ಗಾಂಧಿ ಬಜಾರ್ ರಸ್ತೆಗೆ ಕಾಯಕಲ್ಪ ಕಲ್ಪಿಸಲು ನಡೆದಿರುವ 18 ಕೋಟಿ ರೂ.ಗಳ ವೆಚ್ಚದ ವೈಟ್‌ಟ್ಯಾಪಿಂಗ್ ಕಾಮಗಾರಿ ಇಡೀ ರಸ್ತೆಯ ಚಿತ್ರಣವನ್ನು ಬದಲಿಸಲಿದೆ. ಸುಸಜ್ಜಿತ ಪಾದಚಾರಿ ಮಾರ್ಗವೂ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಜತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಲೆಂದೇ ಕಟ್ಟೆ ಮಾದರಿ ಸ್ಥಳ ವ್ಯವಸ್ಥೆ ಬಜಾರ್ ಗೊಂದು ಮೆರುಗು ತಂದುಕೊಡಲಿದೆ ಈ ಬಗ್ಗೆ ಈ ವಾರದ ಸುದ್ದಿಸುತ್ತಾಟದಲ್ಲಿ ಒಂದು ನೋಟ.
ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ದಶಕಗಳ ಇತಿಹಾಸ ಹೊಂದಿರುವ ಮಾರುಟ್ಟೆಗಳಲ್ಲಿ ಒಂದಾದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಗೆ ಸ್ಮಾರ್ಟ್ ಟಚ್ ನೀಡಲು ಬಿಬಿಎಂಪಿ ಮುಂದಾಗಿದ್ದು, ಸದ್ಯದಲ್ಲೇ ಗಾಂಧಿ ಬಜಾರ್ ಹೊಸ ರೂಪ ಪಡೆದುಕೊಳ್ಳಲಿದೆ. ಗಾಂಧಿ ಬಜಾರ್ ಸುತ್ತ-ಮುತ್ತಲು ಅತ್ಯಂತ ಪುರಾತನ ದೇವಸ್ಥಾನಗಳಿರುವ ಕಾರಣ ಈ ಸ್ಥಳ ಪ್ರಸಿದ್ಧಿ ಪಡೆದಿದ್ದು, ಇಲ್ಲಿ ತಲಾ-ತಲಾಂತರದಿಂದ ನೂರಾರು ಕುಟುಂಬಸ್ಥರು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ಹತ್ತಾರು ಬಗೆಯ ಹೂವುಗಳು, ಹಣ್ಣು-ತರಕಾರಿ, ಪೂಜಾ ಸಾಮಗ್ರಿ ಮಳಿಗೆ, ಬಟ್ಟೆ ಹಾಗೂ ಕಾಂಡಿಮೆಂಟ್ ವ್ಯಾಪಾರಿ ಅಂಗಡಿಗಳಿಗೆ ಇದು ಹೆಸರುವಾಸಿ. ಇದೀಗ, ಈ ಪಾರಂಪರಿಕ ಸ್ಥಳಕ್ಕೆ ಬಿಬಿಎಂಪಿಯು ಸ್ಮಾರ್ಟ್ ಟಚ್ ನೀಡಲು ಮುಂದಾಗಿದ್ದು, ಠಾಕೂರ್ ಪಾರ್ಕ್‌ನಿಂದ ರಾಮಕೃಷ್ಣ ಆಶ್ರಮ ವೃತ್ತದವರೆಗೆ ಸುಮಾರು 7.5 ಮೀಟರ್ ಅಗಲದ ವೈಟ್‌ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಅದರ ಜತೆಗೆ ನೀರು ಸರಬರಾಜು, ಸ್ಯಾನಿಟರಿ ಲೈನ್, ಬೆಸ್ಕಾಂ, ಮಳೆನೀರಿನ ಕೊಯ್ಲು ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒಳಗೊಂಡಂತೆ ರಸ್ತೆಯ ಎರಡು ಕಡೆಯಲ್ಲಿ ಗ್ರ್ಯಾನೈಟ್ ನಿಂದ ನಿರ್ಮಿಸುವ ಸುಸಜ್ಜಿತವಾದ ಪಾದಚಾರಿ ಮಾರ್ಗ, ಮೂರು ಮೀಟರ್ ವಾಹನ ನಿಲುಗಡೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಕಟ್ಟೆ ರೀತಿಯ ಸ್ಥಳದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಡಲು ಯೋಜನೆ ರೂಪಿಸಲಾಗಿಸದೆ.
