Advertisement

ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

10:18 AM Feb 07, 2020 | mahesh |

ಬರಹಕ್ಕೆ ವೇದಿಕೆ ಕಲ್ಪಿಸಿದ ಪತ್ರಿಕೆ
2009ರಲ್ಲಿ ನಾನು 9ನೇ ತರಗತಿಯಲ್ಲಿ ತಿಮ್ಮಪ್ಪ ಎನ್ನುವ ಶಿಕ್ಷಕರೊಬ್ಬರು ಸಮಾಜ ಅಧ್ಯಾಪಕರಾಗಿದ್ದರು. ಕನ್ನಡ ವಿಷಯಕ್ಕೆ ಶಿಕ್ಷಕರ ಕೊರತೆ ಇದ್ದ ಕಾರಣ ಇವರೇ ಕನ್ನಡ ಪಾಠ ಮಾಡುತ್ತಿದ್ದರು. 9ನೇ ತರಗತಿಯಲ್ಲಿ ಇದ್ದ “ತಾಟಕಿ ಸಂಹಾರ’ ಎಂಬ ಪಾಠದ ಲೇಖಕರ ಪರಿಚಯ ಮಾಡುತ್ತಿರು ವಾಗ ಅವರೊಂದು ಮಾತು ಹೇಳಿದ್ರು ದೊಡ್ಡ ದೊಡ್ಡ ಲೇಖಕರ ಹೆಸ ರನ್ನು ಉಲ್ಲೇಖೀಸುತ್ತ ಅವರೆಲ್ಲ ನಿಮ್ಮ ಪ್ರಾಯದಲ್ಲಿ ಕಥೆ, ಕವನ, ಪುಸ್ತಕನೇ ಬರೆದಿದ್ದಾರೆ ನಿಮೆಗೆ ಯಾಕೆ ಇದು ಸಾಧ್ಯವಿಲ್ಲ? ಎಂದು ಕೇಳುತ್ತಿದ್ದರು.

Advertisement

ಬಹುಶಃ ಆ ರಾತ್ರಿ ನಂಗೆ ನಿದ್ದೆನೇ ಬಂದಿಲ್ಲ. ಹೌದು ನಮ್ಮದೇ ಪ್ರಾಯ ದಲ್ಲಿ ಅವರೆಲ್ಲ ಬರೆದಿದ್ದರೆ ನಾವೂ ಯಾಕೆ ಪ್ರಯತ್ನಿಸಬಾರದು ಎಂಬ ಹಟ ನನ್ನೊಳಗೆ ಗಟ್ಟಿಯಾಯಿತು. ಅಂದೇ ರಾತ್ರಿ ನಾನೊಂದು ನಾಟಕ ಬರೆದಿದ್ದೆ, ಒಂದಷ್ಟು ಕವನವೂ ಬರೆಯುತ್ತಿದ್ದೆ. ಆದರೆ ಅದನ್ನು ಏನು ಮಾಡಬೇಕು ಎಂಬುವುದೇ ಗೊತ್ತಿರಲಿಲ್ಲ. ನೋಟ್‌ ಪುಸ್ತಕದಲ್ಲಿ ಬರೆದಿಟ್ಟ ಕಥೆ, ಕವನಗಳು ಇವತ್ತಿಗೂ ನನ್ನ ಬಳಿ ಜೋಪಾನವಾಗಿವೆ. ಇವುಗಳನ್ನು° ಪುಸ್ತಕ ರೂಪದಲ್ಲೊ ಅಥವಾ ಪತ್ರಿಕೆಯಲ್ಲಿ ಪ್ರಕಟಿಸಬಹುದು ಎಂಬ ಸಾಮಾನ್ಯ ಜ್ಞಾನವೂ ಇರಲಿಲ್ಲ. ಬರೆಯುವುದಷ್ಟೆ ನನ್ನ ಕಾಯಕವಾಗಿತ್ತು. 2013ರಲ್ಲಿ ಮಂಗಳೂರಿಗೆ ಬಂದಾಗ ಆತ್ಮೀಯರೊಬ್ಬರು ತುಂಬ ಒಳ್ಳೆಯ ರೀತಿಯಲ್ಲಿ ಬರಿಯುತ್ತಿರಿ ಇದನ್ನು ಉದಯವಾಣಿಗೆ ಕಳಿಸಿ ಕೊಡಿ ಎಂದು ಸಲಹೆ ನೀಡಿದ್ದರು.

