Advertisement

ನೀರಸ ಪಂದ್ಯಕ್ಕೆ ರೋಚಕ ಸ್ಪರ್ಶ; ಟೆಸ್ಟ್‌ ಡ್ರಾ

06:00 AM Nov 21, 2017 | Harsha Rao |

ಕೋಲ್ಕತಾ: ನೀರಸವಾಗಿ ಮುಗಿಯಲಿದ್ದ ಟೆಸ್ಟ್‌ ಪಂದ್ಯಕ್ಕೆ ರೋಚಕ ಸ್ಪರ್ಶ ನೀಡಿದ ಟೀಮ್‌ ಇಂಡಿಯಾ, ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ಗೆಲುವಿನ ಬಾಗಿಲಿನ ತನಕ ಬಂದು ಡ್ರಾಗೆ ಸಮಾಧಾನಪಟ್ಟಿದೆ. ಭಾರತದೆದುರು ಸತತ ಸೋಲಿನಿಂದ ಕಂಗೆಟ್ಟಿದ್ದ ಲಂಕಾ ಪಡೆ ಪಂದ್ಯವನ್ನು ಉಳಿಸಿಕೊಂಡು ಸಮಾಧಾನದ ನಿಟ್ಟುಸಿರೆಳೆದಿದೆ.

Advertisement

“ಈಡನ್‌ ಗಾರ್ಡನ್ಸ್‌’ ಟೆಸ್ಟ್‌ ಪಂದ್ಯದ ಅಂತಿಮ ದಿನವಾದ ಸೋಮವಾರ ಸಂಭವಿಸಿದ್ದೆಲ್ಲ ಉಲ್ಟಾಪಲ್ಟಾ. ಎಲ್ಲರೂ ಆರಂಭಕಾರ ಕೆ.ಎಲ್‌. ರಾಹುಲ್‌ ಅವರ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಸೆಂಚುರಿ ಹೊಡೆದದ್ದು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ. ಜತೆಗೆ ಕೊಹ್ಲಿ ಅವರ 50ನೇ ಅಂತಾ ರಾಷ್ಟ್ರೀಯ ಶತಕವೆಂಬ ದಾಖಲೆಯ ಲೇಪ! ಭಾರತದ ಉಳಿದ ಆಟಗಾರರೆಲ್ಲ ವೈಫ‌ಲ್ಯ ಅನುಭವಿಸಿದಾಗ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡ ಕೊಹ್ಲಿ ಅವರ ಈ ಶತಕದಾಟ ಇಡೀ ಪಂದ್ಯಕ್ಕೆ ಕಲಶಪ್ರಾಯವೆನಿಸಿತು.

ಸೆಂಚುರಿ ಪೂರ್ತಿಯಾದೊಡನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದ ಕೊಹ್ಲಿ, ಲಂಕೆಗೆ 231 ರನ್ನುಗಳ ಟಾರ್ಗೆಟ್‌ ನೀಡಿದಾಗ ಇನ್ನೊಂದು ರೀತಿಯ ಕೌತುಕ ಗರಿಗೆದರಿತು. ಆಗ ಅಳಿದುಳಿದ ಎಲ್ಲ ಲೆಕ್ಕಾಚಾರದಂತೆ ಸುಮಾರು 47 ಓವರ್‌ಗಳ ಆಟ ಬಾಕಿ ಇತ್ತು. ಎಲ್ಲಾದರೂ ಲಂಕಾ ಮುನ್ನುಗ್ಗಿ ಬಾರಿಸಿದರೆ… ಎಂಬ ಆತಂಕ ಮನೆಮಾಡಿದ್ದು ಸುಳ್ಳಲ್ಲ. ಆದರೆ ಪ್ರವಾಸಿಗರ ಮೇಲೆ ಮುಗಿಬಿದ್ದ ಭಾರತದ ವೇಗಿಗಳು ಪಟಪಟನೆ ವಿಕೆಟ್‌ ಕೀಳತೊಡಗಿದಾಗ ತುದಿ ಗಾಲಲ್ಲಿ ನಿಲ್ಲುವ ಸರದಿ ಭಾರತದ ಕ್ರಿಕೆಟ್‌ ಅಭಿಮಾನಿಗಳದ್ದಾಗಿತ್ತು. 