18 ಕೋಟಿ ರೂ. ವೆಚ್ಚ ತಗಲುವ ಸಾಧ್ಯತೆ: ಸುಮಾರು ಎಂಟು ಕೋಟಿ ವೆಚ್ಚದ ವೈಟ್‌ಟ್ಯಾಪಿಂಗ್ ಕಾಮಗಾರಿಯೂ ಪಾರ್ಕಿಂಗ್, ಪಾದಚಾರಿ ಮಾರ್ಗ ಹಾಗೂ ನಾನಾ ಸುವ್ಯವಸ್ಥೆಗಳನ್ನು ಕಲ್ಪಿಸಿಕೊಡುವ ಮತ್ತು ಪಾರಂಪರಿಕತನ ವನ್ನು ಕಾಪಾಡುವ ನಿಟ್ಟಿನಲ್ಲಿ ಇದೀಗ 18 ಕೋಟಿ ರೂ.ಗಳು ತಗಲುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿಯು ಲಾರಿ ಮುಷ್ಕರ ಹಾಗೂ ಇನ್ನಿತರೆ ಕಾರಣ ಗಳಿಂದ ತಡವಾಗಿದ್ದು, ಮುಂದಿನ ಏಪ್ರಿಲ್ ತಿಂಗಳ ಅಂತ್ಯದೊಳಗೆ ಗಾಂಧಿ ಬಜಾರ್‌ಗೆ ನೂತನ ಲುಕ್ ನೀಡಲಾಗುತ್ತದೆ. ಈ ಕಾಮ ಗಾರಿಯಿಂದಾಗಿ ಈಗಿರುವ ಸುಮಾರು 40 ರಿಂದ 50 ಮರಗಳಿಗೆ ಯಾವುದೇ ರೀತಿಯ ತೊಂದರೆಯಾ ಗದಂತೆ ಜೀವಾಮೃತ, ನೀರು- ಗೊಬ್ಬರ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳಾವಕಾಶ ವನ್ನು ನೋಡಿಕೊಂಡು ಸುಮಾರು 20ರಿಂದ 30 ಹೊಸ ಗಿಡಗಳನ್ನು ನೆಡುವ ಚಿಂತನೆಯಿದೆ.
200ಕ್ಕೂ ಹೆಚ್ಚು ನಾನಾ ರೀತಿಯ ಮಳಿಗೆಗಳು: ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಗಾಂಧಿ ಬಜಾರ್‌ನಲ್ಲಿ ಒಂದೆಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೆ, ಮತ್ತೂಂದೆಡೆ ಈ ನಿಧಾನಗತಿ ಕಾಮಗಾರಿಯಿಂದಾಗಿ ವಿದ್ಯಾರ್ಥಿ ಭವನ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ನಾನಾ ರೀತಿಯ ಮಳಿಗೆಗಳು, 90ರಿಂದ 100ರಷ್ಟು ಬೀದಿ ಬದಿ ವ್ಯಾಪಾರಿಗಳ ವ್ಯಾಪಾರವು ಕುಂಠಿತಗೊಂಡಿದೆ. ದಸರಾ, ದೀಪಾವಳಿ, ವರಮಹಾಲಕ್ಷ್ಮೀ ಪೂಜೆ, ಯುಗಾದಿ, ಸಂಕ್ರಾತಿಯಂತಹ ವಿಶೇಷ ಹಬ್ಬಗಳಿಗೆ ಹೂವು-ಹಣ್ಣು ಖರೀದಿಸಲು ಜನರು ನಗರದ ವಿವಿಧ ಭಾಗಗಳಿಂದ ಗಾಂಧಿ ಬಜಾರಿಗೆ ಆಗಮಿಸುತ್ತಾರೆ. ಏಕೆಂದರೆ, ಇಲ್ಲಿ ಉತ್ತಮ ಗುಣಮಟ್ಟದ ಹತ್ತಾರು ಬಗೆಯ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ. ಮೊದಲು ದಿನಕ್ಕೆ ಕಡಿಮೆ ಅಂದರೂ 10ರಿಂದ 15 ಸಾವಿರ ಮೌಲ್ಯದ ವ್ಯಾಪಾರ ಮಾಡಲಾಗುತ್ತಿತ್ತು. ಆದರೆ, ಕೆಲವು ತಿಂಗಳುಗಳಿಂದ ಹೂವು ಕಟ್ಟುವವರಿಗೂ ಕೂಲಿ ನೀಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಮನೆ ನಡೆಸುವುದು, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಆದ್ದರಿಂದ ಬಿಬಿಎಂಪಿಯವರು ಈ ರೀತಿಯ ಕಾಮಗಾರಿ ನಡೆಸುವ ಮುನ್ನ ಬೀದಿ-ಬದಿ ವ್ಯಾಪಾರಿಗಳನ್ನೂ ಗಮನದಲ್ಲಿಟ್ಟುಕೊಂಡು, ಅವರಿಗೆ ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡಿದ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಸ್ಥಳೀಯ ಹೂವಿನ ವ್ಯಾಪಾರಿ ಮುನಿಯಮ್ಮ ಹೇಳುತ್ತಾರೆ.
Related Articles
ಸುಮಾರು 26 ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದು, ದಿನಕ್ಕೆ 1,000-1,200 ರೂ.ಗಳನ್ನು ಸಂಪಾದಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪರಿಣಾಮದಿಂದ ವ್ಯಾಪಾರ ಕುಂಠಿತಗೊಂಡಿದ್ದು, ಅದರಿಂದ ಇತ್ತೀಚೆಗೆ ಹೊರಬಂದು ವ್ಯಾಪಾರ ಪ್ರಾರಂಭಿಸಲಾಗಿದೆ. ಅಷ್ಟರಲ್ಲಿ 7.5 ಮೀಟರ್ ಅಗಲದ ವೈಟ್‌ಟ್ಯಾಪಿಂಗ್ ರಸ್ತೆ ಕಾಮಗಾರಿ ಯಿಂದಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಆಗಮಿಸುವ ಗ್ರಾಹಕರ ಸಂಖ್ಯೆ ಕ್ಷೀಣಿಸಿದ್ದು, ಇದೀಗ ದಿನಕ್ಕೆ 200 ರೂ. ಸಂಪಾದಿಸುವುದು ಕಷ್ಟವಾಗಿದೆ. ನಾವು ಹಾಕುವ ಬಂಡವಾಳವು ಸಿಗದೇ, ತುಂಬಾ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಹೂವು ವ್ಯಾಪಾರಿಯ ಕುಟುಂಬ ಮಾತ್ರವಲ್ಲದೇ, ಹೂ ಕಟ್ಟುವ ಕೈಗಳು ನಮ್ಮ ವ್ಯಾಪಾರವನ್ನು ನೆಚ್ಚಿಕೊಂಡು ಬದುಕುತ್ತಾರೆ. ಆದ್ದರಿಂದ ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ, ಬೀದಿಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶವನ್ನು ನೀಡಬೇಕು ಎಂದು ಬೀದಿಬದಿಯ ಹೂವಿನ ವ್ಯಾಪಾರಿ ಕಿರಣ್ ತಿಳಿಸುತ್ತಾರೆ.
