Advertisement

ನಗರದ ಸ್ವಚ್ಛತೆಗೆ ಸವಾಲಾದ ವಲಸಿಗರ ತಂಡ! 

11:27 AM Aug 12, 2018 | |

ಮಹಾನಗರ: ವ್ಯಾಪಾರದ ಹೆಸರಿನಲ್ಲಿ ಅನ್ಯ ರಾಜ್ಯಗಳಿಂದ ವಲಸೆ ಬಂದಿರುವ ತಂಡವೊಂದು ನಂತೂರಿನ ಪದವು ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಬಸ್‌ನಿಲ್ದಾಣವನ್ನೇ ಅತಿಕ್ರಮಿಸಿಕೊಂಡು, ಸುತ್ತಮುತ್ತಲಿನ ಪ್ರದೇಶ ಮಲೀನವಾಗಿದೆ.

Advertisement

ಸ್ವಚ್ಛ ಮಂಗಳೂರು ಯೋಜನೆಯಡಿಯಲ್ಲಿ ಮಂಗಳೂರು ಸ್ವಚ್ಛತೆಯಲ್ಲಿ ಕ್ರಾಂತಿ ಬರೆಯುತ್ತಿದ್ದರೆ, ವಲಸಿಗರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ವಿಚಾರಿಸಲು ಹೋದ ಸಾರ್ವಜನಿಕರನ್ನೇ ಬೆದರಿಸುವ ಕೆಲಸ ತಂಡ ಮಾಡುತ್ತಿದೆ. ಇಲ್ಲಿಯ ಬಸ್‌ ಶೆಲ್ಟರ್‌ನ್ನು ದುರುಪಯೋಗಪಡಿಸಿಕೊಂಡಿದ್ದು, ಈ ತಂಡದ ವಿರುದ್ಧ ನಗರದ ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಿರುವ ಕೆಲವು ಸಂಘ -ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮೂಲತಃ ಗುಜರಾತಿನವರು ಎನ್ನುವ ಈ ತಂಡದಲ್ಲಿ ಹೆಂಗಸರು, ಮಕ್ಕಳು ಸೇರಿದಂತೆ 30ಕ್ಕಿಂತಲೂ ಅಧಿಕ ಮಂದಿ ಇದ್ದಾರೆ. ಇವರು ಬಸ್‌ನಿಲ್ದಾಣದ ಪಕ್ಕದಲ್ಲಿಯೇ ಡೇರೆ ಹಾಕಿ, ನಿಲ್ದಾಣವನ್ನೇ ಮನೆ ಮಾಡಿದ್ದು, ಅಲ್ಲೇ ಅಡುಗೆ ತಯಾರಿ, ಮಲಗುವುದು, ಬಟ್ಟೆ ಒಗೆಯುವುದು, ಸ್ನಾನ ಕೂಡ ಮಾಡುತ್ತಿದ್ದಾರೆ. ಇವರು ಸುಮಾರು ಎರಡು ತಿಂಗಳುಗ ಳಿಂದಲೂ ಇಲ್ಲೇ ಇದ್ದು, ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ವಿಪರ್ಯಾಸ.

ವಿದ್ಯಾಭ್ಯಾಸ ವಂಚಿತ ಮಕ್ಕಳು
ಈ ಕುಟುಂಬಗಳು ಕತ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದು, ಇವರೊಂದಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದು ಅವರು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ರಾತ್ರಿ ವೇಳೆ ಬಸ್‌ ನಿಲ್ದಾಣಕ್ಕೆ ಅಡ್ಡಲಾಗಿ ಡೇರೆ ಕಟ್ಟಿ ಅಲ್ಲೇ ಮಲಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಗಲು ಬಸ್‌ ನಿಲ್ದಾಣದಲ್ಲಿ ಬಟ್ಟೆಗಳನ್ನು ಒಣಗಲು ಹಾಕಿ, ತಮ್ಮ ಸಾಮಗ್ರಿಗಳನ್ನು ಇಡುತ್ತಾರೆ.

