Advertisement

ಚಿನ್ನಕ್ಕಿಂತ ಬೆಳ್ಳಿ ಕಾಲುಂಗುರ ಉತ್ತಮ…ಕಾಲುಂಗುರ ಧರಿಸುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

04:27 PM Aug 09, 2022 | Team Udayavani |

ಭಾರತೀಯ ಸಂಪ್ರದಾಯದ ಪ್ರಕಾರ ಸ್ತ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೆ ಈ ಆಭರಣಗಳು ಸೌಭಾಗ್ಯದ ಸಂಕೇತವು ಹೌದು. ವಿವಾಹವಾದ ಮಹಿಳೆಯರು ಧರಿಸುವ ಆಭರಣಗಳಲ್ಲಿ ಕಾಲುಂಗುರವು ಒಂದು ಹಾಗೂ ಇದು ಅತ್ಯಂತ ಮಹತ್ವವನ್ನು ಹೊಂದಿದೆ. ಮಹಿಳೆಯರು ಕಾಲುಂಗುರ ಧರಿಸುವುದರಿಂದ ಹತ್ತಾರು ಲಾಭಗಳು ಇದೆ ಎನ್ನುತ್ತಾರೆ. ಕಾಲುಂಗುರ ತೊಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದರೆ ಕಾಲುಂಗುರದ ಮಹತ್ವವೇನು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳೇನು ಈ ಎಲ್ಲ ವಿಷಯಗಳನ್ನು ನೋಡೋಣ.

Advertisement

ಪೌರಾಣಿಕ ಕಾಲದಲ್ಲಿ ನಾವು ಗಮನಿಸಿದಾಗ ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖವಿದೆ. ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರಗಳನ್ನು ಎಸೆದಿದ್ದರಂತೆ. ಅಂದರೆ ಇದರಿಂದಲೇ ಅರ್ಥವಾಗುತ್ತದೆ ಆ ಕಾಲದಿಂದಲೂ ಕಾಲುಂಗುರಗಳ ಬಳಕೆ ಇತ್ತು ಎಂದು. ಮದುವೆಯ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ ತನ್ನ ಪತ್ನಿಗೆ ಕಾಲುಂಗುರ ತೊಡಿಸುತ್ತಾನೆ. ಅದು ವಿವಾಹಿತೆ ಅನ್ನೋದರ ಸಂಕೇತ ಕೂಡ. ಸಾಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಬೆಳ್ಳಿಯ ಕಾಲುಂಗುರವನ್ನು ತೊಡಿಸುತ್ತಾರೆ. ಕಾಲುಂಗುರ ಕೇವಲ ಸಂಪ್ರದಾಯದ ಪದ್ಧತಿ ಅಷ್ಟೇ ಅಲ್ಲ ಹಾಗೆ ಕಾಲುಂಗುರಗಳನ್ನು ಹಾಕಿಕೊಳ್ಳುವುದು ಕೇವಲ ಮದುವೆಯಾಗಿದೆ ಎಂದು ತೋರಿಸುವುದಕ್ಕೆ ಮಾತ್ರವಲ್ಲ. ಅದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿವೆ. ಅದಕ್ಕಾಗಿ ಇಂದಿನ ಕಾಲದಲ್ಲಿ ಮದುವೆಯಾಗದ ಯುವತಿಯರೂ ಕಾಲುಂಗುರ ಧರಿಸುತ್ತಾರೆ.

ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡುತ್ತಾರೆ. ಇದು ಚಿನ್ನದಿಂದಲೇ ಮಾಡಬಹುದಾಗಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದು. ಚಿನ್ನ ಲಕ್ಷ್ಮೀದೇವಿಯ ಸಂಕೇತ ಆದ್ದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನ ಇಷ್ಟಪಡುವುದಿಲ್ಲ ಹಾಗೂ ಹಾಕಬಾರದು ಎಂಬ ನಂಬಿಕೆಯೂ ಇದೆ.

ಭಾರತೀಯ ವೇದ ಶಾಸ್ತ್ರಗಳ ಪ್ರಕಾರ ಎರಡು ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು ಸಮರ್ಪಕವಾಗಿ ಅಂತರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದು ವಿವಾಹಿತ ಸ್ತ್ರೀಯರಿಗೆ ಗರ್ಭ ಧರಿಸಲು ಉತ್ತಮ ವೇದಿಕೆಯನ್ನು ಉಂಟುಮಾಡುತ್ತದೆ. ಅದಲ್ಲದೆ ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳು ಗರ್ಭಾಶಯಕ್ಕೆ ನೇರವಾಗಿ ಸಂಪರ್ಕಿಸುವಾಗ ಅದು ಹೃದಯದ ಮೂಲಕ  ಹೋಗುತ್ತದೆ ಎಂದು ಹೇಳಲಾಗುತ್ತದೆ.

