ಗುಳೇದಗುಡ್ಡ: ಇತಿಹಾಸವನ್ನು ವಸ್ತುನಿಷ್ಠವಾಗಿ ಹೇಳುವ ಮೂಲಕ ದೇಶಾಭಿಮಾನದ ಕಿಚ್ಚನ್ನು ಲಾವಣಿಗಳು ಹಚ್ಚುತ್ತವೆ. ಹೀಗಾಗಿ ಐತಿಹಾಸಿಕ ಲಾವಣಿಗಳ ಅಧ್ಯಯನ ಅಗತ್ಯವಾಗಿದೆ ಎಂದು ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಟಿ.ಎಂ.ಭಾಸ್ಕರ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲಿ ಶ್ರೀ ಜ.ಗು.ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಚಾರಿತ್ರಿಕ ಲಾವಣಿಗಳು ಕುರಿತ ಪ್ರಚಾರೋಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ 1947ಕ್ಕಿತ ಮುಂಚೆ ಸ್ವಾತಂತ್ರ್ಯ ಹೋರಾಟಕ್ಕೆ ಲಾವಣಿಗಳು ಪ್ರೇರಣೆಯಾಗಿದ್ದವು ಎಂದರು. ಪ್ರೊ| ಬಿ.ಆರ್. ಪೊಲೀಸ್ ಪಾಟೀಲ ಚಾರಿತ್ರಿಕ ಲಾವಣಿಗಳ ಕುರಿತು ಪ್ರಚಾರೋಪನ್ಯಾಸ ನೀಡಿ ಮಾತನಾಡಿ, ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಲಾವಣಿಗಳು ಪ್ರೇರಣೆ ಒದಗಿಸುತ್ತವೆ. ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಹಲವು ಸಂಸ್ಥಾನಗಳು ಮತ್ತು ಹೋರಾಟಗಾರರ ಜೀವನ ಕಥೆಯನ್ನು ಹೇಳುತ್ತವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ 1008 ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ಬೆವರಿನ ಬಹುದೊಡ್ಡ ಸಮುದಾಯ ಜನಪದರದ್ದಾಗಿದೆ. ಇವರು ನಿಸ್ವಾರ್ಥ ಕಾಯಕ ಜೀವಿಗಳಾಗಿದ್ದು. ಬದುಕಿನ ಭಾಗವಾಗಿ ಜನಪದ ಹಾಡುಗಳನ್ನು ಕುಟ್ಟುವಾಗ, ಬೀಸುವಾಗ ಹಂತಿ ಹೊಡೆಯುವಾಗ, ಸೀಮಂತ, ಮದುವೆ ಹಬ್ಬ ಹರಿದಿನಗಳಲ್ಲಿ ಎಲ್ಲ ತರದ ಹಾಡುಗಳನ್ನು ಹಾಡುತ್ತಿದ್ದರು. ಐತಿಹಾಸಿಕ ಲಾವಣಿಗಳು ದೇಶದಲ್ಲಿ ಜರುಗಿದ ಐತಿಹಾಸಿಕ ಸಂಗತಿ ಹೇಳುತ್ತಿರುವುದೇ ನಮ್ಮ ಸಂಸ್ಕೃತಿಯಾಗಿದೆ ಎಂದರು. ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಾ| ಎಚ್.ಎಸ್.ಘಂಟಿ ಸ್ವಾಗತಿಸಿ-ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಡಾ| ಸಿ.ಎಂ.ಜೋಶಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ| ಚಂದ್ರಶೇಖರ ಕಾಳನ್ನವರ, ಪ್ರೊ| ಎಸ್.ಬಿ. ಬರಗುಂಡಿ, ಡಾ| ಸಣ್ಣವೀರಣ್ಣ ಡಿ., ಡಾ| ಭೀಮನಗೌಡ ಪಾಟೀಲ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.