ಬೆಂಗಳೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿದ ದರೋಡೆಕೋರನೊಬ್ಬ ಮಹಿಳೆಯ ಕೈ-ಕಾಲು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ನಿವಾಸಿ ರಿಹಾನ್ ದರೋಡೆಗೊಳಗಾದ ಮಹಿಳೆ.
ರಿಹಾನ್ ಅವರ ಕುಟುಂಬ ಸದಸ್ಯರು ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಬರುತ್ತಾರೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ರಿಹಾನ್ ಒಬ್ಬರೇ ಇದ್ದರು. ಈ ವೇಳೆ ಮನೆಗೆ ನುಗ್ಗಿ ದರೋಡೆಕೋರರ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾನೆ. ಆಗ ರಿಹಾನ್ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಆರೋಪಿ ಮಹಿಳೆಯ ಕೈ-ಕಾಲು ಕಟ್ಟಿ ಹಾಕಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಸರ, ಬಳೆ ಸೇರಿ ಏಳು ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ರಾತ್ರಿ 10 ಗಂಟೆ ಸುಮಾರಿಗೆ ಮನೆ ಸದಸ್ಯರು ಬಂದಾಗ ನಿತ್ರಾಣ ಸ್ಥಿತಿ ಯಲ್ಲಿ ರಿಹಾನ್ ಇದ್ದರು. ಕೂಡಲೇ ಅವರನ್ನು ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.