ರೈಲಿನ ಪ್ರಯಾಣ ಅಂದ್ರೆ ಅದು ನೂರಾರು ಮನಸ್ಸುಗಳ ಯಾನ. ನಮಗೆ ಗೊತ್ತಿಲ್ಲದ ಹಾಗೆ, ಒಂದಿಷ್ಟು ಕತೆಗಳೂ ನಮ್ಮ ಸೀಟಿನ ಪಕ್ಕದಲ್ಲೇ, ನಮ್ಮ ಬೋಗಿಯಲ್ಲೇ ಸಹಪ್ರಯಾಣಿಕರಾಗಿ ಬರುತ್ತಿರುತ್ತವೆ. ಒಳಗಣ್ಣನ್ನು ತೆರೆದರಷ್ಟೇ ಅವುಗಳ ಅಂದಚೆಂದ ಮನಕ್ಕೆ ಇಂಪು ನೀಡುತ್ತವೆ. ಇಲ್ಲೊಬ್ಬರು ಅಜ್ಜಿ, ಮತ್ತೂಬ್ಬಳು ಹುಡುಗಿ ನಡುವಿನ ರೈಲಿನ ಕತೆಯೂ ಒಂದು ಅಂಥದ್ದೇ ಚುಕುಬುಕು ಲಹರಿ…
ಒಂದು ದಿನ ಬೆಂಗಳೂರು ನೋಡಲು ಎಲ್ಲ ಗೆಳತಿಯರು ಹೊರಡಲು ಸಿದ್ಧರಾದೆವು. ನಾವು ರೈಲಿನ ಜನರಲ್ ಬೋಗಿಯನ್ನು ಹತ್ತಿದೆವು. ಅಲ್ಲಿಯ ಜನಸಂದಣಿ ನೋಡಲು ಎರಡು ಕಣ್ಣು ಸಾಲದು. ಎಲ್ಲಿ ನೋಡಿದರಲ್ಲಿ ಜನ. ಉಸಿರಾಡಲು ಕಷ್ಟವಾದಂತಿತ್ತು. ಒಮ್ಮೊಮ್ಮೆ ನನಗನ್ನಿಸೋದು ನೀರಿನ ಜೊತೆಗೆ ಗಾಳಿ ಸಿಗೋದಾದ್ರೆ ಒಂದು ಬಾಟಲ್ ತರಬಹುದಿತ್ತು ಅಂತ. ನಮ್ಮ ಜೊತೆ ಕುಳಿತವರು ಬೇರೆ ಬೇರೆ ಊರಿನಿಂದ ಬಂದವರಿದ್ದರು. ಎಲ್ಲರೂ ಒಂದೆಡೆ ಸೇರಿದಾಗ ಎಲ್ಲಿಲ್ಲದ ಸಂತಸ. ಆಗಾಗ ಬೇರೆ ಬೇರೆ ಭಾಷೆ ಮಾತಿನ ಕಲರವ ಕೇಳಿಸುತ್ತಿತ್ತು.
ಅದರ ಮಧ್ಯೆ “ಥೂ… ಪಿಚಕ್’ ಅಂತ ಉಗಿದ ಸದ್ದು ಕೇಳಿಸಿತು. ಆಗ ನನ್ನ ಕಿವಿ ನಿಮಿರಿದವು. “ಸಿಟ್ಟಿನಿಂದ ಯಾರದು?’ ಅಂತ ನನ್ನ ಕಣ್ಣು ಶೋಧಿಸ ಹೊರಟವು. ಕಿಟಕಿಯ ಹತ್ತಿರದ ಮೂಲೆಯಲ್ಲಿ ಹಸಿರು ಸೀರೆ, ಕೆಂಪು ಕುಪ್ಪಸ ತೊಟ್ಟ ಅಜ್ಜಿ. ಆ ಅಜ್ಜಿ ಎಷ್ಟು ಸೌಂದರ್ಯವತಿ ಎಂದರೆ, ಬಿಳಿ ಬಣ್ಣದ ಎಪ್ಪತ್ತರ ಚೆಲುವೆ! ಆಕೆಯ ಕಪ್ಪು ಕೂದಲು ಕಣ್ಣು ಕುಕ್ಕುವಂತಿದ್ದವು. ಈಗ ಹುಟ್ಟುವ ಮಗುವು ಸಹ ತಲೆಯಲ್ಲಿ ಬಿಳಿ ಕೂದಲಿನೊಂದಿಗೇ ಹುಟ್ಟುತ್ತದೆ. ಅಂಥದ್ದರಲ್ಲಿ ಆ ಅಜ್ಜಿಯನ್ನು ನೋಡಿ ಅಚ್ಚರಿಯಾಯಿತು. ಅವಳ ಮುಖದ ತೇಜಸ್ಸು ಸೂರ್ಯನ ಕಿರಣದ ರಶ್ಮಿಯಂತಿತ್ತು. ಇನ್ನು ಅವಳ ಹುಮ್ಮಸ್ಸಿನ ಬಗ್ಗೆ ಹೇಳುವಂತಿಲ್ಲ.
