Advertisement
ಗ್ರ್ಯಾನುಲೋಸೈಟ್ ಎಂದರೇನು?ಗ್ರ್ಯಾನುಲೋಸೈಟ್ ಎಂದರೆ ಬಿಳಿ ರಕ್ತ ಕಣಗಳಲ್ಲಿ ಒಂದು ವಿಧವಾದ ಕೋಶ. ಬಿಳಿ ರಕ್ತ ಕಣಗಳು ಸಾಂಕ್ರಾಮಿಕ ರೋಗಗಳ ವಿರುದ್ಧ ದೇಹವನ್ನು ರಕ್ಷಿಸುವಲ್ಲಿ ತೊಡಗಿರುವ ಪ್ರತಿರಕ್ಷಣ ಕೋಶಗಳಾಗಿವೆ. ಬಿಳಿ ರಕ್ತಕಣಗಳು ಮೂಳೆ ಮಜ್ಜೆಯಲ್ಲಿ ಆಕರ ಜೀವಕೋಶ (ಸ್ಟೆಮ್ ಸೆಲ್) ಗಳಿಂದ ಉತ್ಪಾದನೆಯಾಗುತ್ತವೆ. ಇವು ದೇಹದ ಪ್ರತಿರಕ್ಷಣ ವ್ಯವಸ್ಥೆಯ ಭಾಗವಾಗಿವೆ.
ಚಿತ್ರದಲ್ಲಿ ತೋರಿಸಿರುವಂತೆ ಇವುಗಳಲ್ಲಿ ಐದು ವಿಭಿನ್ನ ಕೋಶಗಳಿವೆ. ನ್ಯೂಟ್ರೋಫಿಲ್, ಇಯೊಸಿನೊಫಿಲ್ ಮತ್ತು ಬೆಸೊಫಿಲ್ ಕೋಶಗಳನ್ನು ಗ್ರ್ಯಾನುಲೋಸೈಟ್ ಎನ್ನುವರು. ಗ್ರ್ಯಾನುಲೋಸೈಟ್‌ಗಳ ಸಂಗ್ರಹಣ ವಿಧಾನ
ಮೊದಲನೆಯದಾಗಿ ಸಂಪೂರ್ಣ ಕಾರ್ಯವಿಧಾನವನ್ನು ದಾನಿಗಳಿಗೆ ವಿವರಿಸಲಾಗುವುದು ಮತ್ತು ದಾನಿಗಳಿಂದ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ಹೆಚ್ಚಿನ ಗ್ರ್ಯಾನುಲೋಸೈಟ್ ಜೀವಕೋಶಗಳು ಮೂಳೆ ಮಜ್ಜೆಯಲ್ಲಿ ಅಥವಾ ಸ್ಪ್ಲೀನ್‌ನಲ್ಲಿವೆ. ರಕ್ತದಲ್ಲಿ ಈ ಜೀವಕೋಶದ ಸಂಖ್ಯೆ ಹೆಚ್ಚಿಸಲು ಗ್ರ್ಯಾನುಲೋಸೈಟ್ ದಾನಿಗಳಿಗೆ ದಾನ ಮಾಡುವ ಹಿಂದಿನ ದಿನ ಒಂದು ಚುಚ್ಚುಮದ್ದನ್ನು ನೀಡಲಾಗುತ್ತದೆ. ಮರುದಿನ, ಆಫೆರೆಸಿಸ್ ಎಂಬ ರಕ್ತವನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಬಳಸಿಕೊಂಡು ಗ್ರ್ಯಾನುಲೋಸೈಟ್‌ಗಳನ್ನು ದಾನ ಮಾಡಲಾಗುತ್ತದೆ. ಗ್ರ್ಯಾನುಲೋಸೈಟ್ ಉತ್ಪನ್ನಗಳನ್ನು ಕೇವಲ 24 ಗಂಟೆಗಳ ಕಾಲ ಮಾತ್ರ ಶೇಖರಣೆ ಮಾಡಿಡಬಹುದು. ಬೇರೆಲ್ಲ ರಕ್ತದ ಅಂಶಗಳಿಗೆ ಹೋಲಿಸಿದಲ್ಲಿ ಈ ಉತ್ಪನ್ನವನ್ನು ಅತ್ಯಂತ ಕಡಿಮೆ ಕಾಲ ಶೇಖರಿಸಿಡಬಹುದು.
