ಮಂಗಳೂರು/ಉಡುಪಿ: ಕರಾವಳಿಯಲ್ಲಿ ಶುಕ್ರವಾರ ಒಂದೆಡೆ ಮತದಾನದ ಕಾವು ಇದ್ದರೆ, ಮತ್ತೂಂದೆಡೆ ಮದುವೆ ಸೇರಿದಂತೆ ಶುಭ ಸಮಾರಂಭಗಳು ಹೆಚ್ಚಾಗಿದ್ದವು. ಆದ ಕಾರಣ ಜನರಿಗೆ ಯಾವುದನ್ನು ಮೊದಲು ಮುಗಿಸುವುದು ಎಂಬ ಗೊಂದಲಕ್ಕೀಡಾದರು.
ಬಹುತೇಕ ಸಭಾಂಗಣಗಳಲ್ಲಿ ಮದುವೆ, ಬ್ರಹ್ಮೋಪದೇಶ, ಔತಣಕೂಟ, ರೋಸ್ ಆಯೋಜನೆಯೊಂದಿಗೆ ಗೃಹಪ್ರವೇಶ ಸೇರಿದಂತೆ ಹತ್ತಾರು ಶುಭ ಕಾರ್ಯಕ್ರಮಗಳು ಜರಗಿದವು. ಮತದಾನದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿ ಮೊದಲು ಸಮಾರಂಭಗಳಿಗೆ ಭೇಟಿ ನೀಡಿ ಸಂಜೆ ಹೊತ್ತಿಗೆ ಮತಗಟ್ಟೆಗಳತ್ತ ಬಂದರು.
ಹಾಗೆಯೆ ಇನ್ನು ಕೆಲವರು ಬೆಳಗ್ಗೆ ಮೊದಲೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ಬಳಿಕವೇ ಸಮಾರಂಭಗಳಿಗೆ ತೆರಳಿದರು. ಬಹುತೇಕ ವಧೂ ವರರು ಮದುವೆ ಸಮಾರಂಭ ಮುಗಿಸಿಕೊಂಡೆ ಮತದಾನದಲ್ಲಿ ಭಾಗವಹಿಸಿದರು. ಮದುವೆ ಮಂಟಪಗಳಲ್ಲಿಯೂ ಮತ ಚಲಾಯಿಸುವ ಜಾಗೃತಿ ಮೂಡಿಸಲಾಯಿತು.
ಸರತಿ ಸಾಲಲ್ಲಿ ನಿಂತ ಅನೇಕರು “ಎರಡೆರಡು ಕಾರ್ಯಕ್ರಮಗಳಿಗೆ ತೆರಳಬೇಕಿದೆ. ಬೇಗ ಮತ ಹಾಕಿ ಹೋಗಬೇಕು’ ಎನ್ನುತ್ತಿದ್ದರೆ, ಮತ್ತೆ ಕೆಲವರು ದೂರದ ಊರಲ್ಲಿ ಕಾರ್ಯಕ್ರಮ ಇರುವ ಕಾರಣ ಒಮ್ಮೆ ಹೋದರೆ ಬರಲಾಗದು. ಅದಕ್ಕೇ ಮತ ಹಾಕಿಯೇ ಹೋಗುತ್ತಿರುವುದಾಗಿ ತಮ್ಮೊಂದಿಗಿನವರಿಗೆ ಹೇಳುತ್ತಿದ್ದುದು ಕೇಳಿಬಂದಿತು.
“ಪುತ್ತೂರು ತಾಲೂಕಿನಲ್ಲಿ ಶುಭ ಕಾರ್ಯವಿದೆ. ಈ ಹಿನ್ನೆಲೆ ಮರಳಿ ಬರುವ ವೇಳೆ ಬಸ್ ವ್ಯವಸ್ಥೆ ಇಲ್ಲದೆ ಸೂಕ್ತ ಸಮಯಕ್ಕೆ ತಲುಪಲು ಅಸಾಧ್ಯವಾಗಿ ಮತದಾನದಿಂದ ವಂಚಿತರಾಗಬಾರದೆಂದು ಬೆಳಗ್ಗೆಯೇ ಬಂದು ಮತ ಚಲಾಯಿಸುತ್ತಿರುವೆ’ ಎಂದರು ಉರ್ವ ಮತಗಟ್ಟೆಯಲ್ಲಿ ಮತದಾರರೊಬ್ಬರು.