Advertisement

ಹೇಳ ಹೆಸರಿಲ್ಲದಂತಾಗುತ್ತಿದೆ ಬೆಂಬಲ ಬೆಲೆ ಕೇಂದ್ರ!

02:32 PM Nov 19, 2022 | Team Udayavani |

ಧಾರವಾಡ: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಆರಂಭಿಸಿರುವ ಖರೀದಿ ಕೇಂದ್ರಗಳಲ್ಲಿ ನೋಂದಣಿ, ಖರೀದಿ ಪ್ರಕ್ರಿಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದ್ದು, ರೈತರಿಂದ ಸ್ಪಂದನೆಯೂ ಕಡಿಮೆಯಾಗುತ್ತಿದೆ.

Advertisement

ಸೆ.1ರಿಂದಲೇ ಹೆಸರು ಬೆಳೆ ಖರೀದಿಗಾಗಿ 18 ಕೇಂದ್ರ ಹಾಗೂ ಉದ್ದು ಬೆಳೆ ಖರೀದಿಗಾಗಿ ಮೂರು ಕೇಂದ್ರ ಸ್ಥಾಪಿಸಿದ್ದು, ಅ. 13ಕ್ಕೆ ರೈತರ ನೋಂದಣಿ ಮುಕ್ತಾಯಗೊಂಡಿದೆ. ಇದೀಗ ನ.27ರ ವರೆಗೆ ಖರೀದಿ ಪ್ರಕ್ರಿಯೆ ಸಾಗಿದ್ದು, ಈ ಅವಧಿಯೂ ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಅ.13ಕ್ಕೆ ಮುಕ್ತಾಯವಾಗಿರುವ ರೈತರ ನೋಂದಣಿಯಲ್ಲಿ ಶೇ.50 ರೈತರಿಂದಲೂ ಈವರೆಗೆ ಹೆಸರು ಕಾಳು ಖರೀದಿಯಾಗಿಲ್ಲ. ಇನ್ನು ಉದ್ದು ಬೆಳೆದ ರೈತರಂತೂ ಖರೀದಿ ಕೇಂದ್ರಗಳತ್ತ ಹೆಜ್ಜೆಯನ್ನೇ ಇಟ್ಟಿಲ್ಲ. ಈ ವರ್ಷದಿಂದ ಆರಂಭಿಸಿರುವ ಸೋಯಾಬೀನ್‌ ಬೆಳೆ ಮಾರಾಟಕ್ಕೂ ರೈತರಿಂದ ಸ್ಪಂದನೆ ಸಿಗುವ ನಿರೀಕ್ಷೆ ಇಲ್ಲದಂತಾಗಿದೆ.

ಹೆಸರು-ಉದ್ದು ಖರೀದಿ: 2018ರಲ್ಲಿ 27 ಸಾವಿರ ರೈತರು ನೋಂದಣಿ ಮಾಡಿಸಿದ್ದ ಜಿಲ್ಲೆಯಲ್ಲಿಯೇ 2019ರಲ್ಲಿ ತೆರೆದಿದ್ದ 8 ಖರೀದಿ ಕೇಂದ್ರಗಳಲ್ಲಿ ಕೇವಲ 3169 ರೈತರು ನೋಂದಣಿ ಮಾಡಿಸಿದ್ದರು. 2020ರಲ್ಲಿ ತೆರೆದಿದ್ದ 9 ಖರೀದಿ ಕೇಂದ್ರಗಳಲ್ಲಿ ನೋಂದಣಿಯಾಗಿದ್ದ 546 ರೈತರು ಕೂಡ ತಮ್ಮ ಬೆಳೆ ಮಾರಾಟ ಮಾಡದೇ ದೂರ ಉಳಿದುಬಿಟ್ಟರು. 2021ರಲ್ಲಿ 16 ಹೆಸರು ಖರೀದಿ ಕೇಂದ್ರ ತೆರೆಯಲಾಗಿತ್ತು. ನೋಂದಣಿ ನಿರೀಕ್ಷೆಯಷ್ಟು ಕಂಡುಬಂದರೂ ಮಳೆಯಿಂದ ಬೆಳೆ ಹಾನಿ, ಹೆಸರು ಬೆಳೆಯ ಗುಣಮಟ್ಟದ ಕೊರತೆ ಹಾಗೂ ತೇವಾಂಶ ಹೆಚ್ಚಳ ಪರಿಣಾಮ ಖರೀದಿಯೇ ಆಗಿರಲಿಲ್ಲ.

