ಕುಳಗೇರಿ ಕ್ರಾಸ್: ಗ್ರಾಮದ ಪೊಲೀಸ್ ಉಪಠಾಣೆಯ ಕಟ್ಟಡ ಮಳೆಗೆ ಸಂಪೂರ್ಣ ಸೋರುತ್ತಿದೆ. ಅರ್ಧ ಶತಮಾನ ದಾಟಿದ ಹಳೆಯ ಕಟ್ಟಡ ಶಿಥಿಲಗೊಂಡು ಬೀಳುವ ಸ್ಥಿತಿ ತಲುಪಿದ್ದು, ಪೊಲೀಸ್ ಸಿಬ್ಬಂದಿ ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
ಮಳೆಗಾಲ ಬಂದ್ರೆ ಠಾಣೆಯ ಮೇಲ್ಛಾವಣಿಯಲ್ಲಿ ನೀರು ನಿಲ್ಲುತ್ತದೆ. ಕೆಳಭಾಗದ ಸಿಮೆಂಟ್ ಪದರು ಉದುರುತ್ತದೆ. ಹೀಗಾಗಿ ಠಾಣೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಸ್ವಲ್ಪ ಮಳೆಯಾದರೆ ಠಾಣೆ ಸೋರುತ್ತಿದ್ದು ಮೇಲ್ಛಾವಣಿಗೆ ಹೊಸ ಟಾರ್ಪಾಲ್ ಹೊದಿಸಿ ಶಿಥಿಲಗೊಂಡ ಕಟ್ಟಡವನ್ನೇ ಪೊಲೀಸರು ರಕ್ಷಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಉಪಠಾಣೆ ಕಟ್ಟಡ 1970ರಲ್ಲಿ ನಿರ್ಮಿಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಗ್ರಾಮ ಹೊಂದಿದ ಪೊಲೀಸ್ ಉಪಠಾಣೆಯಲ್ಲಿ ಎಎಸ್‌ಐ, ಹವಾಲ್ದಾರ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರು ದಾನಿಗಳ ಸಹಾಯದಿಂದ ಕಲ್ಲು, ಸಿಮೆಂಟ್ ಇಟ್ಟಿಗೆ ಸಂಗ್ರಹಿಸಿ ವಿಶ್ರಾಂತಿ ಪಡೆಯಲು 2001ರಲ್ಲಿ ಹೆಚ್ಚುವರಿಯಾಗಿ ಪತ್ರಾಸಿನ ಒಂದು ಕೊಠಡಿ ನಿರ್ಮಿಸಿಕೊಂಡಿದ್ದಾರೆ. ಬಿಟ್ಟರೆ ಈ ಠಾಣೆ ಆವರಣದಲ್ಲಿ ಕಟ್ಟಡ ಯಾವ ಅಭಿವೃದ್ಧಿಯೂ ಕಂಡಿಲ್ಲ.
ಈ ಉಪಠಾಣೆಗೆ ಮೇಲಧಿಕಾರಿಗಳು ಸಾಕಷ್ಟು ಬಾರಿ ಭೇಟಿ ನೀಡಿದ್ದಾರೆ. ಆದರೆ, ಠಾಣೆಯ ಅಭಿವೃದ್ಧಿಯಾಗಲಿ, ಕಟ್ಟಡ ದುರಸ್ತಿ ಕುರಿತು ಗಮನ ಹರಿಸಿಲ್ಲ. ಒಂದು ಎಕರೆಗೂ ಹೆಚ್ಚು ವಿಶಾಲ ಜಾಗ ಹೊಂದಿದ ನಮ್ಮ ಗ್ರಾಮದಲ್ಲಿರುವ ಠಾಣೆ ಮಾತ್ರ 53 ವರ್ಷ ಗತಿಸಿದರೂ ಒಂದೂ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ. ಈ ಉಪಠಾಣೆಯಲ್ಲಿ ವ್ಯವಸ್ಥಿತ ಕೊಠಡಿಗಳೇ ಇಲ್ಲದ ಕಾರಣ
ವಸತಿ ಇರುವ ಪೊಲೀಸರು ಸ್ನಾನ ಮಾಡಿ ಅರೆಬರೆ ಬಟ್ಟೆ ಧರಿಸಿ ಸಾರ್ವಜನಿಕರ ಮಧ್ಯೆ ಓಡಾಡುವ ದೃಶ್ಯ ಸಾಮಾನ್ಯವಾಗಿದೆ.
ಈ ಠಾಣೆಯಲ್ಲಿ ಸುಸಜ್ಜಿತ ವಸತಿಗೃಹವನ್ನಾದರೂ ನಿರ್ಮಿಸಬೇಕಾಗಿದೆ.
ಗ್ರಾಮದ ಪೊಲೀಸ್ ಉಪಠಾಣೆಗೆ ಸುಸಜ್ಜಿತ ಕಟ್ಟಡ ಅವಶ್ಯವಾಗಿದೆ. ಹಳೆಯ ಕಟ್ಟಡವಾಗಿದ್ದರಿಂದ ಸುಮಾರು ವರ್ಷಗಳಿಂದ ಸೋರುತ್ತಿದೆ. ಈ ವರೆಗೆ ಯಾರು ಗಮನ ಹರಿಸಿಲ್ಲ. ಸಂಬಂಧಿಸಿದ ಅಧಿ ಕಾರಿಗಳು ಭೇಟಿ ನೀಡಿ ಶಿಥಿಲಗೊಂಡ ಕಟ್ಟಡ ವೀಕ್ಷಿಸಿ ಅನುದಾನ ಕೊಟ್ಟು ಠಾಣೆ ಅಭಿವೃದ್ಧಿ ಮಾಡಬೇಕಿದೆ.
ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಮಾರುತಿ ತಳವಾರ, ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ
ದಾದನಟ್ಟಿ, ಗ್ರಾಪಂ ಸದಸ್ಯರು
ಶಿಥಿಲಗೊಂಡ ಕಟ್ಟಡ ನನ್ನ ಗಮನಕ್ಕೆ ತಂದಿಲ್ಲ. ಸದ್ಯ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ರಿಪೇರಿ ಮಾಡಿಸಿಕೊಡುತ್ತೇನೆ.
ನಂತರ ಮೇಲಧಿಕಾರಿಗಳಿಗೆ ತಿಳಿಸಿ ಎಸ್ಟಿಮೆಂಟ್ ಮಾಡಿ ಹೊಸ ಕಟ್ಟಡ ನಿರ್ಮಿಸಲು ಪ್ರಯತ್ನಿಸುವೆ.
ಟಿ.ಡಿ. ಧೂಳಖೇಡ, ಬಾದಾಮಿ ಸಿಪಿಐ
ಮಹಾಂತಯ್ಯ ಹಿರೇಮಠ