Advertisement

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ

01:22 AM Mar 27, 2019 | Team Udayavani |

ಮಂಗಳೂರು: ವಿಮಾನ ನಿಲ್ದಾಣ ಖಾಸಗೀಕರಣ ಹಿಂಪಡೆಯುವಿಕೆ, ವಿಜಯ ಬ್ಯಾಂಕ್‌ ಹೆಸರು ಉಳಿಸುವುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಲೋಕಸಭೆ ಚುನಾವಣೆ ವೇಳೆ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಂಗಳವಾರ ಮಾತನಾಡಿದ ಅವರು, ರೈಲ್ವೇ ವಲಯ ರಚನೆ, ಬಂದರು ಅಭಿವೃದ್ಧಿ, ಜಿಲ್ಲೆಯಲ್ಲಿ ಐಐಟಿ ಸ್ಥಾಪನೆ ಮುಂತಾದ ಯೋಜನೆಗಳನ್ನು ರೂಪಿಸಲಾಗುವುದು. ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದರೆ, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಶೀಘ್ರ ಈಡೇರಿಸಲಾಗುವುದು ಎಂದರು.

ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಸಂಸದರಾಗಿ ಹತ್ತು ವರ್ಷಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಆದರೆ
ಈಗ ಚೌಕೀದಾರ್‌ ಪೇಟ ಹಾಕಿ ಸುತ್ತುತ್ತಿದ್ದಾರೆ ಎಂದು ಟೀಕಿಸಿದ ಅವರು, ಮಿಥುನ್‌ ರೈ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಬಳಿಕ ಜಿಲ್ಲೆಯಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಮಿಥುನ್‌ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಬಡವರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದ ಪ್ರಧಾನಿ ಮೋದಿ ಮೋಸ ಮಾಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 15 ಕೋಟಿ ಬಡವರಿಗೆ ಮಾಸಿಕ ಆರು ಸಾವಿರ ರೂ.ಗಳಂತೆ ವಾರ್ಷಿಕ 72 ಸಾವಿರ ರೂ. ನೀಡಲು ನಿರ್ಧರಿಸಿದೆ. ನುಡಿದಂತೆ ನಡೆಯುತ್ತಾ ಬಂದಿರುವ ಕಾಂಗ್ರೆಸ್‌ ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದವರು ತಿಳಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಜಿಲ್ಲಾ ಪಂಚಾಯತ್‌ ಸದಸ್ಯ ಶಾಹುಲ್‌ ಹಮೀದ್‌ ಕೆ. ಕೆ., ಸಿ. ಎಂ. ಮುಸ್ತಫಾ, ಆರಿಫ್‌ ಬಾವಾ, ಪ್ರೇಮ್‌ ಬಲ್ಲಾಳ್‌ಬಾಗ್‌, ಪಿಯುಶ್‌ ತೊಕ್ಕೊಟ್ಟು ಉಪಸ್ಥಿತರಿದ್ದರು.

Advertisement

ಮಿಥುನ್‌ ರೈ ಬಚ್ಚಾ ಎಂಬ ಶಾಸಕ ಸುನಿಲ್‌ಕುಮಾರ್‌ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಹೌದು ಮಿಥುನ್‌ ರೈ ಬಚ್ಚಾ. ಆದರೆ ನಿಮ್ಮಂತೆ ಸುಳ್ಳು ಹೇಳುವುದಿಲ್ಲ. ಸಾಧನೆ ಮಾಡುವ ತಾಕತ್ತು ಅವರಲ್ಲಿದೆ ಎಂದು ಐವನ್‌ ಡಿ’ಸೋಜಾ ಅವರು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next