ಆದ್ದರಿಂದ ಕಾಲುಂಗುರವನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಲ್ಲಿ ಧರಿಸುವುದು ನೀವು ಗಮನಿಸಿರಬಹುದು. ಇದರ ಮುಖ್ಯ ಉದ್ದೇಶ ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ. ಮತ್ತು ಗರ್ಭಾಶಯಕ್ಕೆ ಸಮಪ್ರಮಾಣದ ಸಂತುಳಿತ ರಕ್ತದ ಒತ್ತಡವನ್ನು ನಿರ್ವಹಿಸುವುದರ ಮೂಲಕ ಅದರ ಆರೋಗ್ಯವನ್ನು ಸಮರ್ಪಕವಾಗಿ ಕಾಪಾಡುತ್ತದೆ. ಬೆಳ್ಳಿಯು ಒಂದು ಉತ್ತಮ ವಾಹಕವಾಗಿದ್ದು ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು ಭೂಮಿಯ ಧ್ರುವ ಶಕ್ತಿಯನ್ನು ಹೀರಿ ಶರೀರಕ್ಕೆ ವರ್ಗಾಯಿಸುತ್ತವೆ ಮತ್ತು ತನ್ಮೂಲಕ ಸಂಪೂರ್ಣ ದೈಹಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಒದಗಿಸುತ್ತವೆ. ಅದಕ್ಕೆ ಮಹಿಳೆಯರು ಕಾಲುಂಗುರವನ್ನು ಯಾವಾಗಲೂ ಹಾಕಿ ಕೊಳ್ಳಲೇಬೇಕು ಎಂದು ಹಿರಿಯರು ಹೇಳುತ್ತಾರೆ.

Advertisement

ಕಾಲುಂಗುರಗಳು ಬೆಳ್ಳಿಯದ್ದೆ ಏಕೆ ಆಗಿರಬೇಕು

ಬೆಳ್ಳಿ ಎಲ್ಲ ಲೋಹಗಿಂತಲೂ ಹೆಚ್ಚು ಉಷ್ಣವಾಹಕ. ದೇಹದಲ್ಲಿನ ಅಧಿಕ ಉಷ್ಣತೆಯನ್ನು ಬೆಳ್ಳಿ ತಗ್ಗಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಲಭವಾಗಿ ಮಾಡುತ್ತದೆ. ದೇಹದ ಆರೋಗ್ಯ ಹೆಚ್ಚಿಸಲು ಬೆಳ್ಳಿ ಅತಿ ಸಹಾಯ ಮಾಡುತ್ತದೆ ಕೆಲವು ಪುರಾಣಗಳ ಪ್ರಕಾರ ಕಾಲುಂಗುರ ಧರಿಸುವುದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೆ ಧರ್ಮ ಪಾಲನೆ ಮಾಡುತ್ತಾರೆ ಎನ್ನಲಾಗುತ್ತದೆ. ಕಾಲುಂಗುರಗಳಿಂದ ಸ್ತ್ರೀಯರ ದೇಹ ಕೂಡ ಶುದ್ಧಿಯಾಗುತ್ತದೆ. ಕಾಲುಂಗುರಗಳು ಸುತ್ತಮುತ್ತಲಿನ ಪರಿಸರದ ಕೆಟ್ಟ ಶಕ್ತಿಗಳ ನಿರ್ಮೂಲನೆ ಮಾಡುತ್ತದೆ. ಹೆಬ್ಬೆರಳಿನ ಸಮೀಪದ ಬೆರಳು ವಾಯು ತತ್ವವನ್ನು ಪ್ರೇರಿಸುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿ ಹೆಚ್ಚಾಗುತ್ತದೆ. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತನ್ನ ಸ್ತ್ರೀಧರ್ಮ ಕರ್ತವ್ಯ ಮತ್ತು ನಿಯಮಗಳು ಕೂಡ ಅರಿವಾಗುತ್ತದೆ.

ಅವಿವಾಹಿತರು ಕಾಲುಂಗುರ ಧರಿಸುವುದೇಕೆ?

ಕಾಲುಂಗುರ ಕೇವಲ ಮದುವೆಯಾದ ಯುವತಿಯರು ಮಾತ್ರ ಧರಿಸುವ ಆಭರಣವಲ್ಲ. ಇತ್ತೀಚಿನ ದಿನಗಳಲ್ಲಿ ಅವಿವಾಹಿತ ಹುಡುಗಿಯರು ಕಾಲಿನ ನಾಲ್ಕನೆಯ ಬೆರಳಿನಲ್ಲಿ (ಕಿರುಬೆರಳಿನ ಸಮೀಪದ ಬೆರಳು) ಕಾಲುಂಗುರ ಧರಿಸುತ್ತಾರೆ. ಕೆಲವರು ಫ್ಯಾಷನ್‌ ಎಂದು ಧರಿಸಿದರೇ ಇನ್ನೂ ಕೆಲವರು ತಮ್ಮ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಮಾಸೋಳಿ ಕಾಲುಂಗುರ ಧರಿಸುತ್ತಾರೆ.

ಏನಿದು ಮಾಸೋಳಿ ಕಾಲುಂಗುರ!