ಯುವ ಸಂಪದದ ವಿಳಾಸ ಕೊಟ್ಟರು. 2013ರಲ್ಲಿ ನನಗೆ ಮೇಲ್‌ ಕಳುಹಿಸುವುದು ಹೇಗೆಂದು ತಿಳಿದಿರಲಿಲ್ಲ. ಈಗಿನಂತೆ ಸ್ಮಾರ್ಟ್‌ಫೋನ್‌ಗಳು ಇರದ ಕಾರಣ ಬರೆದು ಪೋಸ್ಟ್‌ ಮಾಡಿದ್ದೆ. ಹೀಗೆ ಮೊದಲ ಬಾರಿ ಕಳಿಸಿಕೊಟ್ಟ ಲೇಖನವೊಂದು ಉದಯ ವಾಣಿಯ ಯುವ ಸಂಪದದಲ್ಲಿ ಪ್ರಕಟಗೊಂಡಿತ್ತು.
ಬರೆದ ಎಲ್ಲಾ ಬರಹಗಳು ಮೂಲೆ ಸೇರುತ್ತಿದ್ದ ಸಮ ಯದಲ್ಲೆ ನನ್ನ ಬರಹಕ್ಕೆ ಮೊದಲ ವೇದಿಕೆ ಕಲ್ಪಿಸಿದ್ದು ಉದಯವಾಣಿ, ಅನಂತರದ ದಿನಗಳಲ್ಲಿ ಪ್ರತಿವಾರ ಬರಹವನ್ನು ಉದಯವಾಣಿಗೆ ಕಳುಹಿಸಿ ಕೊಡುತ್ತಿದ್ದೆ. ನನ್ನ ಲೇಖನ ಪ್ರಕಟವಾಗುತ್ತಿತ್ತು. ಇಂದಿನ ವರೆಗೂ ಕಳಿಸಿಕೊಟ್ಟ ಲೇಖನ ಪ್ರಕಟವಾಗುತ್ತಿವೆ. ಒಂದಷ್ಟು ಮಂದಿಗೆ ನಾನು ಒಬ್ಬ ಬರಹಗಾರನಾಗಿ ಪರಿಚಯಗೊಂಡೆ. ಅಂದಿನಿಂದ ಸಾಹಿತ್ಯ, ಬರಹದ ಮೇಲಿನ ಒಲವಿನಲ್ಲಿ ಮುಂದಿಟ್ಟ ಹೆಜ್ಜೆಯಲ್ಲಿ ಹಿಂದಿರುಗಿ ನೋಡಿಲ್ಲ.

ಒಂದು ಕಥೆ ಪುಸ್ತಕ, ಒಂದು ಕವನ ಸಂಕಲನ ಸಹ ಬರೆದು ಬಿಡುಗಡೆ ಮಾಡಿದ್ದೇನೆ. ಅನೇಕ ವೆಬ್‌ತಾಣಗಳಿಗೂ ಸಂಪಾದಕನಾಗಿ, ಕೆಲವು ಪತ್ರಿಕೆಗಳ ಅಂಕಣಗಾರನಾಗಿ, ಗೌರವ ಸಲಹೆಗಾರನಾಗಿ, ಸಿನೆಮಾ ವಿಮರ್ಶೆ, ಸಿನೆಮಾಗಳಿಗೆ ಕಥೆ, ರಾಜಕೀಯ ವಿಮರ್ಶೆಗಳಿಗೂ ನನ್ನ ಬರಹವನ್ನು ನಾನು ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇನೆ ಎಂದರೆ ಇದಕ್ಕೆ ಮೂಲ ಕಾರಣವೇ ಉದಯವಾಣಿ. ಅಂದು ನನ್ನ ಲೇಖನಗಳನ್ನು ಉದಯವಾಣಿ ಪ್ರಕಟಿಸದೆ ಇದ್ದಲ್ಲಿ ಇಂದು ನಾನೊಬ್ಬ ಬರಹಗಾರನಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಂದಿಗೂ ಉದಯವಾಣಿ ಪತ್ರಿಕೆಯನ್ನು ಓದುತ್ತಿದ್ದೇನೆ. 50ರ ಸಂಭ್ರಮದ ಹೊಸ್ತಿಲಲ್ಲಿರುವ ಈ ಪತ್ರಿಕೆಗೆ ಮನದಾಳದ ಶುಭಾಶಯಗಳು.

