Advertisement

ಪಡುಪೆರಾರ ವಿಶೇಷ ಗ್ರಾಮ ಸಭೆ

11:32 AM Jan 17, 2018 | Team Udayavani |

ಪಡುಪೆರಾರ: ಇಲ್ಲಿನ ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಯೋಜನೆಯ ಬಗ್ಗೆ ಪ್ರಚಾರ ಹಾಗೂ ಮಾಹಿತಿ ನೀಡಲು ಜಾಗೃತಿ ಸಮಿತಿ ರಚನೆಯಾಗಿಲ್ಲ. ಕಾಯಕ ಬಂಧುಗಳಿಗೆ ನರೇಗಾ ಯೋಜನೆಯ ಬಗ್ಗೆ ಮಾಹಿತಿಯನ್ನು ಪಂಚಾಯತ್‌ ನೀಡುತ್ತಿಲ್ಲ. ಇದರಿಂದ ಈ ಯೋಜನೆಯಲ್ಲಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪಡುಪೆರಾರ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ದೂರಿದರು.

Advertisement

ಗ್ರಾ.ಪಂ.ನ 2017- 18ನೇ ಸಾಲಿನ ದ್ವಿತೀಯ ಹಂತದ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮ ಸಭೆಯು ಮಂಗಳವಾರ ಗ್ರಾ.ಪಂ.ನ ಸಭಾಭವನದಲ್ಲಿ ಜರಗಿತು. ನೋಡಲ್‌ ಅಧಿಕಾರಿಯಾಗಿ ಪಾಲ್ಗೊಂಡಿದ್ದ ಮಂಗಳೂರು ನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ. ಅವರು ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ.ನ 5 ಮಂದಿ ಮಾತ್ರ ಹಾಜರ್‌
ಗ್ರಾ.ಪಂ.ನ 23 ಸದಸ್ಯರಲ್ಲಿ ಅಧ್ಯಕ್ಷರು ಸೇರಿ ಕೇವಲ 5 ಮಂದಿ ಭಾಗವಹಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಈ ಕುರಿತು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ದ.ಕ. ಜಿಲ್ಲೆ ಬರಪೀಡಿತ ಜಿಲ್ಲೆಯೆಂದು ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆಯ ನೀರು ಸಂರಕ್ಷಣೆಯ
ಬಗ್ಗೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಪಂಚಾಯತ್‌ ಏನೂ ಕ್ರಮ ಕೈಗೊಂಡಿದೆ?, ಮುಂಡಬೆಟ್ಟುನಿಂದ ರಾಮಕೋಡಿಯವರಗೆ ಜಲ ಸಂರಕ್ಷಣೆಗಾಗಿ ತಡೆಗೋಡೆ ರಚನೆಗೆ ಅರ್ಜಿ ನೀಡಲಾಗಿದೆ. ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಪಂಚಾಯತ್‌ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಮುರುನಾಳ್‌ ಎಂ.ವಿ., 22 ಕಿಂಡಿ ಅಣೆಕಟ್ಟು ಕಾಮಗಾರಿ ಪಟ್ಟಿ ತಯಾರಿಸಿ, ಜಿಲ್ಲಾ ಪಂಚಾಯತ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಆಡಳಿತ ಮತ್ತು ಅಧಿಕಾರಿಗಳ ಹೊಂದಾಣಿಕೆ ಈ ಗ್ರಾಮ ಪಂಚಾಯತ್‌ ನಲ್ಲಿ ಇಲ್ಲ. ಇದರಿಂದ ಅಧಿಕಾರಿಗಳು ವರ್ಗಾವಣೆ ಆಗುತ್ತಾರೆ ಎಂದು ಗ್ರಾಮಸ್ಥರು ದೂರಿದರು. ರುದ್ರಭೂಮಿಯ ಕಾಮಗಾರಿಯನ್ನು ಒತ್ತಾಯದ ಮೇರೆಗೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಾಡಲಾಗಿತ್ತು. ಅದು ಉದ್ಘಾಟನೆಯಾದರೂ ಹಣ ಸಿಕ್ಕಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

