Advertisement

‘ಸಿದ್ದ ಹಂಡಿ ಬಡಗನಾಥ’ ಮಠಕ್ಕೆ ಬೇಕು ಕಾಯಕಲ್ಪ

01:49 PM Apr 12, 2021 | ಗಣೇಶ್ ಹಿರೇಮಠ |

ಕಳೆದ ವರ್ಷ ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತು ಮನಸ್ಸು ಜಡ್ಡು ಹಿಡಿದಿತ್ತು. ನಮ್ಮ ಬೇಸರ ಕಳೆದುಕೊಳ್ಳುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರವಾಸದ ಯೋಜನೆ ಹಾಕಿಕೊಂಡು ಹಂಡಿ ಬಡಗನಾಥ ಕ್ಷೇತ್ರದತ್ತ ಮುಖ ಮಾಡಿದೇವು. ನಮ್ಮೂರು ಧಾರವಾಡದಿಂದ ಸರಿಸುಮಾರು 50 ಕಿ.ಮೀ ದೂರ ಕ್ರಮಿಸಿದರೆ ಪ್ರಸಿದ್ಧ ಹಂಡಿ ಬಡಗನಾಥ ಕ್ಷೇತ್ರ ಸಿಗುತ್ತದೆ. ಸುತ್ತಲೂ ಸುಂದರ ಕಾನನದ ನಡುವೆ ನೆಲೆಸಿರುವ ಹಂಡಿ ಬಡನಾಥ ಕ್ಷೇತ್ರಕ್ಕೆ ಸ್ಥಳೀಯರು ಕರೆಯುವುದು ಸಿದ್ಧನಗುಡ್ಡ ಎಂದು.

Advertisement

ಕರ್ನಾಟಕದಲ್ಲಿ ನಾಥಪಂಥದ ಕುರುಹುಗಳ ಬಗ್ಗೆ ಹೇಳುವ ‘ಸಿದ್ಧ ಹಂಡಿ ಬಡಗನಾಥ’ ಧಾರ್ಮಿಕ ಕ್ಷೇತ್ರ ಇಂದು ಪ್ರವಾಸಿತಾಣವಾಗಿಯೂ ಮಾರ್ಪಟ್ಟಿದೆ. ನಿತ್ಯ ನೂರಾರು ಪ್ರವಾಸಿಗರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಕ್ಷೇತ್ರದ ಇತಿಹಾಸ ಕೆದಕುತ್ತ ಹೋದರೆ ಹಲವು ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ.

ಹೌದು, ಹಂಡಿ ಬಡಗನಾಥ ಕ್ಷೇತ್ರ ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಈ ಕ್ಷೇತ್ರದ ಮೂಲ ಪುರುಷ ಶ್ರೀ ಸಿದ್ದ ಹಂಡಿ ಬಡಗನಾಥ ಮೂಲತಃ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎನ್ನುವ ವಿಚಾರ ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Advertisement

ಈತ ಪೂರ್ವಾಶ್ರಮದಲ್ಲಿ ಕಾಬುಲ್ ದೇಶದ ಮುಸ್ಲಿಂ ದೊರೆಯಾಗಿರುತ್ತಾನೆ. ಅತೀ ದುರಹಂಕಾರಿ, ಸಾಧು ಸಂತರಿಗೆ ಉಪಟಕ, ಕಿರುಕುಳ ಕೊಡುತಿದ್ದ ಈತ ಕಾಬೂಲ್‍ನ ರಾಮ್ರೂಮ್ ಎಂಬ ಸ್ಥಳದಲ್ಲಿ ಗೋರಕ್ಷನಾಥರನ್ನು ಸಂದಿಸುತ್ತಾನೆ. ಇಲ್ಲಿ ಗೋರಕ್ಷನಾಥ ಹಾಗೂ ಈ ದೊರೆಯ ನಡುವೆ ಘೋರವಾದ ವಾದ-ವಿವಾದ ನಡೆಯುತ್ತದೆ. ಈ ಚಿಂತನ-ಮಂಥನದಲ್ಲಿ ಮುಸ್ಲಿಂ ದೊರೆ ಸೋತು ಗೋರಕ್ಷನಾಥರಿಗೆ ಶರಣಾಗುತ್ತಾನೆ. ಗೋರಕ್ಷನಾಥರು ಈತನನ್ನು ತಕ್ಷಣವೇ ತಮ್ಮ ಶಿಷ್ಯರಾಗಿ ಸ್ವೀಕರಿಸುವುದಿಲ್ಲ. ಅವನ ದುರಹಂಕಾರ ಕಳೆದು, ಸಂಸ್ಕಾರವಂತನಾದ ಮೇಲೆ ತಮ್ಮ ಶಿಷ್ಯವೃಂದಕ್ಕೆ ಸೇರಿಸಿಕೊಳ್ಳುತ್ತಾರೆ. ಅಲ್ಲಿಂದ ಹಂಡಿ ಬಡಗನಾಥನಾಗಿ ಆತ ಪರಿವರ್ತನೆಯಾಗುತ್ತಾನೆ ಎನ್ನುತ್ತವೆ ಇತಿಹಾಸದ ಮೂಲಗಳು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಂಬಾರಡಾ ಗ್ರಾಮದ ಬಳಿ ಇರುವ ಹಂಡಿಗೂಫಾ ಎಂಬಲ್ಲಿ ಹಂಡಿ ಬಡಗನಾಥ ಸತತ 12 ವರ್ಷಗಳ ಕಾಲ ಕಠಿಣ ತಪಸ್ಸುಗೈದು ಸಿದ್ಧಪುರುಷರಾಗುತ್ತಾರೆ. ಅವರು ತಪಸ್ಸು ಕೈಗೊಂಡ ಗುಹೆ ಇಂದಿಗೂ ಇದೆ. ಇಲ್ಲಿರುವ ಹಂಡಿ ತೀರ್ಥ ಪವಾಡವೊಂದಕ್ಕೆ ಸಾಕ್ಷಿಯಾಗಿದೆ. ಪ್ರತಿ ಶಿವರಾತ್ರಿಯಂದು ಈ ಕ್ಷೇತ್ರಕ್ಕೆ ಬರುವ ಸಾವಿರಾರು ( ಅಂದಾಜು 20 ಸಾವಿರ ) ಭಕ್ತರಿಗೆ ಇಲ್ಲಿಯ ತೀರ್ಥ ಹಂಚಿದರೂ ಅದು ಬರಿದಾಗುವುದಿಲ್ಲ.

