ಸುಮಾರು ನಲವತ್ತು ವರುಷಗಳ ಹಿಂದೆ ನಾನು ಐದನೇ ತರಗತಿಯಲ್ಲಿದ್ದಾಗ ವಿಶ್ವನಾಥ ಮಾಸ್ತರರು ಒಂದು ಮುಖ್ಯವಾದ ವಾರ್ತೆಯನ್ನು ಉದಯ ವಾಣಿಯಲ್ಲಿ ತರಗತಿಯಲ್ಲಿ ಓದಿ, ಆ ಪತ್ರಿಕೆಯನ್ನು ಮನೆಗೆ ತೆಗೆದು ಕೊಂಡು ಹೋಗಿ ಮನೆಯಲ್ಲಿ ಓದುವಂತೆ ಹೇಳಿ ದರು. ಅದನ್ನು ಮನೆಯಲ್ಲಿ ಒಂದೂ ಅಕ್ಷರವನ್ನು ಬಿಡದೇ ಓದಿದ್ದೆ.
ಅನಂತರ ಆರನೇ ತರಗತಿಯಲ್ಲಿ ರಮಾನಂದ ಮಾಸ್ತರರು ನನ್ನನ್ನು ವಾರ್ತಾ ಮಂತ್ರಿಯನ್ನಾಗಿ ಆರಿಸಿದರು. ಬೆಳಗ್ಗೆ ಅರ್ಧ ಗಂಟೆ ಶಾಲೆಗೆ ಮುಂಚಿತವಾಗಿ ಬಂದು ಹಿಂದಿನ ದಿನ ಉದಯವಾಣಿಯಲ್ಲಿ ಬಂದಂತಹ ಪ್ರಮುಖ ವಾರ್ತೆಯನ್ನು ಶಾಲಾ ಕರಿಹಲಗೆಯ ಮೇಲೆ ಬರೆಯಬೇಕು. ಅನಂತರ ಹತ್ತು ನಿಮಿಷ ಆ ದಿನದ ಪ್ರಮುಖ ವಾರ್ತೆ ಯನ್ನು ತರಗತಿಯಲ್ಲಿ ಮಕ್ಕಳಿಗೆ ಓದಿ ಹೇಳಬೇಕು. ಆಗ ಆರಂಭವಾದ ಉದಯವಾಣಿ ಓದುವ ಹವ್ಯಾಸ ಇಂದು ದಿನಚರಿಯಾಗಿದೆ.
ಉದಯವಾಣಿಯ ಮುದ್ರಣದ ಅಚ್ಚುಕಟ್ಟಾದ ವಿನ್ಯಾಸ, ಪ್ರತೀ ದಿನ ಒಂದೇ ಸಮನಾದ ವರ್ಗೀಕೃತ ವಿಚಾರಗಳು ನಿಜವಾ ಗಿಯೂ ಮನಸ್ಸಿಗೆ ಆನಂದವನ್ನು ಕೊಡುತ್ತಿತ್ತು. ಅದರ ಅಂದವಾದ ಮುದ್ರಣ ಮತ್ತು ವಿನ್ಯಾಸಕ್ಕೆ ಅನೇಕ ಬಾರಿ ಪ್ರಶಸ್ತಿಗಳು ಬಂದಿರುವುದು ಈಗಲೂ ನೆನೆಪಿದೆ. ದಶಕಗಳ ಹಿಂದೆಯೂ ಸಹ ವಿದೇಶಗಳಲ್ಲಿ ಸಿಗುತ್ತಿದ್ದ ಭಾರ ತದ ವಾರ್ತಾ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದಾಗಿತ್ತು.
ಸುಮಾರು ಎರಡು ದಶಕಗಳ ಹಿಂದೆ ವಿದೇಶಕ್ಕೆ ಬಂದ ಆರಂಭದಲ್ಲಿ ಉದಯವಾಣಿ ಎಲ್ಲಿ ಸಿಗುತ್ತದೆ ಎಂಬುದರ ಅರಿವಿಲ್ಲದೆ ಮುಂಜಾನೆ ಚಡಪಡಿಸಿದ್ದೂ ಇದೆ. ಆ ಅನಂತರ ಅದರ ಇರುವಿಕೆಯನ್ನು ಪತ್ತೆ ಮಾಡಿ ಮುಂಜಾನೆ ಎದ್ದು ಸುಮಾರು 30 ಕಿ.ಮೀ. ದೂರದ ಇನ್ನೊಂದು ಪಟ್ಟಣಕ್ಕೆ ಕಾರಿನಲ್ಲಿ ಹೋಗಿ ಹಿಂದಿನ ದಿನದ ಪತ್ರಿಕೆಯನ್ನು ಕೊಂಡು ತರುತ್ತಿದ್ದ ದಿನಗಳೂ ಇದ್ದವು. ಅದನ್ನು ತಂದು ಅದರ ಮೇಲೆ ಕಣ್ಣಾಡಿಸಿದ ಮೇಲೇನೆ ಕೆಲಸಕ್ಕೆ ಹೋಗುವ ಪರಿ ಪಾಠವಿತ್ತು.
ಆದರೆ ಈಗ ಇಂಟರ್ನೆಟ್ ಮತ್ತು ಮೊಬೈಲ್ ಫೋನುಗಳಲ್ಲಿ ಉದಯವಾಣಿಯು ಸಿಗುತ್ತಿರುವುದರಿಂದ ಕೆಲಸದ ನಡುವೆಯೇ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಪ್ರತೀ ದಿನ ಉದಯ ವಾಣಿಯನ್ನು ಓದದೇ ಇದ್ದರೆ ಏನನ್ನೋ ಕಳಕೊಂಡ ಅನುಭವ. ಅನಿವಾರ್ಯ ಕಾರಣಗಳನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಉದಯ ವಾಣಿಯನ್ನು ಓದದನೆ ಮಲಗಿಕೊಂಡ ದಿನಗಳು ನನ್ನ ಜೀವನದಲ್ಲಿ ಕಡಿಮೆ. ಇದು ನನ್ನ ಮತ್ತು ಉದಯವಾಣಿಯ ಅವಿನಾಭಾವ ಸಂಬಂಧ.
ಅರ್ಧ ಶತಮಾನವನ್ನು ಕಂಡ ಈ ಪತ್ರಿಕೆಯು ಇನ್ನೂ ನೂರ್ಕಾಲ ಬಾಳಲಿ, ನಮಗೆಲ್ಲರಿಗೂ ಪ್ರತೀ ದಿನ ಮುಂಜಾನೆ ಸಿಹಿ ಸುದ್ದಿಗಳನ್ನು ಇನ್ನೂ ಬಹಳ ವರ್ಷಗಳ ಕಾಲ ಕೊಡುತ್ತಾ ಇರಲಿ ಎಂಬುದಾಗಿ ನನ್ನ ಆಶಯ.
ಡಾ| ಮುಕುಂದ್ ಆರ್ ನಾಯಕ್, ಮಸ್ಕತ್