ನನ್ನಂತ ಸಣ್ಣ ಪುಟ್ಟ ಬರಹಗಾರರನ್ನು ಇನ್ನಷ್ಟು ಬರೆಯುವಂತೆ ಪ್ರೇರೆಪಿಸುವ ಉದಯವಾಣಿ ನೂರುಕಾಲ ಬಾಳಲಿ.
ಶೇಖರ್‌ ಬೆಳಾಲ…

Advertisement

ಪತ್ರಿಕೆ ವಿತರಿಸಿ 50 ಪೈಸೆ ಗಳಿಸಿ; 5 ರೂ.ಗೆ ಕೊಳ್ಳುವ ಸಂತಸ
ಮುನಿಯಾಲಿಗೆ (ಕಾರ್ಕಳ ತಾಲೂಕು) ಆಗಷ್ಟೇ “ಉದಯವಾಣಿ’ ಪ್ರಾಯೋಗಿಕ ಪತ್ರಿಕೆ ಪ್ರವೇಶ ಮಾಡಿತ್ತು. ಜಿ. ಗೋವರ್ಧನ ಪೈ ಇದರ ವಿತರಣೆಯ ಏಜನ್ಸಿ ಪಡೆದರು. ಮುನಿಯಾಲಿನಲ್ಲಿ ಪತ್ರಿಕೆಗಳ, ಸ್ಟೇಷನರಿ ವ್ಯಾಪಾರಿಯಾಗಿದ್ದ ಪೈಗಳು ಕಂಬೈನ್‌x ಬುಕಿಂಗ್‌ನಲ್ಲಿ ಬಸ್‌ ಏಜಂಟರೂ ಆಗಿದ್ದರು. 5ನೇ ತರಗತಿಯಲ್ಲಿ ಓದುತ್ತಿದ್ದ ನನಗೆ ಅಯಾಚಿತವಾಗಿ ಮುಂಜಾನೆ ಪತ್ರಿಕೆಯನ್ನು ಊರಿನ ಅಂಗಡಿಗಳಿಗೆ, ಕೆಲವು ಮನೆಗಳಿಗೆ ತಲುಪಿಸುವ ಹೊಣೆ. ವಿಶೇಷವೆಂದರೆ ಪತ್ರಿಕೆಗಾಗಿ ಕಾದು ಕುಳಿತುಕೊಳ್ಳುವ ಗ್ರಾಹಕರು, ಹಣಕೊಟ್ಟು ಪತ್ರಿಕೆ ಪಡೆಯುತ್ತಿದ್ದರು. ಯಾರೂ ಉಚಿತವಾಗಿ ಪಡೆಯುತ್ತಿರಲಿಲ್ಲ. ಆಗ ಅದೇ ಕಂಬೈನ್‌x ಬಸ್‌ ಸಂಸ್ಥೆಯಲ್ಲಿ ಪ್ರಾಮಾಣಿಕತೆಗೆ ಹೆಸರಾಗಿದ್ದ ನನ್ನ ತಂದೆ ವಾಮನ ಕಿಣಿಯವರು ನಮ್ಮ ತುಂಬು ಸಂಸಾರದ ಮನೆಯ ಸದಸ್ಯರ ಎಲ್ಲ ಖರ್ಚನ್ನು ಬರುವ ಅಲ್ಪ ಆದಾಯದಲ್ಲಿಯೇ ನಿಭಾಯಿಸಲು ಶ್ರಮಿಸುತ್ತಿದ್ದರು. ಬಾಲ್ಯದಲ್ಲಿ ಸ್ವಾವಲಂಬನೆಯ ಜತೆಗೆ ಪತ್ರಿಕೆ ಓದುವ ಹವ್ಯಾಸ ನನ್ನನ್ನು ಶಾಲೆಯಲ್ಲಿ ಸುದ್ದಿ ವಾಚಕನಾಗಿ ಮಾಡಿತು. ಗುರು ಎ.ವಿ. ನಾವಡರ “ದರ್ಶನ’ ಕಾಲೇಜು ಪತ್ರಿಕೆಯ ಸದಸ್ಯನಾಗಿ, ಮುಂದೆ ಶಿಕ್ಷಕನಾಗಿ, ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿ ನಿವೃತ್ತಿ ಹೊಂದಿದ ನನ್ನ ಬದುಕಿನಲ್ಲಿ ಆ ಬಾಲ್ಯದ ಕಷ್ಟದ ದಿನಗಳಲ್ಲಿ ಸ್ವಾವಲಂಭಿಯಾಗಿ ರೂಪಿಸಿದ್ದು ನನ್ನ ಉದಯವಾಣಿ. ಜಿ.ಜಿ.ಪೈ ಅವರ ಮುಂದೆ ನನ್ನಂತೆ ಹಲವು ಮಂದಿಗೆ ಮನೆಮಕ್ಕಳಂತೆ ಆಶ್ರಯ ನೀಡಿ ಶಿಕ್ಷಣಕ್ಕೆ ನೆರವಾದವರು ಕುಂದಾಪುರದ ಪಾರಿಜಾತ ರಾಮಚಂದ್ರ ಭಟ್ಟರು. ಇವರನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ. ಅಂದು ಪತ್ರಿಕೆ ವಿತರಿಸಿ 50 ಪೈಸೆ ಪಡೆಯುತ್ತಿದ್ದ, ನಾನು ಈಗ ದಿನನಿತ್ಯ 5 ರೂ. ನೀಡಿ ಉದಯವಾಣಿಯನ್ನು ಖರೀಧಿಸುವಾಗ ಅವ್ಯಕ್ತ, ಸಂತೃಪ್ತ ಆನಂದ ನನ್ನ ಪಾಲಿಗೆ.
ಮುನಿಯಾಲು ದೇವದಾಸ ಕಿಣಿ