ಗಾಂಧಿ ಬಜಾರ್ ಕಾರ್ಪೋರೇಷನ್ ಮುಖ್ಯ ಮಾರುಕಟ್ಟೆ : ಸುಮಾರು 50 ವರ್ಷಗಳ ಇತಿಹಾಸವಿರುವ ಗಾಂಧಿ ಬಜಾರ್ ಕಾರ್ಪೋರೇಷನ್ ಮುಖ್ಯ ಮಾರುಕಟ್ಟೆಯಲ್ಲಿ ಒಟ್ಟು 35 ನಾನಾ ರೀತಿ ಮಳಿಗೆಗಳು ಇವೆ. ಈ ಪಾರಂಪರಿಕ ಕಟ್ಟಡವನ್ನು ಕೆಡವಿ, ನೂತನ ಕಟ್ಟಡವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಅದರಂತೆ ನೂತನ ಕಟ್ಟಡದಲ್ಲಿ ಎರಡು ಫ್ಲೋರ್‌ನಲ್ಲಿ ವಿವಿಧ ಮಳಿಗೆಗಳಿಗೆ ಸ್ಥಳ ಮೀಸಲಿಡಲಿದ್ದು, ಉಳಿದ ಎರಡು ಅಥವಾ ಮೂರು ಫ್ಲೋರ್‌ಗಳಲ್ಲಿ ದ್ವಿಚಕ್ರ ಮತ್ತು ಕಾರುಗಳಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.ಆದರೆ, ಸುಮಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಇಲ್ಲಿನ ಖಾಯಂ ವರ್ತಕರಿಗೆ ನೂತನ ಕಟ್ಟಡದಲ್ಲಿ ನಿಗದಿತ ಸ್ಥಳ ನೀಡುವುದಾಗಿ ಲಿಖೀತ ಭರವಸೆ ನೀಡದ ಕಾರಣ, ಅಲ್ಲಿನ 35 ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಸ್ಥಳಾಂತರಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಗಾಂಧಿ ಬಜಾರ್ ಕಾರ್ಪೋರೇಷನ್ ಮುಖ್ಯ ಮಾರುಕಟ್ಟೆ ಅಂಗಡಿ ಬಾಡಿಗೆದಾರರ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸುಬ್ರಮಣ್ಯ ತಿಳಿಸುತ್ತಾರೆ.
ಗಾಂಧಿ ಬಜಾರ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯೂ ಈಗಾಗಲೇ ಶೇ.40ರಷ್ಟು ನಡೆದಿದ್ದು, ಮುಂದಿನ ಏಪ್ರಿಲ್ ತಿಂಗಳ ಒಳಗಾಗಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಯಲಿದೆ. 7.5 ಮೀಟರ್ ಅಗಲದ ವೈಟ್‌ಟ್ಯಾಪಿಂಗ್ ಜತೆಗೆ ರಸ್ತೆಯ ಎರಡೂ ಕಡೆ ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿ ಮಾರ್ಗ ಮತ್ತು ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುತ್ತದೆ. –ವಿನಾಯಕ್ ಸೂಗರ್, ಮುಖ್ಯ ಎಂಜಿನಿಯರ್
ಈ ಕಾಮಗಾರಿಯಿಂದಾಗಿ ಸುಮಾರು ವರ್ಷಗಳಿಂದ ಇರುವ ನೂರಾರು ವ್ಯಾಪಾರಸ್ಥರು, ಸಾರ್ವಜನಿಕರಿಗೆ, ಅನೇಕ ಮನೆಗಳಿಗೆ ತೊಂದರೆಯಾಗುತ್ತಿದೆ. ವಾಹನ ಸಂಚಾರ ಸ್ಥಗಿತಗೊಳಿಸಿರುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಸುಮಾರು ಐದು ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ಯಾರಿಗೂ ತೊಂದರೆಯಾಗಬಾರದು. ಎಲ್ಲರಿಗೂ ವ್ಯವಸ್ಥಿತವಾದ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ನಮ್ಮ ಆಗ್ರಹ. -ಸಿ.ಎಸ್.ರಾಮಕೃಷ್ಣ, ಅಧ್ಯಕ್ಷರು, ಗಾಂಧಿ ಬಜಾರ್ ಬೀದಿಬದಿ ವ್ಯಾಪಾರಿಗಳ ಸಂಘ
-ಭಾರತಿ ಸಜ್ಜನ್