Advertisement

ಪ್ರಬಲ ಹೋರಾಟವೊಂದೇ ದಾರಿ; ಕೆ.ವಿ.ಭಟ್‌

06:06 PM Jul 04, 2022 | Team Udayavani |

ಬಳ್ಳಾರಿ: 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, 4 ಸಂಹಿತೆಗಳಾಗಿ ಪರಿವರ್ತಿಸುವ ಮೂಲಕ ಬಂಡವಾಳಶಾಹಿಗಳು ಕಾರ್ಮಿಕರನ್ನು ಮತ್ತಷ್ಟು ಶೋಷಿಸಲು ಅನುಕೂಲವಾಗಲಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಗಾಂಧಿ ಭವನದಲ್ಲಿ ಎಐಯುಟಿಯುಸಿ ಸಂಘಟನೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಳ್ಳಾರಿ-ವಿಜಯನಗರ ಜಿಲ್ಲಾ ಕಾರ್ಮಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರ 44 ಕಾನೂನು ತಿದ್ದುಪಡಿ ಮಾಡಿ 4 ಸಂಹಿತೆಗಳನ್ನಾಗಿ ಪರಿವರ್ತಿಸುವ ಮೂಲಕ ಬಂಡವಾಳಶಾಹಿಗಳು ಕಾರ್ಮಿಕರನ್ನು ಮತ್ತಷ್ಟು ಶೋಷಿಸಲು, ಕಾರ್ಮಿಕರ ಸಂಘಟನೆ ಕಟ್ಟಿಕೊಳ್ಳುವ ಹಾಗೂ ಹೋರಾಟದ ಹಕ್ಕನ್ನು ಕಸಿದುಕೊಳ್ಳಲಿದೆ.

ಇನ್ನೊಂದೆಡೆ ಜನರ ತೆರಿಗೆ ಹಣದಿಂದ ಕಟ್ಟಿದ ಸಾರ್ವಜನಿಕ ಉದ್ಯಮಗಳನ್ನು ಬಿಡಿಗಾಸಿಗೆ ಅಂಬಾನಿ, ಅದಾನಿಗಳಂತಹ ಮಾಲೀಕರಿಗೆ ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಂತೆ ಬಿಜೆಪಿ ಸರ್ಕಾರವೂ ಸಹ ಕಾರ್ಪೋರೇಟ್‌ ಮಾಲೀಕರ ಕೈಗೊಂಬೆಯಾಗಿದೆ. ಹಾಗಾಗಿ ಇಂತಹ ನೀತಿಗಳನ್ನು ಜಾರಿಗೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಹೋರಾಟವೊಂದೇ ಕಾರ್ಮಿಕರ ಮುಂದಿರುವ ದಾರಿ ಎಂದು ತಿಳಿಸಿದರು.

ಮುಖ್ಯ ಭಾಷಣಕಾರ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್‌ ಮಾತನಾಡಿ, ದೇಶಾದ್ಯಂತ ಇಂದು ಕೋಮು ವೈಷಮ್ಯ ಬಿತ್ತುವ ಶಕ್ತಿಗಳಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡುತ್ತಿವೆ. ಕಾರ್ಮಿಕರ ಹಾಗೂ ಜನ ಸಾಮಾನ್ಯರ ನಡುವಿನ ಸಾಮರಸ್ಯ, ಸೌಹಾರ್ದತೆ, ಒಗ್ಗಟ್ಟನ್ನು ಮುರಿದು, ಪರಸ್ಪರ ವಿಷಕಾರುವ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.

Advertisement

ಆದರೆ, ಬೆಲೆ ಏರಿಕೆ, ನಿರುದ್ಯೋಗ, ಕೆಲಸದ ಅಭದ್ರತೆ, ಕಾರ್ಮಿಕರಿಗೆ ನ್ಯಾಯಸಮ್ಮತ ಸೌಲಭ್ಯಗಳಿಂದ ವಂಚನೆ, ಸಾರ್ವಜನಿಕ ಉದ್ಯಮಗಳ ಮಾರಾಟ ಮುಂತಾದವುಗಳೇ ನಮ್ಮ ನಿಜವಾದ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳನ್ನು ಮರೆ ಮಾಚಲು ಧರ್ಮ, ಜಾತಿ, ಭಾಷೆ ಹೆಸರಲ್ಲಿ ಕಾರ್ಮಿಕರನ್ನು, ದುಡಿಯುವ ಜನರನ್ನು ಒಡೆಯುವ ಹುನ್ನಾರಗಳು ನಡೆಯುತ್ತಿವೆ. ಈ ಪಿತೂರಿಗಳಿಗೆ ಬಲಿಯಾಗದೆ, ತಮ್ಮ ಒಗ್ಗಟನ್ನು ಕಾಪಾಡಿಕೊಂಡು ಕಾರ್ಮಿಕರು, ಸರಿಯಾದ ನಾಯಕತ್ವದಡಿ, ಸರಿಯಾದ ಮಾರ್ಗದಲ್ಲಿ ಚಳುವಳಿಗಳನ್ನು ತೀವ್ರಗೊಳಿಸಬೇಕು ಅವರು ಸಲಹೆ ನೀಡಿದರು.

ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿದರು. ಜಿಲ್ಲಾಧ್ಯಕ್ಷ ಆರ್‌.ಸೋಮಶೇಖರಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರು, ಆಶಾ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಮುಖಂಡರಾದ ಡಾ| ಪ್ರಮೋದ್‌, ಶಾಂತಾ, ಸುರೇಶ್‌ ಸೇರಿದಂತೆ ಆಶಾ, ಬಿಸಿಯೂಟ ಕಾರ್ಯಕರ್ತೆಯರು, ಗಣಿ, ಸ್ಪಾಂಜ್‌ ಐರನ್‌ ಕಾರ್ಮಿಕರು, ವಿಮ್ಸ್‌ ಗುತ್ತಿಗೆ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿಗಳು ಮುಂತಾದ ಕಾರ್ಮಿಕ ಸಂಘಗಳು ಇದ್ದರು.

ಬಳಿಕ ನಡೆದ ಬಹಿರಂಗ ಅಧಿವೇಶನದಲ್ಲಿ ಪ್ರತಿನಿಧಿ ಗಳು ವಿವಿಧ ಗೊತ್ತುವಳಿಗಳನ್ನು ಮಂಡಿಸಿದರು. ಕೊನೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಬಳ್ಳಾರಿ/ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಎ.ದೇವದಾಸ್‌, ಜಿಲ್ಲಾ ಕಾರ್ಯದರ್ಶಿಯಾಗಿ ಡಾ| ಪ್ರಮೋದ್‌ ಅವರನ್ನು ಚುನಾಯಿಸಲಾಯಿತು. 50 ಕಾರ್ಯಕಾರಿ ಸಮಿತಿ ಸದಸ್ಯರು, 46 ಕೌನ್ಸಿಲ್‌ ಸದಸ್ಯರನ್ನು ಚುನಾಯಿಸಲಾಯಿತು. ಇದಕ್ಕೂ ಮುನ್ನ ಬೃಹತ್‌ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next