ಜೀವನದ ಹಾದಿ ತೋರಿದ ಪತ್ರಿಕೆ
ನಾನು ಉದಯವಾಣಿ ಪತ್ರಿಕೆಯ ನಿತ್ಯದ ಓದುಗ, ಒಂದು ದಿನ ಓದದೆ ಇದ್ದರೆ, ಆ ದಿನ ಏನೋ ಒಂದು ವಸ್ತು ಕಳೆದುಕೊಂಡಂತಹ ಭಾವ. ನನ್ನ ಸಾಹಿತ್ಯ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿದ್ದು ಉದಯವಾಣಿ ಪತ್ರಿಕೆ. ಅದ ಲ್ಲದೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಿರತನಾಗಿರುವ ನನಗೆ, ನನ್ನ ಸಮಾಜ ಸೇವಾ ಕಾರ್ಯದಲ್ಲಿ ಉದಯವಾಣಿ ಪತ್ರಿಕೆಯು ಜೀವರಕ್ಷಕ ಪಾತ್ರವಹಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹಾಗಾಗಿ ಸಂಪಾ ದಕೀಯ ಮಂಡಳಿಗೆ ಧನ್ಯವಾದ ಸಮರ್ಪಿಸುತ್ತೇನೆ. ಪತ್ರಿಕೆಯ 50 ಸಂಭ್ರಮಕ್ಕೂ ಶುಭಹಾರೈಸುತ್ತೇನೆ.

ಉಡುಪಿ ನಗರ ಮತ್ತು ಹೊರ ವಲಯಗಳಲ್ಲಿ ಅಪಘಾತದ ಘಟನೆಗಳು ನಡೆದಾಗ ಹಾಗೂ ಬಸ್ಸು, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಅಸ್ವಸ್ಥ ಗೊಂಡು, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವ ಸಾವಿರಾರು ಗಾಯಾಳು ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿರುವ ಸೇವಾ ಕಾರ್ಯವು ನಮ್ಮಿಂದ ನಡೆದಿದೆ. ಬಹಳಷ್ಟು ಸಂದರ್ಭಗಳಲ್ಲಿ ಚಿಂತಾಜನಕ ಪರಿಸ್ಥಿತಿಯ ಲ್ಲಿರುವ ಗಾಯಾಳು, ರೋಗಿಗಳ ವಿಳಾಸಗಳು ತಿಳಿದು ಬಂದಿರದ ಸಂದರ್ಭ ಗಳು ಇರುತ್ತವೆ. ಅಂತಹ ತುರ್ತು ಸಂದರ್ಭದಲ್ಲಿ ನಾವು ಉದಯವಾಣಿ ಪತ್ರಿಕೆಯ ಪತ್ರಕರ್ತರನ್ನು ಸಂಪರ್ಕಿಸಿ ಸಮಸ್ಯೆಯನ್ನು ಹೇಳಿಕೊಂಡಿದ್ದೇವೆ. ಮರುದಿನದ ಪತ್ರಿಕೆಯಲ್ಲಿ “ವಾರಸುದಾರರ ಪತ್ತೆಗೆ ಮನವಿ’ ಸೂಚನ ಸುದ್ದಿಯನ್ನು ಪ್ರಕಟಿಸಿದ್ದಾರೆ. ಪತ್ರಿಕೆಯ ಸಹಕಾರದಿಂದ ಅಪರಿಚಿತ ರೋಗಿ, ಗಾಯಾಳುಗಳ ವಾರಸುದಾರರು ಪತ್ತೆಯಾಗಿದ್ದಾರೆ.

