೇರಿಲ್ಲ. ಒಲ್ಲದ ಮನಸ್ಸಿನಿಂದ ಬೋಟುಗಳನ್ನು ದಡ ಸೇರಿಸಿ ಬೋಟುಗಳನ್ನು ಮಳೆಗಾಲದಲ್ಲಿ ಸಂರಕ್ಷಿಸಿಡುವ ಕಾರ್ಯ ಸಾಗುತ್ತಿದೆ. ಮೀನುಗಾರಿಕಾ ಬಲೆ ಮುಂತಾದ ಬೆಲೆ ಬಾಳುವ ಸಾಮಗ್ರಿಗಳನ್ನು ಸುರಕ್ಷಿತ ತಾಣಕ್ಕೆ ಒಯ್ಯಲಾಗುತ್ತಿದೆ. ಮೀನುಗಾರಿಕಾ ಬೋಟಿನ ದುರಸ್ತಿ ಕಾರ್ಯ, ಬಲೆ ದುರಸ್ತಿ, ಬಲೆ ನೇಯ್ಗೆ ಮತ್ತಿತರ ಚಟುವಟಿಕೆ ಆರಂಭವಾಗಿದೆ. ಅನ್ಯ ರಾಜ್ಯದಿಂದ ಬಂದಿದ್ದ ಮೀನುಗಾರರು ತವರಿಗೆ ಮರಳುತ್ತಿದ್ದಾರೆ.

ಮತ್ಸ್ಯಕ್ಷಾಮ
ಕಳೆದ ಹಲವು ವರ್ಷಗಳಿಂದ ಕಂಗೆಡಿಸಿದ್ದ ಮತ್ಸ್ಯಕ್ಷಾಮ ಈ ಬಾರಿಯೂ ಮೀನುಗಾರರನ್ನು ಕಾಡಿದೆ. ಕಳೆದ ಮೂರು ತಿಂಗಳಿನಿಂದ ಬದುಕನ್ನು ಹಿಂಡಿದೆ. ಆರ್ಥಿಕ ಗಳಿಕೆ ಮೇಲೆ ಪರಿಣಾಮ ಬೀರಿ ನಿಷೇಧ ಅವಧಿಯ ಎರಡು ತಿಂಗಳು ಮತ್ತೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

ಅಧಿಕಾರಿಗಳ ನಿರ್ಲಕ್ಷ್ಯ
ಗಂಗೊಳ್ಳಿ ಬಂದರಿನ ಜೆಟ್ಟಿ ಪುನರ್‌ ನಿರ್ಮಾಣ ಕಾರ್ಯ ಅರ್ಧದಲ್ಲೇ ಸ್ಥಗಿತಗೊಂಡಿರುವುದು, ಬಂದರಿನಲ್ಲಿ ನಡೆದ ಕಳಪೆ ಕಾಮಗಾರಿಗಳು, ಬಾಕಿ ಉಳಿದಿರುವ ಕಾಮಗಾರಿಗಳು, ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ದಶಕಗಳೇ ಕಳೆದರೂ ಗಂಗೊಳ್ಳಿ ಬಂದರು ಸಮಸ್ಯೆಗೆ ಇನ್ನೂ ಪರಿಹಾರ ಕಂಡು ಕೊಳ್ಳಲಾಗಿಲ್ಲ ಎಂಬ ಅಳಲು ಕೊನೆಯಾಗಬೇಕಿದೆ. ಅಳಿವೆ ಹೂಳೆತ್ತುವ ಹಾಗೂ ಜೆಟ್ಟಿ ಪುನರ್‌ ನಿರ್ಮಣ ಕಾಮಗಾರಿಯನ್ನು ಸಮರ್ಪಕ ರೀತಿಯಲ್ಲಿ ನಡೆಸಬೇಕಿದೆ.

Advertisement

ವಹಿವಾಟು ಹೆಚ್ಚಳ
ಕುಂದಾಪುರದಲ್ಲಿ 2020-21ನೇ ಸಾಲಿನಲ್ಲಿ 22,452 ಮೆ.ಟನ್‌ ಮೀನು ದೊರೆತು 324.16ಕೋ. ರೂ. ವಹಿವಾಟು ನಡೆದಿತ್ತು.2021-22ರಲ್ಲಿ 47,979 ಮೆ.ಟನ್‌ ಮೀನು ಲಭಿಸಿತ್ತು. 2022-23ರಲ್ಲಿ 70,496 ಮೆ.ಟನ್‌ ಮೀನು ದೊರೆತು 545.18 ಕೋ. ರೂ. ವ್ಯವಹಾರ ಆಗಿದೆ.

ದರ ದೊರೆತಿಲ್ಲ
ಈ ಬಾರಿ ಉತ್ತಮ ಮೀನುಗಾರಿಕೆ ನಡೆದಿದ್ದು ಕೊನೆಯ 4-5 ತಿಂಗಳು ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಮೀನಿಗೆ ಸರಿಯಾದ ದರ ದೊರೆತಿಲ್ಲ. ಹೀಗಾಗಿ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಮೀನುಗಾರಿಕೆಗೆ ಸರಿಯಾದ ಉತ್ತೇಜನ ದೊರೆಯದಿರುವುದು ಹಾಗೂ ಗಂಗೊಳ್ಳಿ ಬಂದರಿನಲ್ಲಿ ಬೋಟುಗಳು ನಿಲುಗಡೆ ಹಾಗೂ ವ್ಯವಹಾರಕ್ಕೆ ಸ್ಥಳಾವಕಾಶದ ಕೊರತೆ ಇರುವುದರಿಂದ ಮೀನುಗಾರರು ಸಮಸ್ಯೆ ಎದುರಿಸುವಂತಾಗಿದೆ.
-ಮಂಜುನಾಥ ಖಾರ್ವಿ, ಮೀನುಗಾರ, ಗಂಗೊಳ್ಳಿ

ಪರ್ಯಾಯ ಉದ್ಯೋಗ ಇಲ್ಲ
ಬೋಟುಗಳನ್ನು ಈಗಾಗಲೇ ದಡಕ್ಕೆ ಸೇರಿಸುವ ಕಾರ್ಯ ನಡೆಸಲಾಗುತ್ತಿದ್ದು, ಬೋಟ್‌ ಕೆಲಸ ಬಿಟ್ಟರೆ ಮಳೆಗಾಲದಲ್ಲಿ ಆರ್ಥಿಕ ಗಳಿಕೆಗೆ ಬೇರೆ ಉದ್ಯೋಗವಿಲ್ಲ. ಮಳೆಗಾಲದ ನಾಡದೋಣಿ ಮೀನುಗಾರಿಕೆ ನಡೆದರೆ ಮಾತ್ರ ಬಡ ಮೀನುಗಾರ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
-ಸುರೇಶ ಖಾರ್ವಿ, ಮೀನುಗಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next