Advertisement
ರವಿವಾರದಂದು ಕೇಂದ್ರ ಸರಕಾರದ ಶಿಫಾರಸಿನಂತೆ ಹೊಸದಾಗಿ ಆರು ಮಂದಿಯನ್ನು ರಾಷ್ಟ್ರಪತಿ ಅವರು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರೆ ಇನ್ನು ಏಳು ಮಂದಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯಪಾಲರ ನೇಮಕದ ಸಂದರ್ಭದಲ್ಲಿ ಬಿಜೆಪಿ ಅಳೆದೂ ತೂಗಿ ತನ್ನ ಮನೆಯನ್ನು ಸುವ್ಯವಸ್ಥಿತವಾಗಿ ಇರಿಸಿಕೊಳ್ಳಲು ಆದ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಸದ್ಯ ವಿಪಕ್ಷ ನಾಯಕರಾಗಿರುವ ಗುಲಾಬ್‌ಚಂದ್ ಕಟಾರಿಯಾಗೆ ರಾಜ್ಯಪಾಲ ಹುದ್ದೆ ನೀಡಲಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಬಣ ರಾಜಕೀಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮವೆನ್ನಲಾಗಿದೆ. ಇನ್ನು ಈಗಾಗಲೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಚುನಾವಣ ಪ್ರಕ್ರಿಯೆಗಳು ನಡೆಯುತ್ತಿರುವ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್‌ಗೆ ಅನುಭವಿಗಳನ್ನು ವರ್ಗಾಯಿಸಿ ರಾಜಕೀಯ ಲೆಕ್ಕಾಚಾರದ ಜತೆಯಲ್ಲಿ ಸಂಭಾವ್ಯ ಬೆಳವಣಿಗೆ ಎದುರಿಸಲು ಬಿಜೆಪಿ ಸಜ್ಜಾಗಿರುವಂತೆ ಭಾಸವಾಗುತ್ತಿದೆ. ತಮಿಳುನಾಡಿನ ಬಿಜೆಪಿ ಹಿರಿಯ ನಾಯಕ ಸಿ.ಪಿ.ರಾಧಾಕೃಷ್ಣನ್‌ಗೂ ಗೌರವಾನ್ವಿತ ಹುದ್ದೆ ಕೊಡಲಾಗಿದೆ. ಈ ಮೂಲಕ ತಮಿಳುನಾಡು ಬಿಜೆಪಿಯ ಮೇಲೆ ಪೂರ್ಣ ಹಿಡಿತ ಸಾಧಿಸಲು ಕೆ.ಅಣ್ಣಾಮಲೈ ಅವರಿಗೆ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ವಿಪ್ ಆರ್‌ಎಸ್‌ಎಸ್ ಹಿನ್ನೆಲೆಯ ಶಿವಪ್ರತಾಪ್ ಶುಕ್ಲಾರನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಿರುವ ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಛತ್ತೀಸ್‌ಗಢದ ರಾಜ್ಯಪಾಲರಾಗಿದ್ದ ಅನಸೂಯಾರನ್ನು ಮಣಿಪುರಕ್ಕೆ ವರ್ಗಾಯಿಸುವ ಮೂಲಕ ಮೀಸಲಾತಿ ಮಸೂದೆ ವಿಚಾರವಾಗಿ ಛತ್ತೀಸ್‌ಗಢ ಬಿಜೆಪಿ ನಾಯಕರಲ್ಲಿ ಉಂಟಾಗಿರುವ ಅಸಮಾಧಾನವನ್ನು ತಣಿಸುವ ಪ್ರಯತ್ನವನ್ನು ಕೇಂದ್ರ ಮಾಡಿದೆ.
Related Articles
Advertisement