ಹಂಡಿ ಬಡಗನಾಥ ಕ್ಷೇತ್ರಕ್ಕೆ ಸಾಧು-ಸಂತರ ಆಗಮನ ನಿರಂತರವಾಗಿರುತ್ತದೆ. ಅದರಲ್ಲೂ ಉತ್ತರ ಭಾರತದ ಕಡೆಯಿಂದ ನೂರಾರು ಸಾಧು-ಸಂತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಮಹಾರಾಷ್ಟ್ರ,ಗೋವಾ ಹಾಗೂ ಕರ್ನಾಟಕದಿಂದ ಪ್ರತಿ ಅಮವಾಸ್ಯೆಯಂದು ಸಾವಿರಾರು ಭಕ್ತರಿಂದ ಹಂಡಿ ಬಡಗನಾಥ ತುಂಬಿ ತುಳುತ್ತಿರುತ್ತದೆ. ಇಲ್ಲಿಗೆ ಬರುವ ಭಕ್ತರು ಹಣ್ಣು-ಕಾಯಿ, ಅಕ್ಕಿ,ಬೇಳೆ ಹಾಗೂ ಬೆಲ್ಲವನ್ನು ತೆಗೆದುಕೊಂಡು ಬರುತ್ತಾರೆ.

ಈ ಕ್ಷೇತ್ರಕ್ಕೆ ಬೇಕು ಕಾಯಕಲ್ಪ :

ಹಂಡಿ ಬಡಗನಾಥ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅರಣ್ಯದಲ್ಲಿ ನೆಲೆಸಿರುವ ಈ ಕ್ಷೇತ್ರಕ್ಕೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲ. ಸ್ವಂತ ವಾಹನದಲ್ಲಿಯೇ ಇಲ್ಲಿ ಆಗಮಿಸಬೇಕು. ಮುಖ್ಯರಸ್ತೆಯಿಂದ ಮೂರು ಕಿ.ಮೀವರೆಗೆ ಕಚ್ಚಾ ರೋಡಿನಲ್ಲಿ ಪ್ರಯಾಣ ಸಾಗಬೇಕಾಗುತ್ತದೆ. ರಾತ್ರಿ ವೇಳೆ ಇಲ್ಲಿಯ ಪ್ರಯಾಣ ಅಪಾಯಕಾರಿ.

ಮೂಲಭೂತ ಸೌಲಭ್ಯಗಳು ಬೇಕು :

ದಿನದಿಂದ ದಿನಕ್ಕೆ ಹಂಡಿಬಡಗನಾಥ ಕ್ಷೇತ್ರದ ಮಹಾತ್ಮೆ ಹೆಚ್ಚುತ್ತ ಹೋಗುತ್ತಿದೆ. ಆದರೆ, ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇಲ್ಲಿಗೆ ಬರುವ ಪ್ರವಾಸಿಗರೇ ತಮ್ಮ ಜೊತೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಅನಿವಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next