Advertisement
ವಿದ್ಯಾರ್ಥಿಗಳಲ್ಲಿರುವ ಸಭಾಕಂಪನ ಹೋಗಲಾಡಿಸುವುದಕ್ಕೆ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳು ಆರಂಭಿಸಿದ ಒಂದು ವೇದಿಕೆಯಿತ್ತು. ಎಲ್ಲರೂ ಆ ವೇದಿಕೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕು ಎಂದು ನಮ್ಮ ವಿಭಾಗದ ಮುಖ್ಯಸ್ಥರು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದರು. ನಮ್ಮ ವಿಭಾಗದ ಮುಖ್ಯಸ್ಥರು ಮಾಡಿದ್ದ ಕಡ್ಡಾಯ ಘೋಷಣೆಯು ವೇದಿಕೆಯನ್ನೇರುವ ಮೊದಲೇ ಭಯಪಡುತ್ತಿದ್ದ ನನ್ನನ್ನು ಇನ್ನಷ್ಟು ಭಯಭೀತನನ್ನಾಗಿ ಮಾಡಿತ್ತು. ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಪರಿಚಯವನ್ನು ಹೇಳುವ ಸಂಪ್ರದಾಯವು ಮೊದಲಿನಿಂದಲೇ ನಡೆದುಕೊಂಡುಬಂದಿತ್ತು. ಮೊದಲ ಬಾರಿ ಭಯದಿಂದಲೇ ಪರಿಚಯವನ್ನು ಮಾಡಿಕೊಂಡಿದ್ದೆ. ನಂತರದ ಕೆಲವು ದಿನಗಳಲ್ಲಿ ವೇದಿಕೆಯತ್ತ ನಾನು ಧಾವಿಸಿರಲಿಲ್ಲ. ಆ ವೇದಿಕೆಯಲ್ಲಿ ಸೀನಿಯರ್‌ಗಳು ಲೀಲಾಜಾಲವಾಗಿ ಮಾತನಾಡುತಿದ್ದುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಅಲ್ಲಿ ನಮ್ಮ ಪ್ರಥಮ ವರ್ಷದ ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಸ್ವಲ್ಪ ವಿರಳವಾಗಿತ್ತು. ಇದನ್ನು ಗಮನಿಸಿದ ಕಾರಣವೋ ಏನೋ ನಮ್ಮ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕರು ನಮ್ಮಲ್ಲಿ ಧೈರ್ಯ ತುಂಬಿದರು. ನಮ್ಮ ಸೀನಿಯರ್‌ಗಳು ಕೂಡ ಮಾತನಾಡಲು ಹುರಿದುಂಬಿಸಿದರು. ಅವರು ನೀಡಿದ ಧೈರ್ಯವು ವೇದಿಕೆಯಲ್ಲಿ ನಿಂತು ಮಾತನಾಡಲು ನಮ್ಮಲ್ಲಿ ಆಶಾಭಾವನೆ ಮೂಡಿಸಿತು. ಆ ವೇದಿಕೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಮುಕ್ತವಾಗಿ ಭಾಗವಹಿಸಲು ಅವಕಾಶವಿತ್ತು. ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವಿತ್ತು. ಯಾವುದೇ ಭಯವಿಲ್ಲದೆ ಮಾತನಾಡುವುದನ್ನು ಕಲಿಯಲು ಮೊದಲ ವರ್ಷದಲ್ಲೇ ಆ ವೇದಿಕೆ ನನಗೆ ಸಹಾಯ ಮಾಡಿತ್ತು. ದ್ವಿತೀಯ ವರ್ಷಕ್ಕೆ ಕಾಲಿರಿಸುವ ಹೊತ್ತಿಗೆ ಮಾತಿನ ವೇದಿಕೆಯು ಇಷ್ಟವಾಗಿತ್ತು. ಅಂತಿಮ ವರ್ಷದ ಹೊತ್ತಿಗೆ ಆ ವೇದಿಕೆಗೆ ನಾನೊಬ್ಬ ಚಿರಪರಿಚಿತ ವ್ಯಕ್ತಿಯಾಗಿ ಬದಲಾಗಿದ್ದೆ.
ಪ್ರಥಮ ಎಂ. ಎ. (ಪತ್ರಿಕೋದ್ಯಮ)
ಮಂಗಳೂರು ವಿ. ವಿ.