ಇದೀಗ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಆರಂಭಿಸಿರುವ 18 ಖರೀದಿ ಕೇಂದ್ರಗಳಲ್ಲಿ 13,804 ರೈತರು ಹೆಸರು ಕಾಳು ಮಾರಾಟಕ್ಕೆ ನೋಂದಣಿ ಮಾಡಿಸಿದ್ದರು. ಆದರೆ ನ.17 ವರೆಗೆ 4137 ರೈತರು ಮಾರಾಟ ಮಾಡಿದ್ದು, ಈವರೆಗೆ 47,994 ಕ್ವಿಂಟಲ್‌ ಖರೀದಿಯಾಗಿದೆ. ಅದೇ ರೀತಿ ಮೂರು ಉದ್ದು ಬೆಳೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದ 72 ರೈತರ ಪೈಕಿ ಯಾರೂ ಕಾಳು ಮಾರಾಟ ಮಾಡಿಲ್ಲ.

ಸೋಯಾಬೀನ್‌ಗೂ ಸಿಗದ ಸ್ಪಂದನೆ: ಜಿಲ್ಲೆಯಲ್ಲಿ ಈ ವರ್ಷದಿಂದಲೇ ಬೆಂಬೆಲೆಯಡಿ ಸೋಯಾಬೀನ್‌ ಬೆಳೆ ಖರೀದಿಗಾಗಿ ಧಾರವಾಡ, ಉಪ್ಪಿನಬೆಟಗೇರಿ, ಕಲಘಟಗಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ.ಪ್ರತಿ ಕ್ವಿಂಟಲ್‌ಗೆ 4,300 ರೂ. ಬೆಂಬೆಲೆ ನಿಗದಿ ಮಾಡಲಾಗಿದ್ದು, ಡಿ.23 ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. 2023 ಫೆ.6 ವರೆಗೆ ಖರೀದಿ ಪ್ರಕ್ರಿಯೆ ಇರಲಿದೆ. ಆದರೆ ಬಹುತೇಕ ರೈತರು ಈಗಾಗಲೇ ಸೋಯಾಬೀನ್‌ ಬೆಳೆ ಮಾರಾಟ ಮಾಡಿದ್ದು, ಇದಲ್ಲದೇ ಬೆಂಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಅಧಿಕ ಬೆಲೆ ಇರುವ ಕಾರಣ ಈವರೆಗೂ ನೋಂದಣಿಗೆ ರೈತರು ಮನಸ್ಸು ಮಾಡಿಲ್ಲ.

Advertisement

ಹೆಸರು ಖರೀದಿ ಅವಧಿ ವಿಸ್ತರಿಸಲು ರೈತ ಮುಖಂಡರ ಒತ್ತಾಯ
ಜಿಲ್ಲೆಯಲ್ಲಿ ಬಿತ್ತನೆಯಾದ ಹೆಸರು ಬೆಳೆಯ ಪೈಕಿ ಅಧಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಮೋಡ ಕವಿದ ವಾತಾವರಣದಿಂದ ಹೆಸರು ಕಾಳಿನ ತೇವಾಂಶ ಹೆಚ್ಚಳದಿಂದ ಬೆಂಬೆಲೆಯಡಿ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಇದೀಗ ತೇವಾಂಶ ಪ್ರಮಾಣ ಸರಿ ಪ್ರಮಾಣದಲ್ಲಿ ಬರುತ್ತಿರುವ ಕಾರಣ ರೈತರು ಸಹ ಖರೀದಿ ಕೇಂದ್ರಗಳಲ್ಲಿ ಹೆಸರು ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಖರೀದಿ ಪ್ರಕ್ರಿಯೆ ನ.27ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ಅವಧಿ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ರೈತ ಸಮುದಾಯದಿಂದ ಕೇಳಿ ಬಂದಿದೆ. ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತಕ್ಕೂ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖರೀದಿಯಾಗಿದ್ದು, ನ.27ಕ್ಕೆ ಖರೀದಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಈ ಅವಧಿ ವಿಸ್ತರಣೆಗಾಗಿ ಮನವಿ ಮಾಡಲಾಗಿದೆ. ಇನ್ನು ಉದ್ದು ಖರೀದಿಗಾಗಿ 72 ಜನ ರೈತರು ನೋಂದಣಿ ಮಾಡಿದ್ದರೂ ಈವರೆಗೂ ಯಾರೂ ಮಾರಾಟ ಮಾಡಿಲ್ಲ. ಇದೀಗ ಆರಂಭಿಸಿರುವ ಸೋಯಾಬೀನ್‌ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಆರಂಭಿಸಿದ್ದು, ಆದರೆ ಮಾರುಕಟ್ಟೆಯಲ್ಲಿಯೇ ಅಧಿಕ ಬೆಲೆ ಇರುವ ಕಾರಣ ಯಾರೂ ನೋಂದಣಿ ಮಾಡಿಸಿಲ್ಲ.
ವಿನಯ್‌ ಪಾಟೀಲ, ಹುಬ್ಬಳ್ಳಿ ಶಾಖಾ
ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ
ಮಾರಾಟ ಮಹಾಮಂಡಳ

ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next