Advertisement
ಕೆಲವರು ಪ್ರಾಮಾಣಿಕವಾಗಿ ದುಡಿದು ತಕ್ಕಷ್ಟು ಸಂಪಾದನೆ ಮಾಡಿ ತಮ್ಮ ಹಾಗೂ ಕುಟುಂಬದ ಹೊಟ್ಟೆ ಬಟ್ಟೆಯ ಆವಶ್ಯಕತೆ ನೀಗಲು ಹೆಣಗುತ್ತಾರೆ. ಇನ್ನೂ ಕೆಲವರು ಏನಕೇನ ಪ್ರಕಾರೇಣ ಹಣ ಸಂಪಾದನೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಕೂಡಿ ಹಾಕುತ್ತಾರೆ. ಆದರೆ ಪ್ರಾಮಾಣಿಕ ದುಡಿಮೆ ಮಾತ್ರ ನಮಗೆ ದಕ್ಕಿದರೆ ಉಳಿದದ್ದು ನಂದರಾಯನ ಬದುಕಿನಂತೆ ನರಿ ನಾಯಿ ತಿಂದು ಹೋಗುತ್ತದೆ. ಅದಕ್ಕೆಂದೇ ಹೇಳು ವುದು “ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’ ಅಂತ.
Related Articles
Advertisement
ಸಮಾಜಜೀವಿ ಆದ ಈ ಮಾನವ ತನ್ನ ಗಳಿಕೆ ಸಂಪತ್ತು ಪಡೆಯುವುದು ಸಮಾಜದಿಂದ. ಕೆಲವೊಮ್ಮೆ ಪ್ರಾಮಾಣಿಕ ದುಡಿಮೆಯಿಂದ ಕೂಡ ನಮಗೆ ಜಗಿದು ತಿನ್ನಲಾಗದಷ್ಟು ಸಂಪತ್ತು ಗಳಿಕೆ ಆಗುವುದೂ ಇದೆ. ಅದೇಕೊ ದೇವರ ದಯೆ ಒಂಚೂರು ಜಾಸ್ತಿಯೇ ಸಿಗುತ್ತದೆ. ಇಂತಿಪ್ಪ ಸಂದರ್ಭ ನಾವು ದೇವರ ಈ ಔದಾರ್ಯಕ್ಕೆ ಕೃತಾರ್ಥರಾಗಿ ಮನುಷ್ಯ ಸಹಜವಾಗಿ ಸಮಾಜಕ್ಕೆ ಪ್ರತಿಫಲ ನೀಡಬೇಕು. ಸಮಾಜದಿಂದ ದೊರೆತ ಸಂಪತ್ತನ್ನು “ಕೆರೆಯ ನೀರನು ಕೆರೆಗೆ ಚೆಲ್ಲಿ’ ಸಮಾಜದ ಋಣ ತೀರಿಸಿ ಕೃತಾರ್ಥರಾಗಬೇಕು. ಜೀವನದ ಸಾಫಲ್ಯ ಇರುವುದೇ ಇಂತಹ ಔದಾರ್ಯದ ಕಾಯಕದಲ್ಲಿ. ಗಳಿಸಿದ್ದನ್ನು ಆವಶ್ಯಕತೆಗೆ ಬೇಕಷ್ಟು ಉಳಿಸಿಕೊಂಡು, ಸಮಾಜದ ಋಣ ತೀರಿಸಲೂ ಮಿಗತೆಯನ್ನು ಕೊಡುವುದು ಜನುಮ ಸಾರ್ಥಕ್ಯ ಆದಂತೆಯೇ. ಅದು ಪ್ರಕೃತಿ ಸಹಜ ಕೂಡಾ.
ನನ್ನ ಗಳಿಕೆ, ನನ್ನಿಷ್ಟದಂತೆ ನಾನು ಮೋಜು. ಮಸ್ತಿ ಮಾಡಿದರೆ ನಿನ್ನ ಗಂಟೇನು ಹೋಯಿತು? ಅನ್ನುವವರಿಗೆ ಕೊರತೆ ಇಲ್ಲ. ಕೊಟ್ಟು ಕೆಟ್ಟವರಿಲ್ಲ. ತಾನು ಕೊಡುವುದು ತಾನು ಪಡೆದದ್ದು ಮಾತ್ರ. ಹಸಿದವನಿಗೆ ಒಂದು ಹಿಡಿ ಅನ್ನ, ಚಳಿಗೆ ನಡುಗುವ ದೇಹಕ್ಕೆ ಒಂದು ಹೊದಿಕೆ ಅಷ್ಟೆ. ನಮ್ಮ ಪರಿಮಿತಿಗೆ ಅನುಸರಿಸಿ ಸಮಾಜಕ್ಕೆ ನಮ್ಮ ಕೊಡುಗೆ ಎಂಬ ಕರ್ತವ್ಯ ನಿರ್ವಹಣೆ.
– ಬಿ. ನರಸಿಂಗ ರಾವ್, ಕಾಸರಗೋಡು