ಮಹಾನಗರ: ಸಿಟಿ ಬಸ್ ಚಾಲಕ- ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ವಿಶೇಷ ಕಾರ್ಯಾಗಾರ ನಡೆಸಲು ಸಿಟಿ ಬಸ್ ಮಾಲಕರ ಸಂಘ ಮುಂದಾಗಿದೆ.
ಪ್ರತೀ ದಿನ ಸುಮಾರು 320ಕ್ಕೂ ಹೆಚ್ಚಿನ ಬಸ್ಗಳು ನಗರ ದೊಳಗೆ ಸಂಚರಿಸುತ್ತವೆ. ಅನೇಕ ಸಂದರ್ಭ ನಿರ್ವಾಹಕ, ಪ್ರಯಾಣಿಕರ ನಡುವಣ ಜಗಳಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಚಾಲಕ-ನಿರ್ವಾಹಕರ ವರ್ತನೆ ಬದಲಾಯಿಸುವ ನಿಟ್ಟಿನಲ್ಲಿ ಮಂಗಳೂರಿನ ಬೆಂದೂರ್ವೆಲ್ ಸೆಬಾಸ್ಟಿಯನ್ ಹಾಲ್ ನಲ್ಲಿ ಡಿ. 13, 14ರಂದು ಕಾರ್ಯಾಗಾರ ನಡೆಯಲಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲೆಯ ಸಾಮಾಜಿಕ ಹೋರಾಟಗಾರರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ನಗರದಲ್ಲಿ ಸಂಚರಿಸುವ ಬಹುತೇಕ ಬಸ್ ಚಾಲಕ-ನಿರ್ವಾಹಕರು ಕಾರ್ಯಾಗಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅವರ ಕೆಲಸಕ್ಕೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಾಗಾರಕ್ಕೆ ಪ್ರತ್ಯೇಕ ಪಾಳಿಯ ವ್ಯವಸ್ಥೆ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಸಮಸ್ಯೆ, ನಿರ್ವಾಹಕ – ಚಾಲಕರ ಸಮಸ್ಯೆಗಳು ಪ್ರತ್ಯೇಕವಾಗಿ ಚರ್ಚೆ ನಡೆಯಲಿದೆ. ಸಮರ್ಪಕ ಉತ್ತರ, ಮಾಹಿತಿಯನ್ನು ತಜ್ಞರು ಕಾರ್ಯಾಗಾರದಲ್ಲಿ ನೀಡಲಿದ್ದಾರೆ.
ಪ್ರತ್ಯೇಕ ಬ್ಯಾಜ್ ವ್ಯವಸ್ಥೆ
Related Articles
ಸಿಟಿ ಬಸ್ಗಳಲ್ಲಿ ಈವರಗೆ ನಿರ್ವಾಹಕರಿಗೆ ಚಾಲಕರಿಗೆ ಪ್ರತ್ಯೇಕ ಗುರುತಿನ ಚೀಟಿ ಇರಲಿಲ್ಲ. ಇದೀಗ ಗುರುತಿನ ಚೀಟಿಯನ್ನು ನೀಡಲು ಸಂಘ ಮುಂದಾಗಿದೆ. ದತ್ತಾಂಶ ಕಲೆ ಹಾಕುವ ಸಲುವಾಗಿ ಖಾಸಗಿ ಸಿಟಿ ಬಸ್ ಮಾಲಕರ ಸಂಘವು ಚಾಲಕರು, ಮಾಲಕರಿಗೆ ಕೆಲವು ವರ್ಷಗಳ ಹಿಂದೆಯೇ ಮುಂದಾಗಿತ್ತು.
ಅರ್ಜಿಗಳನ್ನು ನೀಡಿ, ಚಾಲಕ, ನಿರ್ವಾಹಕರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿ, ಅದರಲ್ಲಿ ನಮೂದಾಗಿರುವ ಅವರ ಹೆಸರು, ವಿಳಾಸ, ಪೋನ್ ನಂಬರ್ ದಾಖಲಿಸಬೇಕಿದೆ. ಜತೆಗೆ ಬಸ್ ಹೆಸರು, ಬಸ್ ರೂಟ್, ಬಸ್ ನಂಬರ್ ಸಹಿತ ಇನ್ನಷ್ಟು ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ ನೀಡಬೇಕಿತ್ತು. ಬಳಿಕ ಈ ವ್ಯವಸ್ಥೆ ಅಷ್ಟೊಂದು ಮುನ್ನಲೆಗೆ ಬರಲಿಲ್ಲ. ಇದೀಗ ಮತ್ತೆ ಬ್ಯಾಜ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಪ್ರಯಾಣಿಕರಿಗೆ ಇನ್ನೂ ಸಿಗುತ್ತಿಲ್ಲ ಟಿಕೆಟ್
ಸಿಟಿ ಬಸ್ಗಳಲ್ಲಿ ನಿರ್ವಾಹಕರು ಪ್ರತಿಯೊಬ್ಬ ಪ್ರಯಾಣಿಕರಿಗೂ ಟಿಕೆಟ್ ನೀಡಬೇಕು ಎಂದು ಸಂಘ ಸೂಚನೆ ನೀಡಿ ಹಲವು ವರ್ಷಗಳು ಕಳೆದರೂ ಇನ್ನೂ ಹಲವು ಬಸ್ಗಳಲ್ಲಿ ಇದು ಜಾರಿಯಾಗಿಲ್ಲ. ಪ್ರತಿಯೊಬ್ಬ ಪ್ರಯಾಣಿಕ ಟಿಕೆಟ್ ಪಡೆದುಕೊಳ್ಳುವಂತೆ ಬಸ್ನಲ್ಲಿ ಬೋರ್ಡ್ ಅಳವಡಿಸಲಾಗಿದೆ. ಸಹಾಯಕ ದೂರವಾಣಿ ಸಂಖ್ಯೆಯನ್ನೂ ನಮೂದಿಸಲಾಗಿದೆ ಆದರೂ ನಿರ್ವಾಹಕರು ಟಿಕೆಟ್ ನೀಡಲು ಒಪ್ಪುತ್ತಿಲ್ಲ. ಈ ಕುರಿತು ಪ್ರಯಾಣಿಕರಿಂದಲೂ ಆಕ್ಷೇಪಗಳು ಕೇಳಿ ಬಂದಿವೆ. ಈ ವಿಚಾರವೂ ಕಾರ್ಯಾಗಾರದಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಸಮನ್ವಯ ಸಾಧಿಸುವ ಆಶಯ
ಸಿಟಿ ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರ ನಡುವಣ ಸಮಚಿತ್ತದಿಂದ ವರ್ತಿಸಲು, ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಿಟಿ ಬಸ್ ಮಾಲಕರ ಸಂಘದಿಂದ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಪ್ರತ್ಯೇಕ ಕಾರ್ಯಾಗಾರ ನಡೆಸಲು ನಿರ್ಧರಿಸಿದ್ದೇವೆ. ಎರಡು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ. ನಾವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ. –ಜಯಶೀಲ ಅಡ್ಯಂತಾಯ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