Related Articles
ಕೀಮೋಥೆರಪಿ ಅಥವಾ ಮೂಳೆ ಮಜ್ಜೆಯ ಕಸಿ ಮಾಡಿದ ಜನರಲ್ಲಿ ಈ ಕೋಶಗಳ ಸಂಖ್ಯೆ ಕಡಿಮೆ ಇರುತ್ತದೆ. ನ್ಯೂಟ್ರೋಫಿಲ್ ಕ್ರಿಯೆಯ ಆನುವಂಶಿಕ ಅಸ್ವಸ್ಥತೆ ಹೊಂದಿರುವ ರೋಗಿಗಳಲ್ಲಿ, ಈ ರೋಗಿಗಳಲ್ಲಿ ಅಥವಾ ನ್ಯೂಟ್ರೊಪೆನಿಕ್ ಸೆಪ್ಸಿಸ್ ರೋಗಿಗಳಲ್ಲಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ಗಣನೀಯ ಅಸ್ವಸ್ಥತೆ ಮತ್ತು ಮರಣವನ್ನು ಉಂಟುಮಾಡುವ ಸಾಧ್ಯತೆ ಇದೆ. ಕೆಲವೊಮ್ಮೆ ಇಂತಹ ಸೋಂಕು ಯಾವುದೇ ಆಂಟಿಬಯೋಟಿಕ್ ಔಷಧಕ್ಕೂ ಕಡಿಮೆಯಾಗದಿರಬಹುದು.
Advertisement
ಇಂತಹ ತೀವ್ರವಾದ ಸೋಂಕಿನ ಅವಧಿಯಲ್ಲಿ ಗ್ರ್ಯಾನುಲೋಸೈಟ್ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ವಿಧಾನವು ಬಹಳ ಮುಖ್ಯವಾದುದು ಮತ್ತು ಉಪಕಾರಿಯಾದುದು. ಈ ಕೋಶಗಳ ವರ್ಗಾವಣೆಯು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಗ್ರ್ಯಾನುಲೋಸೈಟ್ ವರ್ಗಾವಣೆ ಸಾಮಾನ್ಯವಾಗಿ ಸ್ವೀಕರಿಸುವವರ ಗ್ರ್ಯಾನುಲೋಸೈಟ್ ಸಂಖ್ಯೆಯನ್ನು 1,000 ಕೋಶಗಳು /ಮೈಕ್ರೋ ಲೀಟರ್ (1,000 cells/uL) ಹೆಚ್ಚಿಸುತ್ತದೆ ಮತ್ತು ಎಣಿಕೆಗಳ ಹೆಚ್ಚಳವು ಸಾಮಾನ್ಯವಾಗಿ 24ರಿಂದ 48 ಗಂಟೆಗಳ ವರೆಗೆ ಇರುತ್ತದೆ.
ಯಾರು ಗ್ರ್ಯಾನುಲೋಸೈಟ್ ದಾನ ಮಾಡಬಹುದು? ಆರೋಗ್ಯವಂತ ಸ್ವಯಂಪ್ರೇರಿತ ದಾನಿಗಳು ಈ ಬಿಳಿ ರಕ್ತ ಕಣಗಳನ್ನು ನೀಡಬಹುದು. ಇವರಲ್ಲಿ ಒಬ್ಬ ರಕ್ತ ದಾನಿಗೆ ಇರಬೇಕಾದ ಎಲ್ಲ ರೀತಿಯ ಅರ್ಹತೆಗಳು ಇರಬೇಕು. ಜತೆಗೆ, ಗ್ರ್ಯಾನುಲೋಸೈಟ್ ದಾನಿಗಳು ಈ ಕೆಳಗಿನ ಆವಶ್ಯಕತೆಗಳನ್ನು ಪೂರೈಸಬೇಕಾಗಬಹುದು: ದಾನಿಯ ರಕ್ತದ ಗುಂಪು ರೋಗಿಗೆ ಹೊಂದಾಣಿಕೆಯಾಗಬೇಕು.
