Advertisement

ತ್ರಿಗುಣಗಳಿಗೆ ಅನುಗುಣವಾದ ದಿನಚರಿ

10:01 PM Aug 16, 2019 | mahesh |

ನಮ್ಮ ಮನಸ್ಸು ಸತ್ವರಜಸ್ತಮೋ ಗುಣಗಳಲ್ಲಿ ಓಡಾಡುತ್ತಿರುತ್ತದೆ. ಆಯಾ ವೇಳೆಯಲ್ಲಿ ಸತ್ವ ಗುಣದಲ್ಲಿಯೂ, ರಜೋ ಗುಣದಲ್ಲಿಯೂ, ತಮೋ ಗುಣದಲ್ಲಿಯೂ ಇರುತ್ತದೆ. ದಿನದ ಇಪ್ಪತ್ತ ನಾಲ್ಕು ಗಂಟೆಗಳನ್ನು ಎಂಟು ಗಂಟೆಗಳ ಮೂರು ಭಾಗಗಳನ್ನಾಗಿ ಮಾಡಿದರೆ, ಆ 8 ಗಂಟೆಗಳಲ್ಲಿ ಬೆಳಗ್ಗೆ 4 ಗಂಟೆಯಿಂದ 8 ಗಂಟೆಯವರೆಗಿನ 4 ತಾಸು ಹಾಗೂ ಸಾಯಂಕಾಲದ 4 ಗಂಟೆಯಿಂದ ರಾತ್ರಿ 8ರ ವರೆಗಿನ 4 ತಾಸು ಮನಸ್ಸು ಸತ್ವಗುಣದಲ್ಲಿರುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಮನಸ್ಸು ಬೇಗ ಏಕಾಗ್ರಗೊಳ್ಳುತ್ತದೆ. ಏಕಾಗ್ರತೆ ಎಂಬುದು ಸತ್ವಗುಣದ ಒಂದು ಅಭಿವ್ಯಕ್ತಿ. ಚಂಚಲತೆ ರಜೋಗುಣದ ಅಭಿವ್ಯಕ್ತಿ. ನಿದ್ರೆ ತಮೋಗುಣದ ಅಭಿವ್ಯಕ್ತಿ. ತಮೋಗುಣ ಉದ್ದೀಪನವಾದಾಗ, ನಿದ್ರೆ ಆವರಿಸಿಕೊಳ್ಳುತ್ತದೆ. ರಜೋಗುಣ ಉದ್ದೀಪನವಾದಾಗ ಚಟುವಟಿಕೆ, ಚಂಚಲತೆಗಳುಂಟಾಗುತ್ತವೆ. ಸತ್ವಗುಣ ಉದ್ದೀಪನವಾದಾಗ ಜ್ಞಾನ, ಏಕಾಗ್ರತೆಗಳುಂಟಾಗುತ್ತವೆ. ನಮ್ಮ ಮನಸ್ಸು ಬೆಳಗಿನ ಮತ್ತು ಸಾಯಂಕಾಲದಲ್ಲಿ ಸತ್ವಗುಣದಲ್ಲಿ ಇರುವುದರಿಂದ, ಈ ಸಂಧ್ಯಾಕಾಲಗಳಲ್ಲಿ ಮನಸ್ಸು ಬೇಗ ಏಕಾಗ್ರಗೊಳ್ಳುತ್ತದೆ. ಅದಕ್ಕೋಸ್ಕರವೇ ಸಂಧ್ಯಾಕಾಲದಲ್ಲಿ ದೇವರ ಚಿಂತನೆ ಮಾಡಬೇಕು ಎನ್ನುವುದು.

Advertisement

ಉಳಿದ 16 ಗಂಟೆಗಳಲ್ಲಿ ಬೆಳಗಿನ 8 ಗಂಟೆಯಿಂದ ಸಾಯಂಕಾಲದ 4 ಗಂಟೆಯ ತನಕ ರಜೋಗುಣದ ಕಾಲ. ಆ ಕಾಲವು ಚಟುವಟಿಕೆಗಳಿಂದ ಕೂಡಿರಬೇಕು. ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದ 4 ಗಂಟೆಯವರೆಗಿನ 8 ತಾಸು ತಮೋಗುಣದ ವೇಳೆ. ರಾತ್ರಿ ಸರಿಯಾಗಿ ನಿದ್ರೆಯನ್ನು ಮಾಡಬೇಕು. ಏಕೆಂದರೆ, ಸಾಮಾನ್ಯ ಮನುಷ್ಯನಿಗೆ ತಮೋಗುಣವೇ ವಿಶ್ರಾಂತಿ. ಜ್ಞಾನಿಗಳು ಮತ್ತು ತುಂಬಾ ಉನ್ನತ ಸಾಧಕರು ಸತ್ವಗುಣದಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಾರೆ. ಜಾಗೃತಾವಸ್ಥೆಯಲ್ಲಿಯೂ ವಿಶ್ರಾಂತಿಯನ್ನು ಪಡೆಯಬಹುದೆಂಬುದಾಗಿ ತಿಳಿದವರು ಹೇಳುತ್ತಾರೆ. ಅದು ತುಂಬಾ ಮೇಲ್ಮಟ್ಟದ ಸಾಧಕರ ವಿಷಯ. ಉಳಿದವರಿಗೆಲ್ಲ ತಮೋಗುಣದಲ್ಲಿಯೇ ವಿಶ್ರಾಂತಿ. ಹಾಗಾಗಿ, ಸರಿಯಾದ ವೇಳೆಯಲ್ಲಿ ವಿಶ್ರಾಂತಿಯನ್ನು ಮಾಡಬೇಕು. ಉಳಿದ ವೇಳೆಯಲ್ಲಿ ಆಯಾ ಗುಣಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಜೋಡಿಸಿಕೊಂಡರೆ, ಆಗ ಮಾನಸಿಕವಾಗಿಯೂ, ದೈಹಿಕವಾಗಿಯೂ ಆರೋಗ್ಯವು ಲಭಿಸುತ್ತದೆ. ಮತ್ತು ಆ ಚಟುವಟಿಕೆಯಲ್ಲಿಯೂ ವಿಶೇಷವಾದ ಪ್ರಗತಿಯನ್ನು ಕಾಣಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next