Advertisement
ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಬಜೆಟ್‌ನ ಬಗ್ಗೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದನಾಯಕ ಅಬ್ದಲ್‌ವಾಜಿದ್, “ಸರ್ಕಾರ 2017-18 ಮತ್ತು 2019-20ನೇ ಸಾಲಿನ ಬಜೆಟ್ ತಡೆಹಿಡಿರುವುದರಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
Related Articles
Advertisement
ಬಜೆಟ್ ಅನುಷ್ಟಾನ ಸರ್ಕಾರದ ಮಟ್ಟದಲ್ಲಿ ಲೋಪವಾಗಿದೆ: ಬಜೆಟ್ ಅನುಮೋದನೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, “ಫೆ.23ರಂದು ಬಜೆಟ್‌ಗೆ ಪಾಲಿಕೆಯಲ್ಲಿ ಅನುಮೋದನೆ ಪಡೆದು, ಮಾ.1ಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಬಿಬಿಎಂಪಿಯ ಹಣಕಾಸು ವ್ಯವಸ್ಥೆಯ ಬಗ್ಗೆ ಅಂಕಿ-ಅಂಶ ಸಮೇತವಾಗಿ ವಿವರಿಸಲಾಗಿತ್ತು.
ಆದಾಯಕ್ಕಿಂತ ಹೆಚ್ಚು ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದರೆ, ಹಳೆಯ ಕಾಮಗಾರಿಗಳಿಗೆ ಮುಂದುವರಿಸುವುದಕ್ಕೆ ಕಷ್ಟವಾಗಲಿದ್ದು, ಇದು ಬಿಬಿಎಂಪಿಗೆ ಹೊರೆಯಾಗಲಿದೆ. ಹೀಗಾಗಿ, ಬಿಬಿಎಂಪಿ ಬಜೆಟ್‌ಅನ್ನು 9 ಸಾವಿರ ಕೋಟಿ. ರೂಗೆ ಮೀಸಲಿರಿಸುವಂತೆಯೂ ಮನವಿ ಮಾಡಲಾಗಿತ್ತು. ಸರ್ಕಾರ 11,500 ಕೋಟಿ. ರೂ ಬಜೆಟ್‌ಗೆ ಅನುಮೋದನೆ ನೀಡಿತ್ತು. ಮುಂದೆ ಬಿಬಿಎಂಪಿಯ ಆದಾಯಕ್ಕೆ ಅನುಗುಣವಾಗಿ ಪೂರಕ ಬಜೆಟ್ ರೂಪಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿತ್ತು.
ಸರ್ಕಾರದ ಆದೇಶದ ಮೇಲೆ ಬಿಬಿಎಂಪಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿತ್ತು. ಈ ಬಜೆಟ್‌ಅನ್ನು ಹಣಕಾಸು ಇಲಾಖೆ 9 ಸಾವಿರ ಕೋಟಿ.ರೂಗೆ ಸೀಮಿತಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆ ನೀಡಿತ್ತು. ಹಣಕಾಸು ಇಲಾಖೆಯ ಆದೇಶವನ್ನು ತಿರಸ್ಕರಿ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದು ಸಚಿವ ಸಂಪುಟಕ್ಕೆ ಮಾತ್ರ. ಸಚಿವ ಸಂಪುಟದಲ್ಲಿ ಅನುಮೋದನೆ ಸಿಗದೆ ಇರುವುದರಿಂದ ಬಜೆಟ್ ತಡೆಹಿಡಿಯಲಾಗಿದೆ. ಯಾವುದೇ ಹಂತದಲ್ಲೂ ಬಿಬಿಎಂಪಿಯಿಂದ ಲೋಪವಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಲೋಪವಾಗಿದೆ’ಎಂದು ಸ್ಪಷ್ಟನೆ ನೀಡಿದರು.
ಕಾಲಚಕ್ರ ತಿರುಗುತ್ತೆ ನೆನಪಿಟ್ಟುಕೊಳ್ಳಿ: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ. ಸಮಯ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಾಗುವುದಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ ಸ್ವಾರಸ್ಯಕರ ಘಟನೆ ನಡೆಯಿತು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ನಾಲ್ಕು ವರ್ಷಗಳಿಂದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ.
ಕಾಂಗ್ರೆಸ್ ಶಾಸಕರು, ಸದಸ್ಯರಿಗೆ ಹೆಚ್ಚು ಅನುದಾನ ಕೊಟ್ಟು, ಬಿಜೆಪಿ ಶಾಸಕರು ಮತ್ತು ಸದಸ್ಯರಿಗೆ ಲಕ್ಷದ ಲೆಕ್ಕದಲ್ಲಿ ಅನುದಾನ ಕೊಡಲಾಗಿದೆ. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಂದೆ ಬಿಬಿಎಂಪಿಯಲ್ಲೂ ನಾವು ಅಧಿಕಾರಕ್ಕೆ ಬರಬಹುದು. ನಾವು ನಿಮ್ಮ ಹಾಗೆ ಅನುದಾನಕ್ಕೆ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ಅಮಾನವಾಗಿ ಅನುದಾನ ನೀಡುತ್ತೇವೆ. ಕಾಲ ಚಕ್ರ ಬದಲಾಗುತ್ತೆ ಎನ್ನುವುದು ನೆನಪಿರಲಿ ಎಂದರು. ನಾವೂ ಅದನ್ನೇ ಹೇಳುತ್ತಿದ್ದೇವೆ ಎಂದು ಎಂ. ಶಿವರಾಜು ಮತ್ತು ಪದ್ಮಾವತಿ ಅವರು ತಿರುಗೇಟು ನೀಡಿದರು.
