Advertisement
ಇದು ಕೆರಾಡಿ ಗ್ರಾಮದ ಕುಳ್ಳಂಬಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. 3-4 ವರ್ಷಗಳ ಹಿಂದೆ 70 – 80 ಮಂದಿ ಮಕ್ಕಳಿದ್ದ ಶಾಲೆಯೀಗ ಸಂಪರ್ಕ ಸೇತುವೆ ಸಮಸ್ಯೆಯಿಂದ ಬರೀ 16 ಮಂದಿ ವಿದ್ಯಾರ್ಥಿಗಳಷ್ಟೇ ಇರುವ ಸ್ಥಿತಿಗೆ ತಲುಪಿದೆ. ಈ ಬಾರಿ ಬರೀ 4 ಮಕ್ಕಳಷ್ಟೇ 1 ನೇ ತರಗತಿಗೆ ದಾಖಲಾಗಿದ್ದಾರೆ.
ಕುಳ್ಳಂಬಳ್ಳಿ ಕಿ.ಪ್ರಾ. ಶಾಲೆಗೆ ಮೈಪಾಡಿ, ಕಕ್ಕುಂಜೆ, ಸಿದ್ಧಕೋಣ, ತೆಂಕಬೆಟ್ಟು, ಹೊಸಳ್ಳಿ, ಕೋಣಬೇರು, ಕೊಗ್ರಿ, ನಾಡೊಳ್ಳಿ, ಕುಳ್ಳಂಬಳ್ಳಿ ಕಡೆಯಿಂದ ಮಕ್ಕಳು ಶಾಲೆಗೆ ಬರುತ್ತಿದ್ದರು. ಒಟ್ಟಾರೆ ಈ ಶಾಲೆಯ ಗಣತಿ ಲೆಕ್ಕಾಚಾರ ಪ್ರಕಾರ 150 ಮನೆಗಳಿವೆ. ಅದರಲ್ಲೂ ಪ್ರಮುಖವಾಗಿ ಕೊಗ್ರಿ ಮತ್ತು ನಾಡೊಳ್ಳಿಯಿಂದ ಹೆಚ್ಚಿನ ಮಕ್ಕಳು ಈ ಶಾಲೆಗೆ ಹಿಂದೆ ಬರುತ್ತಿದ್ದರು. ಆದರೆ ಸೇತುವೆಯಿಲ್ಲದೆ ಮಳೆಗಾಲದಲ್ಲಿ ಶಿಕ್ಷಕರು ಹಾಗೂ ಸ್ಥಳೀಯರು ತಾತ್ಕಾಲಿಕವಾಗಿ ನಿರ್ಮಿಸುತ್ತಿದ್ದ ಕಾಲು ಸಂಕದಲ್ಲಿ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕೊಗ್ರಿ ಹಾಗೂ ನಾಡೊಳ್ಳಿಯಿಂದ ಕೇವಲ 1ಕಿ.ಮೀ. ಅಂತರದಲ್ಲಿದೆ ಈ ಶಾಲೆ. ಆದರೆ ಕೆರಾಡಿ ಶಾಲೆಗೆ ಸುಮಾರು 3 ಕಿ.ಮೀ. ದೂರವಿದೆ. ಆದರೂ ಅಷ್ಟು ದೂರವಿದ್ದರೂ, ಕಷ್ಟಪಟ್ಟಾದರೂ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಿದ್ದಾರೆ.
Related Articles
ಈ ಶಾಲೆ 1960ರಲ್ಲಿ ಪ್ರಾರಂಭವಾಗಿದ್ದು, ಸುಮಾರು 59 ವರ್ಷಗಳ ಇತಿಹಾಸವಿದೆ. ಸಾವಿರಾರು ಮಂದಿ ವಿದ್ಯಾರ್ಜನೆ ಮಾಡಿರುವ, ಬದುಕು ರೂಪಿಸಿಕೊಟ್ಟ ಶಾಲೆಯಿದು. ಆದರೆ ಕೇವಲ ಸೇತುವೆಯೊಂದರ ಸಮಸ್ಯೆಯಿಂದಾಗಿ ಮುಚ್ಚುವ ಹಂತಕ್ಕೆ ಬಂದಿರುವುದು ಮಾತ್ರ ಊರುವರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ 17 ಮಂದಿ, ಈ ಸಲ 16 ಮಂದಿ ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಹಿಂದೊಮ್ಮೆ 80ಕ್ಕೂ ಹೆಚ್ಚು ಮಕ್ಕಳಿದ್ದ ಕಾಲವು ಇತ್ತು.