ಒಂದರ ಹಿಂದೊಂದರಂತೆ 7 ವಿಕೆಟ್‌ ಹಾರಿಹೋದಾಗ ಲಂಕಾ ಕತೆ ಮುಗಿದೇ ಹೋಯಿತು ಎಂಬುದು ಎಲ್ಲರ ಲೆಕ್ಕಾಚಾರ ವಾಗಿತ್ತು. ಆದರೆ ಲಂಕೆಯ ನಸೀಬು ಗಟ್ಟಿ ಇತ್ತು. ಬೆಳಕಿನ ಅಭಾವದಿಂದ 26.3 ಓವರ್‌ಗಳ ಆಟ ಮುಗಿದೊಡನೆ ಪಂದ್ಯವನ್ನು ನಿಲ್ಲಿಸಲಾಯಿತು. ಆಗ ಶ್ರೀಲಂಕಾ 7 ವಿಕೆಟ್‌ ಉದುರಿಸಿಕೊಂಡು 75 ರನ್‌ ಮಾಡಿತ್ತು. ಮುಳುಗುವವರಿಗೆ ಮಂದ ಬೆಳಕು ಆಸರೆಯಾಯಿತು. ಹೀಗೆ ನೀರಸ ಟೆಸ್ಟ್‌ ಪಂದ್ಯವೊಂದು ಅಂತಿಮ ದಿನದಾಟದಲ್ಲಿ ಅಷ್ಟೂ ಕುತೂಹಲವನ್ನು ಉಣಬಡಿಸಿದ ಹೆಗ್ಗಳಿಗೆ ಪಾತ್ರವಾಯಿತು!

ಕೊಹ್ಲಿ ಸೂಪರ್‌ ಸೆಂಚುರಿ
ಒಂದು ವಿಕೆಟಿಗೆ 171 ರನ್‌ ಮಾಡಿದಲ್ಲಿಂದ ಕೊನೆಯ ದಿನದಾಟ ಮುಂದುವರಿಸಿದ ಭಾರತಕ್ಕೆ ಲಂಕಾ ಬೌಲರ್‌ಗಳು ಅಡಿಗಡಿಗೂ ಕಾಡತೊಡಗಿದರು. ಸೀಮರ್‌ಗಳಾದ ಲಕ್ಮಲ್‌ ಹಾಗೂ ಶಣಕ ಅವರನ್ನು ಎದುರಿಸಿ ನಿಲ್ಲುವುದು ದೊಡ್ಡ ಸಮಸ್ಯೆಯಾಯಿತು. ಒಂದು ತುದಿಯಿಂದ ವಿಕೆಟ್‌ಗಳು ಉರುಳುತ್ತಲೇ ಹೋದವು. 73ರಲ್ಲಿದ್ದ ರಾಹುಲ್‌ 79 ರನ್ನಿಗೆ ನಿರ್ಗಮಿಸಿದರು. ಪೂಜಾರ 22ಕ್ಕೆ ಔಟಾದರು. ರಹಾನೆ ಖಾತೆಯನ್ನೇ ತೆರೆಯಲಿಲ್ಲ. ಜಡೇಜ (9), ಅಶ್ವಿ‌ನ್‌ (7), ಸಾಹಾ (5) ಅವರೆಲ್ಲ ಒಂದಂಕಿಯ ಗಳಿಕೆಗೇ ಆಟ ಮುಗಿಸಿದರು. 

