ಸಾಗರ: ಮೂಲಸೌಕರ್ಯಗಳ ಕೊರತೆಯಿಂದ ತಾಲೂಕಿನ ಬಾರಂಗಿ ಹೋಬಳಿ ವ್ಯಾಪ್ತಿಯ ಹಳ್ಳಿಯಿಂದ ಅನಾರೋಗ್ಯಪೀಡಿತ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಸುಮಾರು 3 ಕಿಮೀ ಹೊತ್ತು ಸಾಗಿಸಿದ ಘಟನೆ ಸಾಮಾಜಿಕ ಜಾಲತಾಣಗಳ ಮೂಲಕ ಚರ್ಚೆಯ ವಿಷಯವಾಗಿದೆ.
ಸುರಿವ ಮಳೆಯ ನಡುವೆ ಕಂಪಳಿಕೊಪ್ಪೆ ರಕ್ಷಣೆಯಲ್ಲಿ ದಡಗಿ ಬಳಸಿ ಆಕೆಯನ್ನು ಮುಖ್ಯರಸ್ತೆಗೆ ತಲುಪಿಸಲಾಗಿದೆ. ತಾಲೂಕಿನ ಕಾನೂರು ಸಮೀಪದ ಕಲಗಲಿ ಗ್ರಾಮದ 45 ವರ್ಷದ ತಗ್ತಿ ರತ್ನಮ್ಮ ಎನ್ನುವವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಬೆಳ್ಳೂರು ಬಸ್ ನಿಲ್ದಾಣದವರೆಗೆ ರತ್ನಮ್ಮರವರನ್ನು ದಡಿಗೆ ಹಾಕಿ ನಾಲ್ಕು ಜನ ಹೊತ್ತು ಸಾಗಿಸಿದ್ದಾರೆ. ಕಡಕೋಡಿನಿಂದ 3 ಕಿಮೀ ದೂರದಲ್ಲಿರುವ ಕಲಗಲಿ, ತಗ್ತಿ ಮುಂತಾದ ಕುಗ್ರಾಮದ ನಿವಾಸಿಗಳು ಪ್ರತಿ ದಿನ ಅನುಭವಿಸುತ್ತಿರುವ ಸಂಕಟ ಇದಾಗಿದೆ. ಹುಲಿಬಳ್ಳಿ ಗ್ರಾಮದ ಸೋಮರಾಜ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಗ್ತಿ ಗ್ರಾಮದ ಕೆಲವು ಮನೆಗಳಿಗೆ ವಿದ್ಯುತ್ ಸೌಲಭ್ಯದ ಕೊರತೆ ಇರುವ ವಿಷಯವನ್ನೂ ಬೆಳಕಿಗೆ ತಂದಿದ್ದಾರೆ.
ದೀನದಯಾಳ್ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿ ದೊರಕಿದ್ದರೂ ಅಲ್ಲಿ ವಿದ್ಯುತ್ ಕಂಬ ನೆಡಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಗ್ರಾಮದ ಮನೆಗಳಿಗೆ ವಿದ್ಯುತ್ ದೊರಕುತ್ತಿಲ್ಲ ಎಂದು ಅವರು ದೂರಿದ್ದಾರೆ.
ವನ್ಯಜೀವಿ ವಲಯದ ವ್ಯಾಪ್ತಿಯ ಗ್ರಾಮಗಳಾದ ಹಿನ್ನೆಲೆಯಲ್ಲಿ ರಸ್ತೆ, ವಿದ್ಯುತ್ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ಅಡ್ಡಿಯಾಗಿದೆ ಎಂದು ಸ್ಥಳೀಯರು ಆಕ್ಷೇಪಿಸುತ್ತಾರೆ. ರೋಗಿಗಳನ್ನು ಹೊತ್ತುಕೊಂಡು ಮುಖ್ಯ ರಸ್ತೆಗೆ ಸಾಗಿಸಬೇಕಾದ ದುಃ ಸ್ಥಿತಿ ಇದೆ.