Advertisement

ತರಕಾರಿ ಸ್ವಚ್ಛಗೊಳಿಸಲು ಬಂತು ಸರಳ ಯಂತ್ರ

01:15 PM Sep 19, 2022 | Team Udayavani |

ಧಾರವಾಡ: ಹೊಲದಲ್ಲಿ ಬೆಳೆದ ತರಕಾರಿಗಳನ್ನು ಸ್ವಚ್ಛಗೊಳಿಸಿ, ಮಾರುಕಟ್ಟೆಗೆ ಸಾಗಿಸುವುದೇ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ತರಕಾರಿ ಬೆಳೆಗಾರರಿಗೆ ಸುಲಭ ವಿಧಾನವೊಂದನ್ನು ಕೃಷಿ ವಿವಿ ವಿದ್ಯಾರ್ಥಿಗಳ ಸ್ನೇಹ ತಂಡವು ಪರಿಚಯಿಸಿದೆ.

Advertisement

ಕೃಷಿ ಮೇಳದ ಮುಖ್ಯ ವೇದಿಕೆ ಬಳಿಯ ಮಳಿಗೆಯಲ್ಲಿ ಪ್ರಸ್ತುತಪಡಿಸಿರುವ ತರಕಾರಿ ತೊಳೆಯುವ ಯಂತ್ರ ಗಮನ ಸೆಳೆಯುತ್ತಿದೆ. ನಿಗದಿತ ಸಮಯಕ್ಕೆ ಆಳು ಸಿಗದೇ ಪರದಾಡಬೇಕಾದ ಸನ್ನಿವೇಶದಲ್ಲಿ ಈ ಯಂತ್ರ ಕೆಲಸವನ್ನು ಹಗುರಗೊಳಿಸಿದೆ.

ಒಬ್ಬರೇ 1 ಗಂಟೆಯಲ್ಲಿ ಅಂದಾಜು 2-3 ಕ್ವಿಂಟಲ್‌ ತರಕಾರಿ ಸ್ವಚ್ಛಗೊಳಿಸಬಹುದಾಗಿದೆ. ಮನೆಯಲ್ಲೇ ಈ ಸಾಧನವನ್ನು ಅತ್ಯಂತ ಕಡಿಮೆ ದರದಲ್ಲಿ ಸಿದ್ಧಪಡಿಸಬಹುದು. 60 ಸೆಂಮೀ ವ್ಯಾಸ, 120 ಸೆಂಮೀ ಎತ್ತರದ 1 ಡ್ರಮ್‌, ಸೈಕಲ್‌, ಕಟ್ಟಿಗೆಯ ಪಳಿಗಳು, ಬೇರಿಂಗ್‌ ಚಕ್ರಗಳು, ಪ್ಲಾಸ್ಟಿಕ್‌ ಶೀಟ್‌, ಸೈಕಲ್‌ ರಿಮ್‌, ರಬ್ಬರ್‌ ಪಟ್ಟಿ ಅಥವಾ ಟೈರ್‌, ಪ್ಲಾಸ್ಟಿಕ್‌ ಪೈಪ್‌ ಬೇಕಷ್ಟೆ. ಮೊದಲು ಡ್ರಮ್‌ನ ಬುಡ ಮುಚ್ಚಳ ಕೊರೆದು ತೆಗೆದು ಸುತ್ತಲೂ 1/2*30 ಸೀಳುಗಳನ್ನು ಹಾಕಬೇಕು.

ರಿಮ್‌ ಗಳನ್ನು ಡ್ರಮ್‌ನ ಎರಡು ತುದಿಗಳಲ್ಲಿ (10 ಸೆಂಮೀ ಬಿಟ್ಟು) ಜೋಡಿಸಿ, ರಬ್ಬರ್‌ ಪಟ್ಟಿಯನ್ನು ಡ್ರಮ್‌ನ ಮಧ್ಯಭಾಗದಲ್ಲಿ ಜೋಡಿಸಬೇಕು. ನಾಲ್ಕು ಪಳಿಗಳನ್ನು 100×65 ಸೆಂಮೀ ಅಳತೆಯಂತೆ, ಮೂಲೆಗಳಲ್ಲಿ 20 ಸೆಂಮೀ ಆಳಕ್ಕೆ ಹುಗಿದು ನಿಲ್ಲಿಸಬೇಕು. ನಂತರ ಎಲ್ಲ ಪಳಿಗಳಿಗೆ (ನೆಲದಿಂದ 20 ಸೆಂಮೀ ಎತ್ತರಕ್ಕೆ) ಬೇರಿಂಗ್‌ ಚಕ್ರ ಜೋಡಿಸಬೇಕು. ನಂತರ 40 ಸೆಂಮೀ ಅಂತರದಲ್ಲಿ ಹುಕ್‌ಗಳನ್ನು ಜೋಡಿಸಿ ಅವುಗಳಿಗೆ ಪ್ಲಾಸ್ಟಿಕ್‌ ಶೀಟ್‌ ಅಳವಡಿಸಬೇಕು.

ನಂತರ ಡ್ರಮ್‌ ಅನ್ನು 4 ಪಳಿಗಳ ನಡುವೆ, ಬೇರಿಂಗ್‌ ಚಕ್ರಗಳ ಮೇಲೆ ರಿಮ್‌ ಬರುವಂತೆ ಕೂಡಿಸಬೇಕು. ಪೈಪ್‌ನ ಮೇಲೆ 5 ಸೆಂಮೀ ಅಂತರದಲ್ಲಿ ಸಾಲಾಗಿ ಸಣ್ಣ ರಂಧ್ರಗಳನ್ನು ಮಾಡಿ ಡ್ರಮ್‌ ಮೇಲ್ಭಾಗದಲ್ಲಿ ಅಳವಡಿಸಬೇಕು. ಬಳಿಕ ಸೈಕಲ್‌ ಹಿಂದಿನ ಚಕ್ರವು ರಬ್ಬರ್‌ ಪೆಟ್ಟಿಗೆ ತಾಕುವಂತೆ ನಿಲ್ಲಿಸಿದರೆ ಚಕ್ರದ ಜತೆಗೆ ಡ್ರಮ್‌ ಸಹ ತಿರುಗಲಿದೆ.

Advertisement

ಮೊದಲು ಬೋರ್‌ವೆಲ್‌ ಅಥವಾ ಮೋಟರ್‌ ನಿಂದ ನೀರು ಹಾಯಿಸಬೇಕು. ನಂತರ ತರಕಾರಿಗಳನ್ನು (20 ಕೆಜಿ) ಡ್ರಮ್‌ನಲ್ಲಿ ಹಾಕಿ, ಡ್ರಮ್‌ನ ಎರಡೂ ಕಡೆಗೆ ಪ್ಲಾಸ್ಟಿಕ್‌ ಶೀಟ್‌ನಿಂದ ಮುಚ್ಚಿ ನಿಧಾನವಾಗಿ ಸೈಕಲ್‌ ತುಳಿತಬೇಕು. ಆಗ ತರಕಾರಿಗಳಿಗೆ ರಭಸವಾಗಿ ನೀರು ಸಿಂಪರಣೆ ಆಗಿ ಸ್ವಚ್ಛವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next