Advertisement

ಹಾದಿ ತಪ್ಪಿರುವ ಸಮಾಜಕ್ಕೆ ಬೇಕಿದೆ ಕಾಯಕಲ್ಪ

10:59 PM Oct 05, 2022 | Team Udayavani |

ನಮ್ಮ ಆರಾಧನಾ ಕೇಂದ್ರಗಳು ಧರ್ಮ-ಅಧ್ಯಾತ್ಮ-ಸಂಸ್ಕಾರ-ಸಂಸ್ಕೃತಿಯ ಔನ್ನತ್ಯದ ತೊಟ್ಟಿಲುಗಳು. ಇವು ಆಯಾಯ ಭೌಗೋಳಿಕತೆಯ ಆಕರ್ಷಣೆಯ ಕೇಂದ್ರ ಬಿಂದುಗಳು. ಜತೆಗೆ ಆರಾಧನಾಲಯಗಳು ಸಮಾಜದ, ಊರು, ಪ್ರದೇಶಗಳ ಪ್ರಗತಿಯ ಮಾನದಂಡ ಕೂಡ ಎಂಬುದು ಪ್ರಾಜ್ಞರ ಅಭಿಮತ. ನಮ್ಮ ಸುತ್ತಮುತ್ತಲ ಅಸಂಖ್ಯಾತ ಆರಾಧನಾ ಕೇಂದ್ರಗಳು ನವರೂಪ ಪಡೆಯುತ್ತಿರುವುದು ಸರ್ವವಿದಿತ, ಸಂತಸಕರ. ಇನ್ನೂ ಪಾಳುಬಿದ್ದಿರುವ ಅಪಾರ ಸಂಖ್ಯೆಯ ಇಂಥ ಕೇಂದ್ರಗಳನ್ನು ಈ ಪ್ರಕ್ರಿಯೆಗೆ ಒಳಪಡಿಸುವ ಆವಶ್ಯಕತೆ ಇದೆ.

Advertisement

ಇಂಥ ಕಾರ್ಯಗಳಿಂದ ಸಮಾಜ, ಊರು ಮತ್ತಷ್ಟು ಚೈತನ್ಯಶಾಲಿ ಮತ್ತು ಪುನರುತ್ಥಾನಗೊಳ್ಳುವುದು ಎಂಬ ಹಿರಿಯರ ವ್ಯಾಖ್ಯಾನ ನಿಸ್ಸಂಶಯವಾಗಿ ಸಾಬೀತಾಗುತ್ತಿದೆ. ಆದರೆ ಆರಾಧನಾ ಕೇಂದ್ರಗಳು ರಾರಾಜಿಸಿದರೆ ಸಾಕೆ? ಸಮಾಜ ಕಾಯಕಲ್ಪ ಪಡೆಯಬೇಡವೆ? ಸಮಾಜ ಯಾಕೆ ಇನ್ನೂ ಹಲವಾರು ಸಮಸ್ಯೆಗಳಿಂದ ಜರ್ಝರಿತವಾಗಿದೆ? ಎಂಬ ಪ್ರಶ್ನೆ ನಮ್ಮ ಅಂತಃಕರಣವನ್ನು ಕಾಡದೇ ಇರ ಲಾರದು. ಈ ಪ್ರಶ್ನೆ ಉದ್ಭವಿಸಲು ಸಕಾರಣಗಳೂ ಇವೆ. ದುಃಖಕರ ಅಂಶಗಳೆಂದರೆ ಪ್ರಸಕ್ತ ಸಮಾಜದ ಅಪಸವ್ಯ, ದುರಂತಗಳು ಸಮಾಜದ ಪ್ರಾಮಾಣಿಕತೆ- ನೆೃತಿಕತೆಯ ವಿಫ‌ಲತೆಯನ್ನು ಬೆಟ್ಟು ಮಾಡುತ್ತಿವೆ.