ಇಂತಹ ಹಲವು ಉದಾಹರಣೆಗಳು ಅಪರಿಚಿತರ ಸಾವಿನ ಘಟನೆಗಳಿಗೂ ಸ್ಪಂದಿಸಿದ್ದಿದೆ. ಮೃತರ ಸಂಬಂಧಿಕರು ಉದಯವಾಣಿ ಪತ್ರಿಕೆಯಲ್ಲಿ ಬಂದಿ ರುವ ಸುದ್ದಿ ಪ್ರಕಟನೆೆಯಿಂದ ವಿಷಯ ತಿಳಿದು ಸಂಬಂಧಿಕರು ಪತ್ತೆಯಾದ ಬಹಳಷ್ಟು ಘಟನೆಗಳು ನಡೆದಿವೆ.

ಹಲವು ಸಂದರ್ಭ ನಾವು ದಾಖಲು ಪಡಿಸಿದ ಗಂಭೀರ ರೋಗಗಳಿಗೆ ತುತ್ತಾದ ಕಡು ಬಡಕುಟುಂಬದ ರೋಗಿಗಳಿಗೆ ಆಸ್ಪತ್ರೆಯ ಲಕ್ಷಾಂತರ ಚಿಕಿತ್ಸಾ ವೆಚ್ಚಾ ಭರಿಸಲು ಅಸಹಾಯಕತೆ ಎದುರಾದಾಗ, ಉದಯವಾಣಿ ಪತ್ರಿಕೆಯ ಮೂಲಕ ಸಾರ್ವಜನಿಕರು ದಾನಿಗಳು, ಸಂಘ- ಸಂಸ್ಥೆಗಳಿಂದ, ಆರ್ಥಿಕ ನೆರವು ಬರುವಂತೆ ಮಾಡಿ ಸಹಕರಿಸಿದ ನೂರಾರು ಘಟನೆಗಳು ನಮ್ಮ ಸೇವಾಕಾರ್ಯದಲ್ಲಿ ಕಂಡಿದ್ದೇವೆ. ಹಾಗಾಗಿ ನಾವು ಉದಯವಾಣಿ ಪತ್ರಿಕೆಯು ನಮಗೆ ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ.
ಪತ್ರಿಕೆಗೆ ಚಿರಋಣಿಯಾಗಿದ್ದೇವೆ.
ತಾರಾನಾಥ್‌ ಮೇಸ್ತ ಶಿರೂರು

25 ವರ್ಷಗಳ ಬಾಂಧವ್ಯಉದಯವಾಣಿ ನಮ್ಮ ಮನೆಯ ಒಬ್ಬ ಸದಸ್ಯ. ಈ ಪತ್ರಿಕೆಯ ಜತೆಗೆ ನನಗೆ ಸುಮಾರು 25 ವರ್ಷಗಳ ಅವಿನಾಭಾವ ಸಂಬಂಧ. ಮುಂಜಾನೆ ಪತ್ರಿಕೆ ಓದದೇ ನನಗೆ ತಿಂಡಿ ಸೇರುತ್ತಿರಲಿಲ್ಲ. ಪತ್ರಿಕೆ ಯಲ್ಲಿನ ಒಂದೊಂದು ಅಕ್ಷರವನ್ನೂ ಬಿಡದೆ ಓದುತಿದ್ದೆ. ನಾಡಿಗರ “ಏನಂತಿರಿ’ ತುಂಬಾ ಮಜಾ ಕೊಡುತ್ತಿತ್ತು.

ರವೀಂದ್ರನಾಥ ಶ್ಯಾನುಭಾಗರ “ಬಹುಜನ ಹಿತಾಯ ಬಹುಜನ ಸುಖಾಯ’ ಅಂಕಣದಲ್ಲಿ ಬರುತಿದ್ದ ನಿಜ ಕಥೆಗಳು ಒಮ್ಮೊಮ್ಮೆ ಕಣ್ಣಂಚನ್ನು ತೇವ ಮಾಡುತ್ತಿತ್ತು. ನನಗೆ ನಮ್ಮ ವ್ಯವಸ್ಥೆಯ ಕೆಲವೊಂದು ತಪ್ಪಿನಿಂದ ಜನ ಹೇಗೆ ಕಂಗಾಲಾಗುತಿದ್ದರು ಎಂಬುದು ಅರಿವಾಗುತಿತ್ತು. ಹಾಗೆಯೆ ಪತ್ರಿಕೆಯು ನನ್ನ ಬೌದ್ಧಿಕ ಜ್ಞಾನವನ್ನು ಹೆಚ್ಚಿಸಿದೆ. ಪತ್ರಿಕೆಯಲ್ಲಿ ಪ್ರಕಟವಾಗುತಿದ್ದ ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಮಂತ್ರಿಗಳ ಹೆಸರುಗಳನ್ನು ನಾನು ನೋಟ್‌ಬುಕ್‌ನಲ್ಲಿ ಬರೆದು ಇಟ್ಟುಕೊಳ್ಳುತಿದ್ದೆ.

ಪತ್ರಿಕೆ ಓದಿನಿಂದ ನನಗೆ ರಾಜ್ಯಶಾಸ್ತ್ರದ ಮೇಲೆ ಆಸಕ್ತಿ ಮೂಡು ವಂತಾಯಿತು. ನನಗೆ ಇಂದು ಸಾಮಾನ್ಯ ಜ್ಞಾನ ವೃದ್ಧಿಯಾಗಿದೆ ಎಂದರೆ ಅದಕ್ಕೆ ಉದಯವಾಣಿ ಕಾರಣ. ನಾನು ಯಕ್ಷಗಾನ, ನಾಟಕ ಗಳಲ್ಲಿ ಸ್ಪುಟವಾಗಿ ಮಾತನಾಡಲು ಹಾಗೂ ಕವನಗಳ ರಚನೆಗೆ ಶಬ್ದ ಸಂಪತ್ತನ್ನು ಒದಗಿಸಿದ ಕೀರ್ತಿ ಪತ್ರಿಕೆಗೆ ಸಲ್ಲುತ್ತದೆ. ಕ್ರೀಡಾಪುಟದಲ್ಲಿ ಪ್ರಕಟವಾಗುತ್ತಿದ್ದ ಕ್ರಿಕೆಟ್‌ ಆಟಗಾರರ ಚಿತ್ರಗಳನ್ನು ಸಂಗ್ರಹಿಸುತ್ತಿದ್ದೆ. ನನ್ನ ವ್ಯಕ್ತಿತ್ವದ ವಿಕಸನಕ್ಕೆ ಉದಯವಾಣಿಯ ಕೊಡುಗೆ ಅಪಾರ.
ರಾಘವೇಂದ್ರ ಡಿ. ಬಿಲ್ಲವ ಶಿರೂರು.

ಉದ್ಯೋಗವಾರ್ತೆ ನನಗಿಷ್ಟ
ಉದಯವಾಣಿ ಪತ್ರಿಕೆಯನ್ನು ಓದುವುದು ನನ್ನ ಹವ್ಯಾಸವಾಗಿದೆ. ದಿನನಿತ್ಯದ ಸುದ್ದಿ ಮಾಹಿತಿಗಳಿಗಾಗಿ ನಾನು ಉದಯವಾಣಿಯನ್ನು ಓದುತ್ತೇನೆ. ಉದಯವಾಣಿ ಪತ್ರಿಕೆಯಲ್ಲಿ ಬರುವಂತಹ ಉದ್ಯೋಗ ವಾರ್ತೆ ಹೆಚ್ಚಿನ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಸಹಾಯ ಕವಾಗಿದೆ . ಕೆಲವರು ಉತ್ತಮ ಶಿಕ್ಷಣಗಳನ್ನು ಪಡೆದು ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಅಂತಹವರಿಗೆ ಉದ್ಯೋಗಾವಕಾಶಗಳನ್ನು ಪತ್ರಿಕೆ ತಿಳಿಸಿಕೊಡುತ್ತಿದೆ. ಈಗ 50ರ ಸಂಭ್ರಮದಲ್ಲಿರುವ ನೆಚ್ಚಿನ ಪತ್ರಿಕೆ ಇನ್ನಷ್ಟು ಬೆಳೆದು ಬರಲಿ ಎಂದು ಆಶಿಸುತ್ತೇನೆ.
ಹರೀಶ್‌ ಬೆಂಡೋಡಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next