ಬೆಂಗಳೂರು: ರಸ್ತೆಬದಿಯಲ್ಲಿ ಸಾಲುಸಾಲು ಮರಗಳನ್ನು ನೆಟ್ಟಿರುವ ಸಾಲು ಮರದ ತಿಮ್ಮಕ್ಕ ಅಂದ್ರೆ ಎಲ್ಲರಿಗೂ ಗೊತ್ತು. ಇದೇ ಮಾದರಿಯಲ್ಲಿ ಸಾವಿಗೊಂದು ಗಿಡ ನೆಟ್ಟು, ಪೋಷಿಸುತ್ತಿರುವ ಪ್ರಮೋದ್ ಚಂದ್ರಶೇಖರ್ ಕೂಡ ನಮ್ಮ ಮಧ್ಯೆ ಇರುವುದು ಗೊತ್ತೇ?
ರಾಜಧಾನಿ ಬೆಂಗಳೂರಿನ ಹೆಬ್ಟಾಳ ನಿವಾಸಿ ಪ್ರಮೋದ್ ಚಂದ್ರಶೇಖರ್ ಮತ್ತು ಸ್ನೇಹಿತರ ತಂಡವು 4 ವರ್ಷಗಳಲ್ಲಿ 50 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟಿದೆ.
ಪ್ರಮೋದ್ 2018ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ “ಬೆಂಗಳೂರು ಪರಿಸರ ವ್ಯವಸ್ಥೆ” ವಿಷಯ ಕುರಿತು ಸಂಶೋಧನೆ ನಡೆಸುತ್ತಿದ್ದಾಗ ನಗರದಲ್ಲಿ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದು ತಿಳಿಯಿತು. ಅದೇ ಸಂದರ್ಭದಲ್ಲಿ ಅವರ ಅಜ್ಜಿ ತೀರಿಕೊಂಡರು. “ಪ್ರತಿ ಸಾವಿನಲ್ಲೂ ಒಂದು ಗಿಡ ನೆಡಿ” ಎಂಬ ಘೋಷವಾಕ್ಯ ಪ್ರಮೋದ್ ಮನ ಮುಟ್ಟಿತು. ಅನಂತರ ಪ್ರಮೋದ್ ಹಾಗೂ ಸ್ನೇಹಿತರು ಸೇರಿಕೊಂಡು ನಗರದಲ್ಲಿ ಯಾವುದೇ ಪ್ರಾಣಿ ಅಥವಾ ಮನುಷ್ಯರ ಸಾವಾಗಿರುವುದು ಗಮನಕ್ಕೆ ಬಂದರೆ, ಅವರ ಹೆಸರಿನಲ್ಲಿ ಒಂದು ಗಿಡ ನೆಡುವುದನ್ನು ಅಭ್ಯಾಸ ಮಾಡಿಕೊಂಡರು.
ಕಾಲೇಜು ಮುಗಿದ ಬಳಿಕ ತಮ್ಮದೇ ಆದ ಒಂದು “ಲಾಸ್ಟ್ ರಿಪ್ಪಲ್ ಫೌಂಡೇಶನ್” ಸಂಸ್ಥೆ ಕಟ್ಟಿದ ಪ್ರಮೋದ್ ಅವರು, ನಗರದಲ್ಲಿ ನಾಯಿಗಳು ಮೃತಪಟ್ಟರೆ ಗಿಡ ನೆಡಲು ಪ್ರಾರಂಭಿಸಿದರು ಗಿಡ ನೆಟ್ಟು ಅದರ ನಿರ್ವಹಣೆಯನ್ನೂ ಮಾಡಲಾರಂಭಿಸಿದರು.
Related Articles
ಕೋವಿಡ್-19 ಸಂದರ್ಭದಲ್ಲಿ ಪಶು ಆಸ್ಪತ್ರೆ, ಶ್ವಾನ ಆಸ್ಪತ್ರೆ, ಪ್ರಾಣಿಗಳ ಎನ್ಜಿಒಗಳ ಸಹಕಾರ ಪಡೆಯಲಾ ಯಿತು. ಕೋವಿಡ್ ವೇಳೆ ಸಾವನ್ನಪ್ಪಿರುವವರ ಹೆಸರಲ್ಲಿ ನೆಟ್ಟಿರುವ ಗಿಡಗಳೇ ಹೆಚ್ಚು ಎನ್ನುತ್ತಾರೆ ಪ್ರಮೋದ್.
