ಬೆಂಗಳೂರು: ಮದ್ಯ ಸೇವಿಸಿರುವುದಕ್ಕೆ ಕಾಲೇಜಿನ ಒಳಗಡೆ ಬಿಡುವುದಿಲ್ಲ ಎಂದ ಭದ್ರತಾ ಸಿಬ್ಬಂದಿಯನ್ನು ನೂರಾರು ವಿದ್ಯಾರ್ಥಿಗಳ ಎದುರೇ ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಉತ್ತರ ಭಾರತ ಮೂಲದ ಜೈ ಕಿಶೋರ್ ರಾಯ್(40) ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಕೃತ್ಯ ಎಸಗಿದ ಅಸ್ಸಾಂ ಮೂಲದ ಭಾರ್ಗವ್(20) ಎಂಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಬುಧವಾರ ಮಧ್ಯಾಹ್ನ ಅಮೃತಹಳ್ಳಿಯ ಕೆಂಪಾಪುರದಲ್ಲಿರುವ ಸಿಂಧಿ ಕಾಲೇಜು ಆವರಣದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಅಸ್ಸಾಂ ಮೂಲದ ಭಾರ್ಗವ್, ಕೆಂಪಾಪುರದ ಸಿಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಮನೋಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಸಮೀಪದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇನ್ನು ಜೈ ಕಿಶೋರ್ ರಾಯ್ ಕೂಡ ಉತ್ತರ ಭಾರತ ಮೂಲದವರಾಗಿದ್ದು, ಕಾಲೇಜಿನಲ್ಲಿ ಕೆಲ ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿ ದ್ದರು. ಕಾಲೇಜಿನಲ್ಲಿ ಹೆಚ್ಚು ಶಿಸ್ತಿನಿಂದ ಇರುತ್ತಿದ್ದ ಜೈ ಕಿಶೋರ್ ರಾಯ್, ವಿದ್ಯಾರ್ಥಿಗಳ ಬಳಿ ಸ್ವಲ್ಪ ಕಟ್ಟು ನಿಟ್ಟಿ ನಲ್ಲೇ ವರ್ತನೆ ತೋರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ನಿತ್ಯ ಕುಡಿದು ಬರುತ್ತಿದ್ದ ಭಾರ್ಗವ್: ಆರೋಪಿ ಭಾರ್ಗವ್ ಆರಂಭದಲ್ಲಿ ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಮದ್ಯ ಸೇವಿಸುತ್ತಿದ್ದ. ಆ ನಂತರ ಕಾಲೇಜಿಗೆ ಬರುವಾಗಲೇ ಮದ್ಯ ಸೇವಿಸಿ ಬರುವು ದನ್ನು ರೂಢಿಸಿಕೊಂಡಿದ್ದನು. ಅದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಕಾಲೇಜಿನ ಉಪನ್ಯಾಸಕರಿಗೆ ದೂರು ನೀಡಿದ್ದರು. ಹೀಗಾಗಿ ಒಂದೆರಡು ಬಾರಿ ಉಪನ್ಯಾಸಕರು, ಭಾರ್ಗವ್‌ಗೆ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಬುಧವಾರ ಕಾಲೇಜಿನಲ್ಲಿ ವಾರ್ಷಿಕೋತ್ಸೋವ ಕಾರ್ಯಕ್ರಮ ಇತ್ತು. ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಆರೋಪಿ ಕೂಡ ಭಾಗಿಯಾಗಿದ್ದು, ಅಪರಾಹ್ನ 12 ಗಂಟೆ ಸುಮಾರಿಗೆ ಕಾಲೇಜಿನಿಂದ ಹೊರಗಡೆ ಹೋಗಲು ಗೇಟ್ ಬಳಿ ಬಂದಿದ್ದಾನೆ. ಆಗ ಸೆಕ್ಯೂರಿಟಿ ಗಾರ್ಡ್, ಮದ್ಯ ಸೇವಿಸಿ ವಾಪಸ್ ಬಂದರೆ, ಒಳಗಡೆ ಪ್ರವೇಶವಿಲ್ಲ ಎಂದು ಎಚ್ಚರಿಕೆ ನೀಡಿ ಗೇಟ್ ತೆರೆದಿದ್ದಾರೆ. ಆದರೆ, ಮಧ್ಯಾಹ್ನ 2 ಗಂಟೆಗೆ ಮದ್ಯ ಸೇವಿಸಿ ಬಂದ ಭಾರ್ಗವ್, ಗೇಟ್ ತೆರೆಯುವಂತೆ ಸೆಕ್ಯೂರಿಟಿ ಗಾರ್ಡ್‌ಗೆ ಹೇಳಿದ್ದಾನೆ. ಆದರೆ, ಆರೋಪಿ ಕುಡಿದಿದ್ದರಿಂದ ಪ್ರವೇಶ ನಿರಾಕರಿಸಿದ್ದು, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ಗೆ ಚಾಕುವಿನಿಂದ ಎದೆ, ಹೊಟ್ಟೆ ಭಾಗಕ್ಕೆ 10ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ಹತ್ಯೆಗಾಗಿಯೇ ಹೊಸ ಚಾಕು: ಖರೀದಿಸಿದ ಆರೋಪಿ ಸೆಕ್ಯೂರಿಟಿ ಗಾರ್ಡ್‌ನನ್ನು ಕೊಲೆಗೈಯಲೆಂದು ಆರೋಪಿ ಭಾರ್ಗವ್ 60 ರೂ. ಕೊಟ್ಟು ಹೊಸ ಚಾಕು ಖರೀದಿಸಿ ಮತ್ತೆ ಕಾಲೇಜು ಬಳಿ ಬಂದಿದ್ದನು. ನಂತರ ಸೆಕ್ಯೂರಿಟಿ ಗಾರ್ಡ್‌ಗೆ ಒಳಗಡೆ ಬಿಡುವಂತೆ ಚಾಕು ತೋರಿಸಿ ಕೇಳಿಕೊಂಡಿದ್ದಾನೆ. ಆಗಲೂ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅದರಿಂದ ಇನ್ನಷ್ಟು ಕೋಪಗೊಂಡ ಆರೋಪಿ, ಮದ್ಯದ ಅಮಲಿನಲ್ಲೇ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆರೋಪಿ ಭಾರ್ಗವ್ ನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.