ಅಫಜಲಪುರ (ಕಲಬುರಗಿ): ಮಲಗಿದ್ದ ಮಹಿಳೆಯೊಬ್ಬರ ಬೆನ್ನ ಮೇಲೆ ಹಾವೊಂದು ಹೆಡೆಯೆತ್ತಿ ಸುಮಾರು ಒಂದು ಗಂಟೆ ಕಾಲ ಕುಳಿತಿದ್ದರೂ ಆಕೆಗೆ ಯಾವುದೇ ಹಾನಿ ಮಾಡದೆ ಇಳಿದು ಹೋದ ಕುತೂಹಲಕಾರಿ ಘಟನೆ ನಡೆದಿದೆ.
ಮಲ್ಲಾಬಾದ ಗ್ರಾಮದ ರೈತ ಮಹಿಳೆ ಭಾಗಮ್ಮ ಹಣಮಂತ ಬಡದಾಳ ಅವರು ತಮ್ಮದೇ ತೋಟದಲ್ಲಿ ಕೃಷಿ ಕೆಲಸ ಮುಗಿಸಿ ಊಟ ಮಾಡಿ, ಗಿಡವೊಂದರ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
ಹಾವು ಮೈಮೇರಿದ್ದು ಗಮನಕ್ಕೆ ಬಂದ ಕೂಡಲೇ ಅವರು “ಹೇ ಮಲ್ಲಯ್ಯ, ಶ್ರೀಶೈಲ ಮಲ್ಲಯ್ಯ, ಸ್ವಾಮಿ ಕಾಪಾಡು ನನ್ನಪ್ಪ, ನೀ ಮಾಯವಾಗೋ ನನ್ನಪ್ಪ, ಹೇ ಮಲ್ಲಯ್ಯ’ ಎಂದು ದೇವರ ಜಪ ಮಾಡಿದ್ದರು. ಆಕೆಯ ಜಪ ಕೇಳಿಸಿತೋ ಎಂಬಂತೆ ಸುಮಾರು ಒಂದು ತಾಸು ಕಳೆದು ಹಾವು ಕೆಳಗಿಳಿದು ಹೋಯಿತು.
ವಿಷಯ ತಿಳಿದ ಜನ ಓಡೋಡಿ ಬಂದು ಈ ಅತ್ಯಪರೂಪದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು. ಜನರ ಗದ್ದಲಕ್ಕೂ ಹಾವು ಸರಿದಾಡಿರಲಿಲ್ಲ. ಭಾಗಮ್ಮ ಅವರ ಮನೆಯವರು ಕೂಡ ದೇವರನ್ನು ಸ್ಮರಿಸಲು ಹೇಳಿದ್ದರು.
ಮಗನೇ ಹಾವಿನ ರೂಪದಲ್ಲಿ ಬಂದ?
ಭಾಗಮ್ಮಳ ಮಗ ನಾಗಪ್ಪ ಕಳೆದ ವರ್ಷ ಮೃತಪಟ್ಟಿದ್ದು, ಅವನ ಅಂತ್ಯಕ್ರಿಯೆಯನ್ನು ಅದೇ ತೋಟದಲ್ಲಿ ನೆರವೇರಿಸಲಾಗಿತ್ತು. ಆತನೇ ನಾಗರಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.