Advertisement

ಶ್ಯಾಮಲಾ ಸಿ.ಕೆ. ಮಾತನಾಡಿ, 41 ಕಾಮಗಾರಿಗಳು ಇಲ್ಲಿ ನಡೆದಿವೆ. ಗ್ರಾಮಸ್ಥರು ಲೋಪ ದೋಷಗಳ ಬಗ್ಗೆ ತಿಳಿಸಿದ್ದಾರೆ. ಕಾಮಗಾರಿ ಆಯ್ಕೆ ಹಾಗೂ ನಿರ್ವಹಣೆ ಬಗ್ಗೆ ಪಾಲನ ವರದಿಯಲ್ಲಿ ಮಂಡಿಸಿದಂತೆ ತಪ್ಪುಗಳನ್ನು ಸರಿಪಡಿಸಿ, ಮುಂದೆ ಆಗದಂತೆ ನೋಡಬೇಕಾಗಿದೆ. 35 ಅಭಿವೃದ್ಧಿ ಕಾಮಗಾರಿಗಳಿಗೆ ಈ ಯೋಜನೆಯಡಿಯಲ್ಲಿ ಅವಕಾಶವಿದೆ. ಇದಕ್ಕೆ ಹೆಚ್ಚು ಪ್ರಚಾರ ಕೊಡಬೇಕು.ಗ್ರಾಮ ಪಂಚಾಯತ್‌ ಸದಸ್ಯರು ಇದ್ದು ಅದ್ಯತೆಯ ಮೇರೆಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಎಂದು ಹೇಳಿದರು.

ಯೋಜನೆಯ ಹೆಚ್ಚುವರಿ ತಾಲೂಕು ಸಂಯೋಜಕಿ ಶೀತಲ್‌ ಮಾತನಾಡಿ, ಒಟ್ಟು 41 ಕಾಮಗಾರಿಯಲ್ಲಿ 32 ಗ್ರಾಮ ಪಂಚಾಯತ್‌ ಹಾಗೂ 9 ತೋಟಗಾರಿಕಾ ಇಲಾಖೆಗೆ ಸಂಬಂಧ ಪಟ್ಟದ್ದಾಗಿವೆ. ಒಟ್ಟು 946, ತೋಟಗಾರಿಕೆ 361 ಒಟ್ಟು 1,307 ದಿನ ಕಾರ್ಯನಿರ್ವಹಿಸಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಗಾ.ಪಂ. ಅಧ್ಯಕ್ಷೆ ಶಾಂತಾ ಎಂ., ಯೋಜನೆಯ ಕಿರಿಯ ಎಂಜಿನಿಯರ್‌ ಮಮತಾ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಉಷಾರಾಣಿ, ಮಂಗಳಾಶ್ರೀ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ನಾಗೇಶ್‌ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮುರುನಾಳ ಎಂ.ವಿ. ವಂದಿಸಿದರು.

ಕಾಮಗಾರಿಗಳ ಅನುಮೋದನೆಯಾಗಿಲ್ಲ
ಕಾಮಗಾರಿಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದನೆಯಾಗಿಲ್ಲ. ಉದ್ಯೋಗ ಚೀಟಿಯಲ್ಲಿ ಕೆಲಸ ನೀಡಿದ ವಿವರ ಇಲ್ಲ. 41 ಕಾಮಗಾರಿಯಲ್ಲಿ 15 ಮಾತ್ರ ನಾಮಫಲಕವಿದೆ. 404 ಉದ್ಯೋಗ ಚೀಟಿಯಲ್ಲಿ 238 ಮಾತ್ರ ಉದ್ಯೋಗ ಚೀಟಿ ನವೀಕರಣಗೊಂಡಿದೆ. ಮೇಲಧಿಕಾರಿಯವರಿಂದ ಅಳತೆ ಪರಿಶೀಲನೆಯಾಗಿಲ್ಲ. ಮುಕ್ತಾಯದ ಪ್ರಮಾಣ ಪತ್ರ ಲಗತ್ತಿಸಿಲ್ಲ. ಕಾಮಗಾರಿ ಮಾಡುವ ಭಾವಚಿತ್ರ ಇಲ್ಲ.
-ಪವಿತ್ರಾ, ತಾಲೂಕು ಸಂಯೋಜಕಿ

Advertisement

Udayavani is now on Telegram. Click here to join our channel and stay updated with the latest news.

Next