ನುಡಿದಂತೆ ನಡೆಯುತ್ತಿದ್ದೇವೆ: ಬಿಬಿಎಂಪಿಯ ಸಮ್ಮಿಶ್ರ ಆಡಳಿತ ನುಡಿದಂತೆ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಅಡಮಾನವಿಟ್ಟಿದ್ದ ಆಸ್ತಿಗಳನ್ನು ನಾವು ಬಿಡಿಸಿಕೊಂಡಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹೇಳಿದರು. ಬಿಬಿಎಂಪಿಯಲ್ಲಿ 2008-13ರವರೆಗೆ ಬಿಜೆಪಿ ಆಡಳಿತದಲ್ಲಿತ್ತು. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇತ್ತು. ಆಗ ಬಜೆಟ್‌ಗಾತ್ರ ಬಿಬಿಎಂಪಿ ಆದಾಯಕ್ಕಿಂತ ಹೆಚ್ಚಾಗಿತ್ತು. ಬಿಬಿಎಂಪಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ 11 ಆಸ್ತಿಗಳನ್ನು ಅಡಮಾನವಿಟ್ಟು 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲವನ್ನೂ ಪಡೆದಿತ್ತು. ಆಗ ಇಲ್ಲದ ವಿರೋಧ ಈಗೇಕೆ ಎಂದು ಪ್ರಶ್ನೆ ಮಾಡಿದರು.
ಬಜೆಟ್ ಅನುಮೋದಿಸದಿದ್ದರೆ ಪ್ರತಿಭಟನೆ: ರಾಜ್ಯ ಸರ್ಕಾರ ಬಜೆಟ್‌ಗೆ ಅನುಮೋದನೆ ನೀಡದೆ ರಾಜಕೀಯ ಮಾಡುತ್ತಿದೆ. ಬೆಂಗಳೂರಿನ ಜನರು ಬಿಜೆಪಿಯ ನಾಲ್ವರು ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ನೀಡುವ ಕೊಡುಗೆ ಇದೇನಾ ಎಂದು ಎಂ.ಶಿವರಾಜು ಅವರು ಪ್ರಶ್ನೆಮಾಡಿದರು. ಇನ್ನೊಂದು ವಾರದಲ್ಲಿ ಬಜೆಟ್‌ಗೆ ಅನುಮೋದನೆ ನೀಡಿದ್ದರೆ ಕಾಂಗ್ರೆಸ್‌ನ ಶಾಸಕರು, ಬಿಬಿಎಂಪಿ ಸದಸ್ಯರು ಪ್ರತಿಭಟನೆ ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಗಣೇಶ ವಿಸರ್ಜನೆ ಮಾಡುವುದು ಹೇಗೆ?: ಸರ್ಕಾರ ಬಜೆಟ್‌ಗೆ ತಡೆ ಹಿಡಿದಿರುವುದರಿಂದ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ, ಸಂಚಾರಿ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಬಜೆಟ್ ಅನುಮೋದನೆ ನೀಡದೆ ಇರುವುದರಿಂದ ಬಿಬಿಎಂಪಿಗೆ ಪ್ರತಿ ಹಂತದಲ್ಲೂ ಸಮಸ್ಯೆಯಾಗುತ್ತಿದೆ ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಸಭೆಯಲ್ಲಿ ಕೇಳಿ ಬಂದದ್ದು…ಸಮ್ಮಿಶ್ರ ಸರ್ಕಾರ ಅಸ್ತಿರಗೊಳಿಸಿ, ನೀವು ಸರ್ಕಾರ ರಚನೆ ಮಾಡಿದ್ದೀರಿ. ಜನಾದೇಶವಿಲ್ಲದಿದ್ದರೂ ಅಧಿಕಾರಕ್ಕೆ ಬಂದಿದ್ದೀರಿ.
-ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ ಬಿಜೆಪಿ ಅವಧಿಯಲ್ಲೇ ವೈಟ್‌ಟಾಪಿಂಗ್ ಯೋಜನೆ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಪ್ರಶಸ್ತಿಯನ್ನೂ ನೀಡಿದೆ.
-ಮಂಜುನಾಥ ರೆಡ್ಡಿ, ಮಾಜಿ ಮೇಯರ್ ಇನ್ನು ಮುಂದೆ ನಿಮ್ಮ ಖೇಲ್ ಖತಂ ದುಖಾನ್ ಬಂದ್! (ಆಡಳಿತ ಪಕ್ಷವನ್ನು ಉದ್ದೇಶಿಸಿ)
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ ನಿಮ್ಮ (ಬಿಜೆಪಿ) ಅವಧಿಯಲ್ಲಿ ಕಲರ್ ಇಂಕ್ ಬಳಸಿ ಚೆಕ್‌ಗಳಿಗೆ ಸಹಿ ಹಾಕಿ ಹಣ ಬಿಡಿಸಿಕೊಂಡಿದ್ದು ಗೊತ್ತಿದೆ. ಅದೇ ರೀತಿ ಮ್ಯಾಜಿಕ್ ಬಾಕ್ಸ್ ನಿರ್ಮಾಣ, ರಾತ್ರಿ ಟೆಂಡರ್ ಆಹ್ವಾನಿಸಿ ಲೂಟಿ ಮಾಡಿದ್ದೀರಿ.
-ಪದ್ಮಾವತಿ, ಮಾಜಿ ಮೇಯರ್