Advertisement

ಕೊಟ್ಟಿಗೆಹಾರ ಮುಖ್ಯವೃತ್ತದಲ್ಲಿ ಅನುಮಾನ ಮೂಡಿಸಿದ ರಕ್ತದ ಕಲೆ

10:53 PM Mar 10, 2023 | Team Udayavani |

ಕೊಟ್ಟಿಗೆಹಾರ:ಕೊಟ್ಟಿಗೆಹಾರ ವೃತ್ತದ ಬಳಿ ರಸ್ತೆಯ ಮೇಲೆ ರಕ್ತದ ಕಲೆಯ ಗುರುತುಗಳು ಕಂಡು ಬಂದಿದ್ದು ಅನುಮಾನಕ್ಕೆ ಕಾರಣವಾಗಿದೆ. ಕೊಟ್ಟಿಗೆಹಾರದಲ್ಲಿ ನಾಲ್ಕೈದು ಅಡಿ ವಿಸ್ತಾರದಲ್ಲಿ ರಕ್ತದ ಕಲೆ ಕಂಡು ಬಂದಿದ್ದು ರಕ್ತದ ಗುರುತು ಕಾಣದಿರುವ ಹಾಗೇ ಸಗಣಿಯಿಂದ ಸಾರಿಸಲಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

Advertisement

ಗುರುವಾರ ರಾತ್ರಿ ಸಮಯದಲ್ಲಿ ಈ ನಡೆದ ಯಾವುದೋ ಘಟನೆಯಿಂದ ರಸ್ತೆಯಲ್ಲಿ ರಕ್ತದ ಕಲೆ ಮೂಡಿದೆ. ಕೊಟ್ಟಿಗೆಹಾರ ಮುಖ್ಯವೃತ್ತದ ಬಳಿ ಅಂಗಡಿ ಮುಂಗಟ್ಟುಗಳಿದ್ದು ರಾತ್ರಿ 10 ರವರೆಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ರಾತ್ರಿ 11 ಗಂಟೆಯವರೆಗೂ ಜನಸಂಚಾರವಿರುತ್ತದೆ. ಬೆಳಿಗ್ಗೆ 5 ಗಂಟೆಗೆ ಅಂಗಡಿ ಮುಂಗಟ್ಟುಗಳು ತೆರೆಯುತ್ತವೆ. ಈ ಅಂಗಡಿ ಮುಂಗಟ್ಟುಗಳ ವರ್ತಕರ ಗಮನಕ್ಕೆ ಬಾರದಂತೆ ಈ ಘಟನೆ ನಡೆದಿದ್ದು ನಡುರಾತ್ರಿ ಯಾವುದೋ ಘಟನೆಯಿಂದ ರಸ್ತೆಯಲ್ಲಿ ರಕ್ತ ಹರಿದಿದ್ದು ರಕ್ತ ಹರಿದಿರುವುದು ತಿಳಿಯದಿರಲು ಸಗಣಿಯನ್ನು ರಕ್ತದ ಮೇಲೆ ಸಾರಿಸಲಾಗಿದೆ. ಆದರೂ ಅಲ್ಲಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ನಿಷ್ಕ್ರೀಯಗೊಂಡ ಸಿಸಿ ಕ್ಯಾಮರಾ
ಕೊಟ್ಟಿಗೆಹಾರ ಮುಖ್ಯ ವೃತ್ತದಲ್ಲಿ ಸಿಸಿಕ್ಯಾಮರಾ ಇದ್ದರೂ ನಿಷ್ಕ್ರೀಯಗೊಂಡಿರುವುದರಿಂದ ರಕ್ತದ ಹಿಂದಿನ ಸತ್ಯವನ್ನು ತಿಳಿಯುವುದು ಸವಾಲಾಗಿ ಪರಿಣಮಿಸಿದೆ. ಕೊಟ್ಟಿಗೆಹಾರದ ಸಮೀಪದಲ್ಲಿರುವ ಚಾರ್ಮಾಡಿ ಘಾಟ್‍ನಲ್ಲಿ ಮೃತದೇಹವನ್ನು ತಂದು ಹಾಕುವುದು ಹೆಚ್ಚಾಗಿದ್ದು ತಿಂಗಳ ಹಿಂದೆಯಷ್ಟೇ ಮೃತದೇಹವೊಂದನ್ನು ಘಾಟ್‍ಗೆ ತಂದು ಹಾಕಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಅನುಮಾನಾಸ್ಪದವಾಗಿ ಕೊಟ್ಟಿಗೆಹಾರ ವೃತ್ತದಲ್ಲಿ ರಕ್ತದ ಕಲೆಗಳು ಕಂಡು ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.

ದನಗಳ್ಳರ ಕೈವಾಡ ಶಂಕೆ?
ಕೊಟ್ಟಿಗೆಹಾರ ಬಣಕಲ್ ಭಾಗದಲ್ಲಿ ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿದ್ದು ಕೊಟ್ಟಿಗಹಾರದಲ್ಲಿ ರಾತ್ರಿ ಸಮಯದಲ್ಲಿ ದನಗಳ್ಳತನಗಳು ನಡೆಯುವುದು ಕೂಡ ಹೆಚ್ಚಿದ್ದು ರಕ್ತದ ಕಲೆಗಳ ಹಿಂದೆ ದನಗಳ್ಳರ ಕೈವಾಡ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಸಗಣಿ ಮತ್ತು ನೀರಿನಿಂದ ರಕ್ತದ ಕಲೆಗಳನ್ನು ತೊಳೆದು ಹಾಕಲು ಯತ್ನಿಸಿರುವುದು ಅವೇಳೆಯಲ್ಲಿ ಅಕ್ಕಪಕ್ಕದಲ್ಲಿ ಎಲ್ಲಿಯೂ ನೀರು ಸಿಗದ ಕಡೆಗಳಲ್ಲಿ ನೀರು ಮತ್ತು ಸಗಣಿಯನ್ನು ಬಳಸಿರುವುದು ಸ್ಥಳೀಯರ ಸಹಕಾರದಿಂದ ಯಾವುದೋ ಘಟನೆ ನಡೆದಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ಥಳಕ್ಕೆ ಪೋಲಿಸರ ಭೇಟಿ
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಣಕಲ್ ಠಾಣೆ ಎಎಸ್‍ಐ ಶಶಿ ಹಾಗೂ 112 ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ. ರಕ್ತದ ಮಾದರಿಯನ್ನು ಸಂಗ್ರಹಿಸಿ ಮನುಷ್ಯ ಅಥವಾ ಜಾನುವಾರಿನ ರಕ್ತವೇ ಎಂಬುದನ್ನು ಪತ್ತೆ ಹಚ್ಚು ಅಗತ್ಯವಿದೆ.

Advertisement

ಸಿಸಿ ಕ್ಯಾಮರಾ ಅಳವಡಿಲು ಆಗ್ರಹ
ಹಲವು ಯಾತ್ರಾ ಸ್ಥಳಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಕೊಟ್ಟಿಗೆಹಾರದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ಹಿಂದೆಯೂ ಕೂಡ ಕೆಲವೊಂದು ಅಪರಾಧ ಚಟುವಟಿಕೆಗಳು ನಡೆದಿದ್ದು ಕೊಟ್ಟಿಗೆಹಾರದಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇರುವುದು ಅಪರಾಧ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದೆ. ಸಂಬಂಧಪಟ್ಟವರು ಸಿಸಿಕ್ಯಾಮರಾವನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next