“ರೈಲಿನಲ್ಲಿ ಹಾಗೆಲ್ಲ ಉಗಿಯಬಾರದು’ ಎಂದು ತಿಳಿ ಹೇಳಲು ನನ್ನ ಪಕ್ಕದಲ್ಲಿರುವವರನ್ನು ಸರಿಸಿ, ನೂಕುನುಗ್ಗಲನ್ನು ದಾಟಿ, ಅಜ್ಜಿಯ ಹತ್ತಿರ ಹೋಗಿ ಅವರ ಪಕ್ಕದಲ್ಲಿ ಕೂತೆ. ದೂರದಿಂದ ಕಂಡ ಅಜ್ಜಿಯ ಮುಖದ ತೇಜಸ್ಸು ಇಮ್ಮಡಿಗೊಂಡಿತು. ಹಣೆಯ ಮೇಲೆ ಒಂದು ರೂಪಾಯಿ ಗಾತ್ರದ ಕುಂಕುಮದ ಬೊಟ್ಟು ನೋಡಲು ರಸ್ತೆಯಲ್ಲಿ ಸಿಗ್ನಲ್ ತೋರಿಸುವ ಕೆಂಪು ದೀಪದಂತೆ ಮಿರಿ ಮಿರಿ ಮಿಂಚುತ್ತಿತ್ತು. ಅಜ್ಜಿ ಕಣ್ಣು ಮಿಟುಕಿಸುತ್ತಾ ನನ್ನತ್ತ ನೋಡಿದಳು. “ಏನಮ್ಮ ಹಾಗೆ ನೋಡುತ್ತೀ?’ ಎಂದು ಕೇಳಿದಳು. ಆಗ ಅವಳ ಬಾಯಿ ಕೆಂಪಗಾಗಿತ್ತು. ನಾನು ಗಾಬರಿಯಿಂದ, “ಇದೇನಜ್ಜಿ, ನಿಮ್ಮ ಬಾಯಿಯಲ್ಲಿ ರಕ್ತ!?’ ಅಂದೆ. ಅವಳು ನಗುತ್ತಾ, “ಹುಚ್ಚಮ್ಮ ಇದು ರಕ್ತವಲ್ಲ ಎಲೆ, ಅಡಕೆ, ಸುಣ್ಣದ ಮಹಿಮೆ’ ಎಂದಳು.
ಬಲಗೈಯನ್ನು ಸೊಂಟದ ಹತ್ತಿರ ಒಯ್ದು ಅಡಕೆ ಚೀಲವನ್ನು ತೆಗೆದಳು. ಆ ಚೀಲ ನೋಡಲು ಎಷ್ಟು ಚಂದ. ಅದರಲ್ಲಿ ವಿವಿಧ ರೀತಿಯ ಸಣ್ಣ ಪುಟ್ಟ ಕಾನೆಗಳಿದ್ದವು. ಅದರಲ್ಲಿ ದೊಡ್ಡ ಕಾನೆಗೆ ಕೈ ಹಾಕಿ ವಿಳ್ಯದೆಲೆಯನ್ನು ಹೊರತೆಗೆದು ಅದರ ತುಂಬನ್ನು ತೆಗೆದಳು. ಪುಟ್ಟ ಕಾನೆಯಲ್ಲಿದ್ದ ಸುಣ್ಣವನ್ನು ಎಲೆಯ ಹಿಂಭಾಗದಲ್ಲಿ ಹಚ್ಚಿದಳು. ಅದರಲ್ಲಿ ತುಂಡು ತುಂಡಾದ ಹಾಲಡಿಕೆಗಳನ್ನು ಹಾಕಿ ಎಲೆಯನ್ನು ಮಡಚಿ ಬಾಯಿಯಲ್ಲಿ ಇಟ್ಟಳು. ನನ್ನ ಕುತೂಹಲ ಅಡಕೆ ಚೀಲ ನೋಡುವುದರಲ್ಲಿತ್ತು. ಆ ಸಣ್ಣ ಚೀಲದಲ್ಲಿ ಎಲೆ, ಅಡಕೆ, ಸುಣ್ಣ, ತಂಬಾಕು, ದುಡ್ಡು, ಕರವಸ್ತ್ರ… ಎಲ್ಲವನ್ನೂ ಒಳಗೊಂಡಿತ್ತು.