Advertisement

ಆದರೆ ನಾಯಕ ವಿರಾಟ್‌ ಕೊಹ್ಲಿ ಮಾತ್ರ ಇದರಿಂದ ಸ್ವಲ್ಪವೂ ವಿಚಲಿತರಾಗದೆ ಲಂಕಾ ದಾಳಿಗೆ ಸಡ್ಡು ಹೊಡೆದು ನಿಂತರು; ಟೆಸ್ಟ್‌ ಬಾಳ್ವೆಯ ಆಕ್ರಮಣಕಾರಿ ಶತಕವೊಂದನ್ನು ಬಾರಿಸಿ ಈಡನ್‌ನಲ್ಲಿ ಮೆರೆದಾಡಿದರು. ಹೆರಾತ್‌ಗೆ ಎಕ್ಸ್‌ಟ್ರಾ ಕವರ್‌ ಸಿಕ್ಸರ್‌ ರುಚಿ ತೋರಿಸುವ ಮೂಲಕ ಅವರ ಈ 50ನೇ ಅಂತಾರಾಷ್ಟ್ರೀಯ ಶತಕ ಪೂರ್ತಿಗೊಂಡಿತು. ಆಗ ಭಾರತದ ಸ್ಕೋರ್‌ 8ಕ್ಕೆ 352. ಇಲ್ಲಿಗೇ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಣೆಯಾಯಿತು. 
ಕೊಹ್ಲಿ ಅವರ ಅಜೇಯ 104 ರನ್‌ 119 ಎಸೆತಗಳಿಂದ ಬಂತು. ಇದರಲ್ಲಿ 12 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಇದು ಅವರ 18ನೇ ಟೆಸ್ಟ್‌ ಶತಕ.

ಶ್ರೀಲಂಕಾ ಉರುಳಾಟ
231 ರನ್‌ ಬೆನ್ನಟ್ಟಲು ಇಳಿದ ಲಂಕೆಯನ್ನು ಭಾರತದ ಸೀಮರ್‌ಗಳು, ಅದರಲ್ಲೂ ಭುವನೇಶ್ವರ್‌ ಕುಮಾರ್‌ ಗೋಳುಹೊಯ್ಯತೊಡಗಿದರು. ಮೊದಲ ಓವರಿನಲ್ಲೇ ಸಮರವಿಕ್ರಮ ವಿಕೆಟ್‌ ಉದುರಿತು. ಭುವಿಯ ಮುಂದಿನ ಓವರಿನಲ್ಲೇ ಕರುಣರತ್ನೆ ವಿಕೆಟ್‌ ಬಿತ್ತು. ಹೀಗೆ ತಿರಿಮನ್ನೆ, ಮ್ಯಾಥ್ಯೂಸ್‌, ಚಂಡಿಮಾಲ್‌, ಡಿಕ್ವೆಲ್ಲ, ಪೆರೆರ ಅವರೆಲ್ಲ ಪೆವಿಲಿಯನ್‌ ಸೇರಿದಾಗ ಲಂಕೆಯ ಸಂಕಟ ಹೇಳತೀರದಾಗಿತ್ತು. ವಿಪರ್ಯಾಸವೆಂದರೆ, ಬೆಳಕು ಮಂದವಾಗುತ್ತಿದ್ದಂತೆ ಲಂಕೆಯ ಉಳಿವಿನ ಆಸೆ ಉಜ್ವಲಗೊಂಡದ್ದು!