ನಾನಾ ಕಾರಣಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ನಡೆಯುತ್ತಿರುವ ಕೌಟುಂಬಿಕ ಕಲಹ, ಆಸ್ತಿ ವಿವಾದ, ಲಂಚ, ಭ್ರಷ್ಟಾಚಾರ, ತಂಟೆ- ತಕರಾರು- ತಗಾದೆ, ಹಿರಿಯರ ಅವಗಣನೆ, ಕೊಲೆ, ಅತ್ಯಾಚಾರ, ದಾಂಪತ್ಯದಲ್ಲಿ ಬಿರುಕು, ವಿವಿಧ ಮೋಸ-ವಂಚನೆ… ಇವೆಲ್ಲವು ನಮ್ಮ ಕಣ್ಣಿಗೆ ರಾಚುತ್ತಿವೆ. ಹಲವು ಅಪರಾಧಗಳು ನ್ಯಾಯವನ್ನೇ ಅಣಕಿಸುವಂತೆ, ಕಾನೂನಿಗೂ ಸವಾಲು ಎಸೆಯುವಂತೆ ನಡೆಯುತ್ತಿವೆ. ಪ್ರೀತಿ- ಪ್ರೇಮದ ಜಾಗವನ್ನು ದ್ವೇಷ- ಮತ್ಸರಾದಿಗಳು ಕಬಳಿಸಿವೆ. ಕರುಡು ಕಾಂಚಾಣದ ನರ್ತನ ಬಿರುಸಾಗಿದೆ. ಪ್ರಾಮಾಣಿಕತೆ-ನೆೃತಿಕತೆಗಳು ಮೂಲೆ ಗುಂಪಾಗಿವೆ. ಧರ್ಮ, ಸೇವೆ, ದಿವ್ಯ-ಪಾವನ ಧಾಮಗಳಲ್ಲಿ ದಂಧೆಗಳು ನುಸುಳಿವೆ.

ನಾನೇ, ನನ್ನ ಧೋರಣೆಗಳೇ ಸರಿ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅನುಕಂಪ, ಸಹನೆ, ಉಪಕಾರ ಸ್ಮರಣೆ, ಪಾಪಪ್ರಜ್ಞೆ, ವ್ಯವ ಧಾನ, ಸಂಯಮಗಳು ಮರೆಯಾಗುತ್ತಿವೆ. ವಿಶ್ವಾಸ- ನಂಬಿಕೆಗಳಿಂದ ತುಂಬಿ ತುಳುಕಬೇಕಾದ ಸಮಾಜದಲ್ಲಿ ಅವಿಶ್ವಾಸ-ಅಪನಂಬಿಕೆಗಳ ಮೇಲಾಟವಿದೆ. ಸಮಾಜದ ಅಲ್ಲಲ್ಲಿ ಮೇಲಿನ ಅಪಸವ್ಯಗಳಿಗೆ ಅಪವಾದಗಳಿದ್ದರೂ ಬಹುತೇಕ ಸಮಾಜ ಇವೆಲ್ಲವುಗಳಿಂದ ತತ್ತರಿಸಿರು ವುದಂತೂ ಅಕ್ಷರಶಃ ಸತ್ಯ. ಹೀಗಿರುವಾಗ ಸಮಾಜ ಶುದ್ಧೀ ಕರಣಗೊಂಡು ಶಿಷ್ಟಾಚಾರಗಳಿಂದ ವೆೃವಿಧ್ಯಮಯ ವಾಗಬೇಕಿದೆ. ಇತ್ತ ಇಡೀ ಸಮಾಜ ಚಿಂತನೆ ಹರಿಸಬೇಕು.

“ತಾನು ಸರಿಯಾದರೆ ಲೋಕವೇ ತಿಳಿಯಾಗುವುದು’ ಎಂಬ ಮಾತಿನಂತೆ ನಡೆದಲ್ಲಿ ನೆೃತಿಕತೆ- ಪ್ರಾಮಾಣಿಕತೆ ಯಿಂದ ಸದಾ ಸಮಾಜ ಮಿಂದಲ್ಲಿ, ಪ್ರೀತಿ- ಪ್ರೇಮದಲ್ಲಿ ವಿಹರಿಸಿದಲ್ಲಿ ಸಮಾಜ- ಲೋಕ ನವ ಸನ್ಮಾರ್ಗದ ಅರುಣೋದಯ ಕಾಣುವ ದಿನ ದೂರವಿಲ್ಲ. ಈ ಶುಭ ಘಳಿಗೆ ಬೇಗ ನಮ್ಮನ್ನು ಆವರಿಸಲಿ.

Advertisement

-ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next