ಅಜ್ಜಿ ತಂಬಾಕನ್ನು ತೆಗೆದು ಎಡಗೈಯಲ್ಲಿ ಹಾಕಿ ಬಲಗೈನ ತೋರ್ಬೆರಳಿಂದ ಉಜ್ಜ ಹತ್ತಿದಳು. ನಂತರ ಬಲಗೈನ ಹೆಬ್ಬೆರಳು, ತೋರ್ಬೆರಳು, ಮಧ್ಯದ ಬೆರಳಿನಿಂದ ತಂಬಾಕನ್ನು ಒತ್ತಿ ಹಿಡಿದು ಬಾಯಿಗೆ ಹಾಕಿಕೊಂಡಳು. ಅಜ್ಜಿಯ ಬಾಯಿ ರಕ್ತದ ಬಾವಿ ಎಂಬಂತೆ ಭಾವಿಸುತ್ತಿತ್ತು. ಅಜ್ಜಿಯನ್ನು ಕೇಳಿ ಅಡಕೆ ಚೀಲದ ಕುರಿತು ತಿಳಿದುಕೊಂಡೆ. “ತಂಬಾಕು ತಿನ್ನಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ. ತಂಬಾಕಿನಿಂದಾಗಿ ಕ್ಯಾನ್ಸರ್‌ಗೆ ತುತ್ತಾಗಿ ಧ್ವನಿಪೆಟ್ಟಿಗೆ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು’ ಎಂದು ತಿಳಿ ಹೇಳಿದೆ.
ಅದೊಂದು ಚೀಲದಲ್ಲಿ ಅವಳಿಗೆ ಬೇಕಿರುವ ಎಲ್ಲವೂ ಇತ್ತು. ಅಜ್ಜಿ ಹಾಗೂ ಅಡಕೆ ಚೀಲವನ್ನು ನೋಡಿ ಈಗಿನ ವ್ಯಾನಿಟಿ ಬ್ಯಾಗ್ ಹುಡುಗಿಯರ ಬೆಡಗು ಬಿನ್ನಾಣ ನಾಚುವಂತಿತ್ತು. ಅಜ್ಜಿ ಎಲೆ ಅಗಿಯುತ್ತಿದ್ದಳು. ತಂಬಾಕು ತಿನ್ನಬಾರದೆಂದಾಗ, “ಥೂ… ಥೂ…’ ಅಂತ ಹೊರ ಹಾಕಿದಳು. “ಹಾಗೆಲ್ಲಂದರಲ್ಲಿ ಉಗಿಯಬಾರದು ಅಜ್ಜಿ… ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವೇ ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ಅದಕ್ಕೆ ನಮ್ಮ ದೇಶದ ಪ್ರಧಾನಿಯವರು ಸ್ವತ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿಯ ರೂಪದಲ್ಲಿ ಜಾರಿಗೆ ತಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯ ಬಾರದು, ಉಗಿಯಲೂ ಬಿಡಬಾರದು ಎಂಬ ಕಿವಿಮಾತು ಹೇಳಿ¨ªಾರೆ’ ಅಂತ ಹೇಳಿದೆ. ಅಷ್ಟರಲ್ಲೇ, ಬೆಂಗಳೂರು ಬಂದೇ ಬಿಟ್ಟಿತು. ನಾವೆಲ್ಲರೂ ಅಜ್ಜಿಗೆ ಟಾ ಟಾ ಹೇಳಿ ನಮ್ಮ ದಾರಿ ಹಿಡಿದೆವು.
– ಅಶ್ವಿನಿ ಪಿಡಶೆಟ್ಟಿ