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    172
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    294
ಭಾರತ ದ್ವಿತೀಯ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌    ಬಿ ಲಕ್ಮಲ್‌    79
ಶಿಖರ್‌ ಧವನ್‌    ಸಿ ಡಿಕ್ವೆಲ್ಲ ಬಿ ಶಣಕ    94
ಚೇತೇಶ್ವರ್‌ ಪೂಜಾರ    ಸಿ ಪೆರೆರ ಬಿ ಲಕ್ಮಲ್‌    22
ವಿರಾಟ್‌ ಕೊಹ್ಲಿ    ಔಟಾಗದೆ    104
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಲಕ್ಮಲ್‌    0
ರವೀಂದ್ರ ಜಡೇಜ    ಸಿ ತಿರಿಮನ್ನೆ ಬಿ ಪೆರೆರ    9
ಆರ್‌. ಅಶ್ವಿ‌ನ್‌    ಬಿ ಶಣಕ    7
ವೃದ್ಧಿಮಾನ್‌ ಸಾಹಾ    ಸಿ ಸಮರವಿಕ್ರಮ ಬಿ ಶಣಕ    5
ಭುವನೇಶ್ವರ್‌ ಕುಮಾರ್‌    ಸಿ ಪೆರೆರ ಬಿ ಗಾಮಗೆ    8
ಮೊಹಮ್ಮದ್‌ ಶಮಿ    ಔಟಾಗದೆ    12
ಇತರ        12
ಒಟ್ಟು (8 ವಿಕೆಟಿಗೆ ಡಿಕ್ಲೇರ್‌)    352
ವಿಕೆಟ್‌ ಪತನ:
1-166, 2-192, 3-213, 4-213, 5-249, 6-269, 7-281, 8-321.
ಬೌಲಿಂಗ್‌:
ಸುರಂಗ ಲಕ್ಮಲ್‌        24.4-4-93-3
ಲಹಿರು ಗಾಮಗೆ        23-2-97-1
ದಸುನ್‌ ಶಣಕ        22-1-76-3
ದಿಲುÅವಾನ್‌ ಪೆರೆರ        13-2-49-1
ರಂಗನ ಹೆರಾತ್‌        6-1-29-0
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ: 231 ರನ್‌)

ಸದೀರ ಸಮರವಿಕ್ರಮ    ಬಿ ಭುವನೇಶ್ವರ್‌    0
ದಿಮುತ್‌ ಕರುಣರತ್ನೆ     ಬಿ ಶಮಿ    1
ಲಹಿರು ತಿರಿಮನ್ನೆ    ಸಿ ರಹಾನೆ ಬಿ ಭುವನೇಶ್ವರ್‌    7
ಏಂಜೆಲೊ ಮ್ಯಾಥ್ಯೂಸ್‌    ಎಲ್‌ಬಿಡಬ್ಲ್ಯು ಯಾದವ್‌    12
ದಿನೇಶ್‌ ಚಂಡಿಮಾಲ್‌    ಬಿ ಶಮಿ    20
ನಿರೋಷನ್‌ ಡಿಕ್ವೆಲ್ಲ    ಎಲ್‌ಬಿಡಬ್ಲ್ಯು ಭುವನೇಶ್ವರ್‌    27
ದಸುನ್‌ ಶಣಕ    ಔಟಾಗದೆ    6
ದಿಲುÅವಾನ್‌ ಪೆರೆರ    ಬಿ ಭುವನೇಶ್ವರ್‌    0
ರಂಗನ ಹೆರಾತ್‌    ಔಟಾಗದೆ    0
ಇತರ        2
ಒಟ್ಟು  (7 ವಿಕೆಟಿಗೆ)        75
ವಿಕೆಟ್‌ ಪತನ: 1-0, 2-2, 3-14, 4-22, 5-69, 6-69, 7-75.
ಬೌಲಿಂಗ್‌:

ಭುವನೇಶ್ವರ್‌ ಕುಮಾರ್‌        11-8-8-4
ಮೊಹಮ್ಮದ್‌ ಶಮಿ        9.3-4-34-2
ಉಮೇಶ್‌ ಯಾದವ್‌        5-0-25-1
ರವೀಂದ್ರ ಜಡೇಜ        1-0-7-0
ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌
ದ್ವಿತೀಯ ಟೆಸ್ಟ್‌: ನಾಗ್ಪುರ (ನ. 24-28)

Advertisement

Udayavani is now on Telegram. Click here to join our channel and stay updated with the latest news.

Next