Advertisement

ಭರವಸೆ ಈಡೇರಿಸಲು ಪ್ರಾಮಾಣಿಕ ಯತ್ನ: ಜಗದೀಶ ಶೆಟ್ಟರ

05:15 PM Jun 20, 2024 | Team Udayavani |

■ ಉದಯವಾಣಿ ಸಮಾಚಾರ
ಬೈಲಹೊಂಗಲ: ಲೋಕಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿ, ಉದ್ಯೋಗವಕಾಶ ಸೃಷ್ಟಿಸಲು ಮೊದಲ ಆದ್ಯತೆ
ನೀಡುವುದಾಗಿ ಸಂಸದ ಜಗದೀಶ ಶೆಟ್ಟರ ಹೇಳಿದರು.

Advertisement

ಪಟ್ಟಣದ ವಿಜಯ ಸೋಶೀಯಲ್‌ ಕ್ಲಬ್‌ನಲ್ಲಿ ಬುಧವಾರ ಬಿಜೆಪಿಯಿಂದ ಸತತ ಮೂರನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆ, ಸಂಸದ ಜಗದೀಶ ಶೆಟ್ಟರ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯಿಂದ ನನಗೆ ಆಶೀರ್ವಾದ ಮಾಡಿದ್ದೀರಿ. ಇದು ಕಾರ್ಯಕರ್ತರ ಅಭೂತಪೂರ್ವ ಜಯವಾಗಿದೆ ಎಂದರು.

ಚುನಾವಣೆಗಳಲ್ಲಿ ಹಣ ಹಂಚಿದರೆ ಕೆಲಸ ಆಗೊಲ್ಲ ಎಂದು ಮತದಾರರು ತೀರ್ಪು ನೀಡಿದ್ದಾರೆ. ಜಾತಿ, ಮತ, ಪಂಥ ಮರೆತು ಎಲ್ಲರೂ ಮತ ಹಾಕಿದ್ದಾರೆ. ಬೆಳಗಾವಿ ಜನತೆ ನೋಟಿಗೆ ಆಸೆ ಪಡದೆ ಸೌಜನ್ಯ ವ್ಯಕ್ತಿಗೆ ಮಣೆ ಹಾಕಿದ್ದು ಸಂತಸವಾಗಿದೆ ಎಂದರು.

ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ವಿಧಾನಸಭಾ ಕ್ಷೇತ್ರದ ಅಧಿಕಾರ ಕಳೆದುಕೊಂಡಿದ್ದೇವೆ. ಮುಂಬರುವ ಜಿ.ಪಂ., ತಾ.ಪಂ., ಗ್ರಾ.ಪಂ., ಪುರಸಭೆ ಸೇರಿದಂತೆ ಕಾರ್ಯಕರ್ತರ ಚುನಾವಣೆಗೆ ಬರುತ್ತೇನೆ. ಇನ್ನು ಮುಂದೆ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವಂತಾಗಬೇಕು ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಎಲ್ಲರ ಸಲಹೆ-ಸೂಚನೆ
ಪಡೆಯುತ್ತಿದ್ದೇನೆ. ದಿ.ಸುರೇಶ ಅಂಗಡಿ ಅವರ ರೈಲ್ವೆ ಯೋಜನೆ ನನೆಗುದ್ದಿಗೆ ಬಿದ್ದಿದ್ದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ
ಸಭೆ ಕರೆದು ಭೂಸ್ವಾಧೀನ ಪೂರ್ಣಗೊಳಿಸಲು ಕಟ್ಟುನಿಟ್ಟಾಗಿ ಆದೇಶ ನೀಡಲಾಗುವುದು. ಕೆಲ ಹಿತಾಸಕ್ತಿಗಳು ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು. ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಉದ್ದಿಮೆಗಳು ಬರುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಮಾದರಿ ಮಾಡಲು ಪಣ ತೊಟ್ಟಿದ್ದೇನೆ ಎಂದರು.

ಇನ್ನು ಮುಂದೆ ಯಾವುದೇ ಅಭಿನಂದನೆ, ಸನ್ಮಾನ ಸಮಾರಂಭಕ್ಕೆ ಬರುವುದಿಲ್ಲ. ಏನೇ ಇದ್ದರೂ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ನೀಡೋಣ ಎಂದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಮತಕ್ಷೇತ್ರದ 224 ಬೂತ್‌ಗಳಲ್ಲಿ ಎರಡ್ಮೂರು ಬೂತ್‌ ಬಿಟ್ಟು ಎಲ್ಲ ಕಡೆ ಬಿಜೆಪಿಗೆ ಲೀಡ್‌ ನೀಡಿದ್ದೀರಿ. ಸಂಸದ ಜಗದೀಶ ಶೆಟ್ಟರ ಅವರು ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾರೆನ್ನುವ ವಿಶ್ವಾಸ ಇದೆ ಎಂದರು.

Advertisement

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ದೇಶ ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿ ಯೋಜನೆ ಕೈ ಹಿಡಿದಿದ್ದರೆ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತಿತ್ತು. ಈಗಾಗಲೇ ಹಲವಾರು ರಾಜ್ಯಗಳು ದಿವಾಳಿ ಅಂಚಿನಲ್ಲಿವೆ ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ
ಮಾಡಲಗಿ, ಉದ್ದಿಮೆದಾರ ವಿಜಯ ಮೆಟಗುಡ್ಡ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರಾಜ್ಯ ಮಾಧ್ಯಮ ವಕ್ತಾರ ಎಫ್‌.ಎಸ್‌. ಸಿದ್ಧನಗೌಡರ ಮಾತನಾಡಿದರು.

ವೇದಿಕೆಯ ಮೇಲೆ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಶಂಕ್ರಯ್ಯ ಮಲ್ಲಯ್ಯನವರಮಠ, ಮುರಳೀಧರ ಮಾಳ್ಳೋದೆ, ನಿಂಗಪ್ಪ ಚೌಡಣ್ಣವರ, ಗುರು ಮೆಟಗುಡ್ಡ, ಗೂಳಪ್ಪ ಹೊಸಮನಿ, ಎಂ.ವಾಯ್‌. ಸೋಮಣ್ಣವರ, ಸುನೀಲ ವರ್ಣೇಕರ, ಲಕ್ಷ್ಮಣ ದೊಡಮನಿ, ಬಸವರಾಜ ಬಂಡಿವಡ್ಡರ, ರತ್ನಾ ಗೋಧಿ  ಮುಂತಾದವರು ಇದ್ದರು. ಸಂತೋಷ ಹಡಪದ ಸ್ವಾಗತಿಸಿದರು. ಜಗದೀಶ ಬೂದಿಹಾಳ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next