ಅತ್ಯಾಚಾರ ಯತ್ನ ಕೇಸು ದಾಖಲಿಸುವ ಬೆದರಿಕೆ
ಬಸ್‌ ನಿಲ್ದಾಣವನ್ನು ಗಲೀಜು ಮಾಡುತ್ತಿರುವ ಬಗ್ಗೆ ಸ್ಥಳೀಯರೊಬ್ಬರು ಅಲ್ಲಿದ್ದ ಜನರಲ್ಲಿ ಕೇಳಿದಾಗ ಅವರನ್ನು ದಬಾಯಿಸಿದ್ದಾರೆ. ಅಲ್ಲದೆ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಅದಲ್ಲದೇ ಇನ್ನೂ ಮುಂದೆ ಈ ಭಾಗಕ್ಕೆ ಬಂದು ದನಿ ಎತ್ತಿದ್ದರೆ ಅತ್ಯಾಚಾರ ಯತ್ನ ದೂರು ದಾಖಲಿಸುವ ಬಗ್ಗೆ ಅಲ್ಲಿನ ಮಹಿಳೆಯರು ಬೆದರಿಸಿದ್ದಾರೆ ಎನ್ನಲಾಗಿದೆ. ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಯೋಜನೆಯ ಕಾರ್ಯಕರ್ತರು ಅವರೊಂದಿಗೆ ಚರ್ಚಿಸಿದರೂ ಫಲ ಪ್ರದವಾಗಿಲ್ಲ.

Advertisement

ಮೊದಲೇ ಲೇಖನ ಪ್ರಕಟಿಸಿತ್ತು
ವಲಸೆ ಬಂದ ಕುಟುಂಬಗಳು ವಾಸಿಸುತ್ತಿರುವ ಈ ಬಸ್‌ ನಿಲ್ದಾಣದ ಬಗ್ಗೆ ಇತ್ತೀಚೆಗೆ ಉದಯವಾಣಿ ಸುದಿನದಲ್ಲಿ ರಾ.ಹೆ: ಬೇಕಾದ್ದಲ್ಲಿ ಇಲ್ಲ ಬಸ್‌ ನಿಲ್ದಾಣ! ಎಂಬ ಹೆಸರಲ್ಲಿ ಲೇಖನ ಪ್ರಕಟಿಸಿತ್ತು. ಪಾದವು ಕಾಲೇಜು ಮುಂಭಾಗದಲ್ಲಿ ಮಹಾನಗರ ಪಾಲಿಕೆ ಮಾಡಿದ್ದ ಬಸ್‌ ನಿಲ್ದಾಣವಿದ್ದರೂ ಸುಮಾರು 150 ಮೀಟರ್‌ ದೂರದಲ್ಲಿ ಹೆದ್ದಾರಿ ಪ್ರಾಧಿಕಾರ ಮತ್ತೆ ಬಸ್‌ ನಿಲ್ದಾಣ ಮಾಡಿ ದುಂದುವೆಚ್ಚ ಮಾಡುತ್ತಿದೆ ಎಂದು ಬರೆಯಲಾಗಿತ್ತು. ಇದೀಗ ಆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲುವುದು ಬಿಡಿ ಆ ಭಾಗದಲ್ಲಿ ಹೋಗುವುದು ಕೂಡ ಕಷ್ಟಕರವಾಗಿದೆ. ಇನ್ನಾದರೂ ಈ ಬಗ್ಗೆ ಸ್ಥಳೀಯಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಜರಗಿಸಬೇಕಾಗಿದೆ.

ಸ್ಥಳಕ್ಕೆ ಆರೋಗ್ಯ ನಿರೀಕ್ಷಿಕರ ಭೇಟಿ
ನಂತೂರು ಬಸ್‌ ನಿಲ್ದಾಣವನ್ನೇ ಮನೆಯಾಗಿ ಜೀವನ ನಡೆಸುತ್ತಿರುವ ತಂಡದ ಬಗ್ಗೆ ಪಾಲಿಕೆಗೂ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ. ಅವರು ಅಲ್ಲಿಂದ ತೆರಳದಿದ್ದಾರೆ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಮನಪಾ ಅಧಿಕಾರಿಯೊಬ್ಬರು ಸುದಿನಕ್ಕೆ ತಿಳಿಸಿದ್ದಾರೆ.

ಸ್ಥಳೀಯಾಡಳಿತಕ್ಕೆ ಮನವಿ
ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‌ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಹೊರ ಭಾಗಗಳಿಂದ ಬಂದ ಕೆಲವು ವಲಸಿಗರು ಸ್ವಚ್ಛತೆಯನ್ನು ಕಡೆಗಣಿಸುತ್ತಿದ್ದಾರೆ. ನಂತೂರು ಬಸ್‌ ನಿಲ್ದಾಣದ ಸ್ಥಿತಿಯ ಬಗ್ಗೆ ಮನಪಾ ಅಧಿಕಾರಿಗಳಿಗೆ ತಿಳಿಸಿದ್ದೇವೆ.
– ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next