ವಾಡಿ: ವಿಕೃತ ಮನಸ್ಸಿನವರು ನಡೆಸಿದ ವಿದ್ವಂಸಕ ಕೃತ್ಯಕ್ಕೆ ಭಾರತದ ಗಡಿಯಲ್ಲಿ ನಮ್ಮ ಯೋಧರು ಬಲಿಯಾದರು. ಯಾವುದೇ ಧರ್ಮ ದ್ವೇಷದ ಪಾಠ ಹೇಳಿಕೊಡುವುದಿಲ್ಲ. ಶಾಂತಿ, ಪ್ರೀತಿ, ಸ್ನೇಹ ಹೇಳಿಕೊಡುವುದೇ ನಿಜವಾದ ಧರ್ಮ ಎಂದು ಹಳಕರ್ಟಿ ಕಟ್ಟಿಮನಿ ಹಿರೇಮಠದ ಶ್ರೀಮುನೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಂಜಾರಾ ಮಹಿಳಾ ಅಭಿವೃದ್ಧಿ ಸಂಸ್ಥೆಯ ಶ್ರೀಗುರು ಪ್ರೌಢಶಾಲೆ ಹಾಗೂ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ 24ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾನವೀಯತೆ ಇಲ್ಲದ ವ್ಯಕ್ತಿ ಮನುಷ್ಯನಾಗಲಾರ. ಯಾರಲ್ಲಿ ಧಯೆ, ಧರ್ಮ, ತ್ಯಾಗ, ದಾಸೋಹದ ಗುಣಗಳಿರುತ್ತವೆಯೋ ಆತನೇ ವ್ಯಕ್ತಿ, ಆತನೇ ಮಾನವ ಧರ್ಮದ ಭಕ್ತ. ನಾವು ಶೈಕ್ಷಣಿಕವಾಗಿ ಎಷ್ಟು ಪದವಿ
ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಪಡೆದುಕೊಂಡ ಶಿಕ್ಷಣ ನಮಗೆಷ್ಟು ಮಾನವೀಯತೆ ಕಲಿಸಿದೆ ಎಂಬುದು ಮುಖ್ಯ ಎಂದು ಹೇಳಿದರು.
ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಹೇಮಂತಕುಮಾರ ಬಿ.ಕೆ. ಮಾತನಾಡಿ, ಒಂದು ಕಾಲದಲ್ಲಿ ಶಿಕ್ಷಣದಿಂದ ವಂಚಿತಗೊಂಡಿದ್ದ ಬಂಜಾರಾ ಸಮುದಾಯದ ಜನರು ಈಗ ಶಿಕ್ಷಣ ಸಂಸ್ಥೆ ತೆರದು ಇತರರಿಗೆ ಅಕ್ಷರ ದಾಸೋಹ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಶಾಲಾ ವಾರ್ಷಿಕೋತ್ಸವ ನಡೆಸುವುದು ಅಗತ್ಯವಾಗಿದೆ. ಬಡ ಕುಟುಂಬದ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು.ಪತ್ರಕರ್ತ ಮಡಿವಾಳಪ್ಪ ಹೇರೂರ ಮಾತನಾಡಿದರು. ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮಸಿಂಗ್ ರಾಠೊಡ ಅಧ್ಯಕ್ಷತೆ ವಹಿಸಿದ್ದರು.
ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಿವರಾಮ ಪವಾರ, ಮುಖ್ಯಶಿಕ್ಷಕ ರಾಘವೇಂದ್ರ ಗುಡಾಳ, ರವಿ ಸಿ.ಕೆ.ಜಾಧವ, ಪಾಂಡು ರಾಠೊಡ, ಪುರಸಭೆ ಸದಸ್ಯರಾದ ಶೋಭಾ ಗೋವಿಂದ ಪವಾರ, ಅನಿತಾ ರಾಮು ರಾಠೊಡ, ಮರಗಪ್ಪ ಕಲಕುಟಗಿ, ಅಂಬಾಭವಾನಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಇಂದ್ರಾಬಾಯಿ, ಮುಖಂಡರಾದ ರಾಮಚಂದ್ರ ರಾಠೊಡ, ರವಿ ಕಾರಬಾರಿ, ಗಣೇಶ ಚವ್ಹಾಣ, ನಾಮದೇವ ಚವ್ಹಾಣ, ಶಂಕರಸಿಂಗ್ ರಾಠೊಡ ಪಾಲ್ಗೊಂಡಿದ್ದರು. ಶಿಕ್ಷಕಿ ಸವಿತಾ ಪ್ರಾರ್ಥಿಸಿದರು. ಶಿಕ್ಷಕ ಚಂದ್ರಶೇಖರ ಕಲ್ಯಾಣಿ ನಿರೂಪಿಸಿ, ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಡಿ ಸೈನಿಕರ ನೃತ್ಯ ರೂಪಕ, ಲಂಬಾಣಿ ಉಡುಗೆ ಸಾಂಪ್ರದಾಯಿಕ ನೃತ್ಯ ಗಮನ ಸೆಳೆದವು. ಇದಕ್ಕೂ ಮೊದಲು ಮೌನ ಆಚರಿಸುವ ಮೂಲಕ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.