ಅಪಾರ್ಟ್ಮೆಂಟ್ಗಳಲ್ಲೂ ಅಭಿಯಾನ
2019ರ ಡಿಸೆಂಬರ್ನಲ್ಲಿ ಪ್ರಾರಂಭಿಸಿದ “ಲಾಸ್ಟ್ ರಿಪ್ಪಲ್ ಫೌಂಡೇಶನ್’ ದಿನ ಕಳೆದಂತೆ ವಿವಿಧ ಕಾಲೇಜು, ಎನ್ಜಿಒಗಳೊಂದಿಗೆ ಸೇರಿ ಸುಮಾರು 50 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ. ಬೆಂಗಳೂರಿನ ಜಯನಗರ, ಕಬ್ಬನ್ಪಾರ್ಕ್, ಎಂ.ಜಿ.ರಸ್ತೆ, ಯಲಹಂಕ ಸೇರಿ ಅನೇಕ ಕಡೆ ಅಪಾರ್ಟ್ಮೆಂಟ್, ಕಾಲೇಜು ಆವ ರಣ, ಬಡಾವಣೆಗಳಲ್ಲಿ ಗಿಡ ನೆಡಲಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳ ಸಾಕು ನಾಯಿ ತೀರಿಕೊಂಡ ಸಂದರ್ಭದಲ್ಲಿ ಅಲ್ಲಿ ಬೆಳೆಸಬಹುದಾದಂಥ ಕುಂಡದ ಗಿಡಗಳನ್ನು ನೀಡಲಾಗುತ್ತದೆ. ಜಾಗದ ಸಮಸ್ಯೆ ಎದುರಾದರೆ ಬಿಬಿಎಂಪಿ ಪಾರ್ಕ್ ಅಥವಾ ಶ್ಮಶಾನಗಳಲ್ಲಿ ಮಣ್ಣು ಮಾಡಿ ಅಲ್ಲಿ ಒಂದು ಗಿಡ ನೆಡಲಾಗುತ್ತದೆ.
ಗ್ರೀನ್ ವಾಲಂಟಿಯರ್ಸ್
ಬೆಂಗಳೂರಿನಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗೂ 13 ಕಾಲೇಜುಗಳ ಸಹಕಾರ ನಮ್ಮೊಂದಿ ಗಿದೆ. ಇವರಲ್ಲಿಯೇ ಗ್ರೀನ್ ವಾಲಂಟಿಯರ್ಸ್ (ಹಸಿರು ಸ್ವಯಂಸೇವಕರು) ಎಂಬ ತಂಡವನ್ನು ರಚಿಸಿದ್ದು, ಆಯಾ ಪ್ರದೇಶದಲ್ಲಿನ ಗಿಡಗಳಿಗೆ ಹದಿನೈದು ಅಥವಾ ತಿಂಗಳಿ ಗೊಮ್ಮೆ ನೀರು, ಪೋಷಕಾಂಶಗಳನ್ನು ನೀಡಿ ನಿರ್ವಹಣೆ ಮಾಡಲಾಗುತ್ತದೆ. ಇನ್ನು ಪಾರ್ಕ್ಗಳಲ್ಲಿ ನೆಟ್ಟಿರುವ ಗಿಡಗಳನ್ನು ಅಲ್ಲಿನವರೇ ಆರೈಕೆ ಮಾಡುತ್ತಾರೆ.
ಪ್ರತಿಯೊಂದು ಜೀವಿಯಲ್ಲೂ ಕುಟುಂಬ ದೊಂದಿಗೆ ಕಳೆದ ನೆನಪುಗಳು ಸಾವಿರಾರು. ಆ ಜೀವಿಯ ನೆನಪುಗಳನ್ನು ಗಿಡ ಬೆಳೆಸಿ ಜೀವಂತ ವಾಗಿ ಇರಿಸಿಕೊಳ್ಳಬೇಕು. ಗಿಡಗಳನ್ನು ನೆಟ್ಟು, ನಿರ್ವಹಿಸುವ ಮೂಲಕ ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯ.
– ಪ್ರಮೋದ್ ಚಂದ್ರಶೇಖರ್, ಲಾಸ್ಟ್ ರಿಪ್ಪಲ್ ಫೌಂಡೇಶನ್ ಸಂಸ್ಥಾಪಕರು
ಭಾರತಿ ಸಜ್ಜನ್