Advertisement
ವಾಹನ ವ್ಯವಸ್ಥೆಕಳೆದ 2 ವರ್ಷಗಳಿಂದ ಊರಿನ ಒಬ್ಬರು ದಾನಿಯೇ ಮುಂದೆ ಬಂದು ಮಕ್ಕಳಿಗೆ ಈ ಕಾಲು ಸಂಕದಲ್ಲಿ ಬರಲು ತೊಂದರೆಯಾಗುತ್ತೆಂದು, ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೂ ಮಕ್ಕಳ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಕಿಂಡಿ ಅಣೆಕಟ್ಟು ಮಂಜೂರಾಗಿತ್ತು
ಕೆರಾಡಿಯಿಂದ ಕುಳ್ಳಂಬಳ್ಳಿ ಶಾಲೆಗೆ ಹೋಗುವ ದಾರಿ ಮಧ್ಯದ ಹೊಳೆಗೆ ಸುಮಾರು 2 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ಮಂಜೂರಾಗಿತ್ತು, ಕಾಮ ಗಾರಿಗೆ ಬೇಕಾದ ಎಲ್ಲ ಸವಲತ್ತುಗಳು ಬಂದಿತ್ತು. ಕಿಂಡಿ ಅಣೆಕಟ್ಟು ನಿರ್ಮಿಸಿ, ಅದರಲ್ಲಿ ಮಕ್ಕಳು ಸಹಿತ ಎಲ್ಲರಿಗೂ ನಡೆದಾಡಲು ಅನುಕೂಲವಾಗುವಂತೆ ಮಾಡುವ ಯೋಜನೆ ಇದಾಗಿತ್ತು. ಆದರೆ ಇಲ್ಲಿ ಒಬ್ಬರ ಪಟ್ಟಾ ಜಾಗ ಆಗಿರುವುದರಿಂದ ಸಮಸ್ಯೆಯಾಗಿದೆ. ಸೇತುವೆಯಾದರೆ ಅನುಕೂಲ
ಕುಳ್ಳಂಬಳ್ಳಿ ಶಾಲೆಯ ಭವಿಷ್ಯದ ದೃಷ್ಟಿಯಿಂದ ಸೇತುವೆ ಅಥವಾ ಕಿಂಡಿ ಅಣೆಕಟ್ಟು ಆದಲ್ಲಿ ಬಹಳಷ್ಟು ಅನುಕೂಲವಾಗಲಿದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಸೇತುವೆಗೆ ಪ್ರಸ್ತಾವಿತ ಪ್ರದೇಶದಲ್ಲಿ ಪಟ್ಟಾ ಜಾಗ ಬರುವುದರಿಂದ, ಸರಕಾರದಿಂದ ಪಟ್ಟಾ ಜಾಗಕ್ಕೆ ಪರಿಹಾರ ಕೊಡುವುದಿಲ್ಲವಾದ್ದರಿಂದ ಸೇತುವೆ ಕಷ್ಟ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲೆಯ ಉಳಿವಿನ ದೃಷ್ಟಿಯಲ್ಲಿ ಮುತುವರ್ಜಿ ವಹಿಸಲಿ.
– ನಾಗಪ್ಪ ಕೊಠಾರಿ, ಸ್ಥಳೀಯರು ಸೇತುವೆಗೆ ಪ್ರಯತ್ನ
ಯಾವುದೇ ಊರಲ್ಲಿ ಶಾಲೆ ಮುಚ್ಚುವ ಸಂದರ್ಭ ಬಂದರೆ ಎಲ್ಲ ಅಡೆ- ತಡೆಗಳನ್ನು ನಿವಾರಿಸಿ, ಶಾಲೆಯನ್ನು ಉಳಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕುಳ್ಳಂಬಳ್ಳಿಯಲ್ಲಿಯೂ ಶಾಲಾ ಮಕ್ಕಳ ಅನುಕೂಲಕ್ಕಾಗಿ ಸೇತುವೆ ಅಥವಾ ಅಗತ್ಯವಿರುವ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು -ಪ್ರಶಾಂತ್ ಪಾದೆ