ಪಡುಬಿದ್ರಿ: ಹೆಜಮಾಡಿಯ ಕೆನರಾ ಬ್ಯಾಂಕ್ ಶಾಖೆಯಿಂದ ವಂಚಿಸಿ ಹಣ ಲಪಟಾಯಿಸಿರುವ ಪ್ರಕರಣ ದಲ್ಲಿ ವರುಣ್ ಕರ್ಕೇರ ಅವರ ಹೆಸರಲ್ಲಿ ಉತ್ತರ ಪ್ರದೇಶದಿಂದ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿರುವುದು ಹಾಗೂ ಮೋಸದ ಮನವಿ ಪತ್ರ ಸಲ್ಲಿಸಿ ವಿವಿಧ ನಕಲಿ ಖಾತೆಗಳಿಗೆ ಹಣ ವರ್ಗಾವಣೆಗೊಳಿಸಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿರುವುದಾಗಿ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ.
ವಂಚನೆಯ ಈ ಹೊಸ ಜಾಲದ ಮೂಲಕ ಕೆನರಾ ಬ್ಯಾಂಕ್ ಹೆಜಮಾಡಿ ಶಾಖೆಯಿಂದ 27.99 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ಕೊಳ್ಳಲಾಗಿತ್ತು. ಈ ಕುರಿತಾಗಿ ಹೆಜಮಾಡಿ ಶಾಖಾ ಇನ್‌ಚಾರ್ಜ್ ಪ್ರಬಂಧಕಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಠಾಣಾಧಿಕಾರಿ ಪ್ರಸನ್ನ ಎಂ.ಎಸ್., ಇಂತಹ ಸೈಬರ್ ಕ್ರೈಮ್ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವಂತೆಯೂ, ಘಟನೆಗಳು ನಡೆದರೆ ತತ್‌ಕ್ಷಣ 1930 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ವಿನಂತಿಸಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿ ಯಲ್ಲಿದ್ದು, ನಕಲಿ ಖಾತೆಗಳು ಉತ್ತರಪ್ರದೇಶದ್ದಾಗಿವೆ. ಸದ್ಯಕ್ಕೆ ಮೂರೂ ಖಾತೆಗಳನ್ನು ಸ್ತಬ್ಧಗೊಳಿಸಲು ಹಾಗೂ ದುಷ್ಕರ್ಮಿಗಳ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ. ಮೂವರು ಖಾತೆದಾರರ ಪೈಕಿ ಹರಪಾಲ್ ಸಿಂಗ್ ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಆತನ ಹಾಗೂ ಖಾತೆಯ ಸಮಗ್ರ ಮಾಹಿತಿ ಒದಗಿಸಲು ಕೆನರಾ ಬ್ಯಾಂಕ್ ಹೆಜಮಾಡಿ ಶಾಖೆಗೆ ತಿಳಿಸಲಾಗಿದೆ.
ವರುಣ್ ಕರ್ಕೇರ ಹೆಸರು ದುರ್ಬಳಕೆ
ವರುಣ್ ಕರ್ಕೇರ ಹೆಸರು, ನಕಲಿ ಸಿಮ್ ಬಳಸಿ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿಯು ಘಾಟ್ಕೆ ಕರ್ಕೇರ ಕಂಪೆನಿಯ ನಕಲಿ ಲೆಟರ್‌ಹೆಡ್, ಸೀಲ್, ಸಹಿ, ಖಾತಾ ಸಂಖ್ಯೆಗಳನ್ನು ಬಳಸಿಕೊಂಡು 3 ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದನು. ಇದಾದ ಸ್ವಲ್ಪ ಸಮಯದ ಬಳಿಕ ಘಾಟ್ಕೆ ಕರ್ಕೇರ ಕಂಪೆನಿಯ ಮ್ಯಾನೇಜರ್ ಬ್ಯಾಂಕ್ ಶಾಖೆಗೆ ಕರೆಮಾಡಿ ಕಂಪೆನಿ ಅಕೌಂಟ್‌ನಿಂದ ಹಣ ವರ್ಗಾವಣೆಗೊಂಡ ಬಗ್ಗೆ ಕೇಳಿದಾಗಲೇ ಮೋಸ ಹೋದ ಸಂಗತಿ ಬಯಲಿಗೆ ಬಂತು.
ಈ ಸಂದರ್ಭ ಎಚ್ಚೆತ್ತ ಬ್ಯಾಂಕ್ ಸಿಬಂದಿ ಒಂದು ಖಾತೆಗೆ ಹಣ ವರ್ಗಾವಣೆಯಾಗುವುದನ್ನು ಸ್ಥಗಿತ ಗೊಳಿಸಿದ್ದರು. ಉಳಿದೆರಡು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು.