ಹುಣಸೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಟಿ ಕೋಳಿಗಳಿಗೆ ಕೊಕ್ಕರೆ ರೋಗ ಕಾಣಿಸಿಕೊಂಡು ಸಾವನ್ನಪ್ಪುತ್ತಿವೆ. ತಾಲೂಕಿನ ನೇರಳಕುಪ್ಪೆ, ಕಚುವಿನಹಳ್ಳಿ, ಚಿಲ್ಕುಂದ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕೋಳಿಗಳಿಗೆ ಕೊಕ್ಕರೆ ರೋಗ ಹರಡಿದ್ದು, ನಿತ್ಯ ನೂರಾರು ಕೋಳಿಗಳು ಸಾಯುತ್ತಿವೆ.
ನೇರಳಕುಪ್ಪೆಯ ಸಣ್ಣತಮ್ಮೇಗೌಡ, ಕೃಷ್ಣ, ಮಧುರ, ದೇವರಾಜು, ನಾಗರಾಜು, ಮಲ್ಲಮ್ಮ ಚಿಲ್ಕುಂದ ಗ್ರಾಮದ ರಾಮಚಂದ್ರಯ್ಯ, ನಂಜುಂಡಯ್ಯ ಹಾಗೂ ಮಹದೇವಮ್ಮ ಮತ್ತಿತರರಿಗೆ ಸೇರಿದ ನೂರಾರು ಕೋಳಿಗಳು ಸಾವನ್ನಪ್ಪುತ್ತಿದ್ದು, ಕೋಳಿ ಸಾಕಣೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಇವರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ:- ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಹತ್ಯೆಗೈದ ಪುತ್ರ
ಮಲಗಿದಲ್ಲೇ ಕೋಳಿಸಾವು: ಕೋಳಿಗಳು ಮೇವು-ನೀರನ್ನು ಬಿಟ್ಟು ಕುಳಿತಲ್ಲೇ ತೂಕಡಿಸುತ್ತಲೇ ಒಂದೇ ದಿನದಲ್ಲಿ ಸಾವನ್ನಪ್ಪುತ್ತಿವೆ. ಇದು ಸಾಂಕ್ರಾಮಿಕ ರೋಗವಾಗಿ ದ್ದು, ಒಂದು ಕೋಳಿಗೆ ರೋಗ ಕಾಣಿಸಿಕೊಂಡಲ್ಲಿ ಇಡೀ ಊರಿಗೆ ಹರಡಿ ನಾಟಿ ಕೋಳಿಗಳ ಸರಣಿ ಸಾವು ಮುಂದುವರಿದಿದೆ. ಗ್ರಾಮೀಣ ಪ್ರದೇಶದ ನಾಟಿ ಕೋಳಿ ಸಾಕಣೆಯನ್ನೇ ಉಪ ಕಸುಬನ್ನಾಗಿಸಿಕೊಂಡಿದ್ದರೆ, ಕೆಲ ಕುಟುಂಬಗಳು ಜೀವನೋ ಪಾಯಕ್ಕಾಗಿ ನಾಟಿಕೋಳಿ ಸಾಕುತ್ತಿದ್ದಾರೆ.
ಈ ರೋಗದಿಂದ ಕೋಳಿಗಳ ಸಾವು ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದರೆ, ಮಾರುಕಟ್ಟೆಯಲ್ಲಿ ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಗೂ ದೊಡ್ಡ ಹೊಡೆತ ಬೀಳಲಿದೆ. ಪಶುವೈದ್ಯ ಇಲಾಖೆ ರೋಗ ನಿಯಂತ್ರಣಕ್ಕೆ ತಕ್ಷಣವೇ ಕ್ರಮವಹಿಸಿ, ಸಾಕಣೆದಾರರ ನೆರವಿಗೆ ನಿಲ್ಲಬೇಕು ಎಂದು ಚಿಲ್ಕುಂದ ಗ್ರಾಮದ ರಾಮಚಂದ್ರಯ್ಯ ಮತ್ತಿತರರು ಆಗ್ರಹಿಸಿದ್ದಾರೆ.