ಪರೀಕ್ಷೆ ಮಾಡಿದಾಗ ರಕ್ತ ವರ್ಗಾವಣೆ-ಸಂಬಂಧಿತ ಸಾಂಕ್ರಾಮಿಕ ರೋಗ ಇರಬಾರದು
ಗ್ರ್ಯಾನುಲೋಸೈಟ್ ಸಂಗ್ರಹವನ್ನು ಅಫೆರೆಸಿಸ್ ಸಂಗ್ರಹದ ಮೂಲಕ ನಡೆಸಲಾಗುತ್ತದೆ, ಇದಕ್ಕೆ ಉತ್ತಮವಾದ ರಕ್ತನಾಳವಿರಬೇಕು.
ಸ್ಟಿರಾಯ್ಡಗಳಿಗೆ ಅಲರ್ಜಿ ಇರಬಾರದು. ಬಿಳಿ ರಕ್ತ ಕಣಗಳನ್ನು ದಾನ ಮಾಡುವುದು ಸುರಕ್ಷಿತವೇ?
ದಾನಕ್ಕೆ ಮುಂಚೆ, ದಾನಿಗಳ ಅರ್ಹತೆಯನ್ನು ಪರೀಕ್ಷಿಸಲು ಆರಂಭಿಕ ವೈದ್ಯಕೀಯ, ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಸಂಪೂರ್ಣ ಪ್ರಕ್ರಿಯೆಯನ್ನು ತರಬೇತಿ ಪಡೆದ ವೈದ್ಯಕೀಯ ಸಿಬಂದಿ ಮೇಲ್ವಿಚಾರಣೆ ಮಾಡುತ್ತಾರೆ.
ದಾನಿಗಳಲ್ಲಿ ಕಂಡುಬರುವ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಸೌಮ್ಯ ಮತ್ತು ಸ್ವಯಂ-ಸೀಮಿತ.
ಆರೋಗ್ಯವಂತ ದಾನಿಗಳು 1 ವರ್ಷದಲ್ಲಿ ಗರಿಷ್ಠ 12 ಬಾರಿ ಅಪೆರೆಸಿಸ್ ಮೂಲಕ ಗ್ರ್ಯಾನುಲೋಸೈಟ್‌ಗಳನ್ನು ದಾನ ಮಾಡಬಹುದು.
ಈ ವಿಶೇಷ ರೀತಿಯ ರಕ್ತದಾನದ ನಡುವೆ ಕನಿಷ್ಠ 48 ಗಂಟೆಗಳ ಅಂತರ ಇರಬೇಕು ಮತ್ತು ದಾನಿ ಏಳು ದಿನಗಳ ಅವಧಿಯಲ್ಲಿ ಎರಡು ಬಾರಿಗಿಂತ ಹೆಚ್ಚು ಸಲ ಅಫೆರಿಸಿಸ್‌ಗೆ ಒಳಗಾಗಬಾರದು. ಆಫೆರೆಸಿಸ್ ಗ್ರ್ಯಾನುಲೋಸೈಟ್ ದಾನಿ ಸಾಮಾನ್ಯ ರಕ್ತದಾನ ಮಾಡಲು ಇಚ್ಛಿಸಿದಲ್ಲಿ ಕನಿಷ್ಠ ಎಂಟು ವಾರಗಳವರೆಗೆ ಕಾಯಬೇಕು.
ಮುಖ್ಯಸ್ಥರು, ರಕ್ತ ನಿಧಿ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ ಡಾ| ಶಮೀ ಶಾಸ್ತ್ರಿ,
ಪ್ರೊಫೆಸರ್ ಮತ್ತು ಮುಖ್ಯಸ್ಥರು, ರಕ್ತ ನಿಧಿ , ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