ಮಾಸೋಳಿಯು ಒಂದು ರೀತಿಯ ಕಾಲುಂಗುರವೇ ಆಗಿದೆ. ಅದರ ಆಕಾರವು ಮೀನಿನಂತಿರುತ್ತದೆ. ಆದುದರಿಂದ ಅದಕ್ಕೆ ಮಾಸೋಳಿ (ಮೀನು) ಎಂದು ಹೇಳುತ್ತಾರೆ. ಇಂದಿನ ಬಿಡುವಿಲ್ಲದ ಜೀವನದಲ್ಲಿ ಯುವತಿಯರಿಗೆ ಮಾನಸಿಕವಾಗಿ, ದೈಹಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳುಂಟಾಗುತ್ತದೆ. ಇವುಗಳನ್ನು ನಿವಾರಿಸಲೆಂದು ಅವಿವಾಹಿತರು ಕಾಲ್ಬೆರಳುಗಳಲ್ಲಿ ಮಾಸೋಳಿಯನ್ನು ಧರಿಸುತ್ತಾರೆ. ಇದರಿಂದಾಗಿ ಬಿಂದು ಒತ್ತಡದ ನಿವಾರಣೆಯಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ ಎಂಬ ನಂಬಿಕೆಯಿದೆ.

ಮಾಸೋಳಿಯ ವಿಶಿಷ್ಟ ಆಕಾರದಿಂದಾಗಿ ಆ ಸ್ಥಳದಲ್ಲಿರುವ ಬಿಂದುವಿನ ಮೇಲೆ ಒತ್ತಡವು ಬರುತ್ತದೆ. ಅಂದರೆ ಬಿಂದುಒತ್ತಡದ ನಿವಾರಣೆಯಾಗುತ್ತದೆ. ಇದರಿಂದ ಜೀವದ ತೊಂದರೆಗಳು ಕಡಿಮೆಯಾಗುತ್ತವೆ. ಆ ಸ್ಥಳದಲ್ಲಿ ಕೆಟ್ಟ ಶಕ್ತಿಯು ಸಂಗ್ರಹಿಸಿಟ್ಟಿರುವ ಕಪ್ಪು ಶಕ್ತಿಯೂ (ತೊಂದರೆದಾಯಕ ಶಕ್ತಿಯೂ) ನಾಶವಾಗುತ್ತದೆ.
ಮಾಸೋಳಿಯನ್ನು ಧರಿಸುವುದರಿಂದ ಕಿರುಬೆರಳಿನ ಪಕ್ಕದ ಬೆರಳಿನಲ್ಲಿನ ಅಪ್ರಕಟ ಸ್ವರೂಪದಲ್ಲಿನ ಆಪತತ್ತ್ವವು ಪ್ರಕಟವಾಗುತ್ತದೆ ಮತ್ತು ಮಾಸೋಳಿಯಲ್ಲಿನ ಸಗುಣತತ್ತ್ವದಿಂದ ಅದಕ್ಕೆ ಚಾಲನೆಯು ಸಿಗುತ್ತದೆ. ವ್ಯಕ್ತಿಯು ನಡೆದಾಡುವಾಗ ಮಾಸೋಳಿಯಲ್ಲಿನ ಸ್ಪಂದನಗಳು ಕಾರ್ಯನಿರತವಾಗುತ್ತವೆ. ನಡಿಗೆಯ ವೇಗದಿಂದ ಅವರಿಗೆ ಮಾರಕ ಮತ್ತು ತಾರಕ ಸ್ಪಂದನಗಳು ಸಿಗುತ್ತವೆ. ಇದರಿಂದಾಗಿ ಭೂಮಿಯ ಮೇಲೆ ಬೀಳುವ ಒತ್ತಡ ಮತ್ತು ಭೂಮಿಗಾಗುವ ಸ್ಪರ್ಶದಿಂದ ಶಕ್ತಿಯ ಮಾರಕ ಸ್ಪಂದನಗಳು ನಿರ್ಮಾಣವಾಗಿ ಪ್ರಕ್ಷೇಪಿಸುತ್ತವೆ. ಇದರಿಂದ ಅಗೋಚರವಾಗಿ ಆಕ್ರಮಣ ಮಾಡುವ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ ಎಂಬ ನಂಬಿಕೆಯಿದೆ.

ಮಾಸೋಳಿ ಕಾಲುಂಗುರ ಧರಿಸುವುದರಿಂದ ಒತ್ತಡಗಳಿಂದ ದೂರವಾಗಲು ಸಹಾಯಕವಾಗಿದೆ. ಅಲ್ಲದೆ ಧರಿಸುವುದರಿಂದ ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು ಸಮರ್ಪಕವಾಗಿ ಅಂತರದಲ್ಲಿ ಉಂಟಾಗುತ್ತದೆ. ಆದ್ದರಿಂದ ಸ್ತ್ರೀಯರು ಹೆಚ್ಚಾಗಿ ಮಾಸೋಳಿಯನ್ನು ಧರಿಸುತ್ತಾರೆ.

ಶ್ವೇತಾ ಮುಂಡ್ರುಪ್ಪಾಡಿ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next