Advertisement

ಸಂತೆಕಟ್ಟೆ ಓವರ್‌ಪಾಸ್‌ ನಿರ್ಮಾಣಕ್ಕೆ ಬಂಡೆ ಅಡ್ಡಿ

03:59 PM May 31, 2023 | Team Udayavani |

ಉಡುಪಿ: ಸಂತೆಕಟ್ಟೆಯಲ್ಲಿ ನಿರ್ಮಾಣ ವಾಗುತ್ತಿರುವ ಓವರ್‌ಪಾಸ್‌ ನಿರ್ಮಾಣಕ್ಕೆ ಕಲ್ಲು ಬಂಡೆ ಅಡ್ಡಿಯಾಗಿದ್ದು, ಓವರ್‌ ಪಾಸ್‌ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿದೆ.ನಿರ್ಮಾಣ ಸಂಸ್ಥೆಗೆ ಅವಧಿಯೊಳಗೆ ಕಾಮಗಾರಿ ಮುಗಿಸಲು ಬಂಡೆಕಲ್ಲು ಅಡ್ಡಿಯಾಗಿ ದೊಡ್ಡ ತಲೆನೋವು ಮೂಡಿಸಿದೆ.

Advertisement

ಜನವಸತಿ ಪ್ರದೇಶವಾಗಿರುವುದರಿಂದ ಸ್ಫೋಟಕ ಬಳಸಿ ಬಂಡೆ ಕಲ್ಲು ಒಡೆಯುವಂತಿಲ್ಲ. ಇದಕ್ಕೆ ಪರ್ಯಾಯವಾಗಿ ರಾಸಾಯನಿಕ ಪೌಡರ್‌ ಬಳಸಿ, ಕಲ್ಲಿನ ಒಳಗೆ ಲಘುವಾಗಿ ಸ್ಫೋಟಿಸಿ ಬಂಡೆಕಲ್ಲಿನಲ್ಲಿ ಬಿರುಕು ಮೂಡಿಸಲಾಗುತ್ತದೆ. ಅನಂತರ ಒಂದೊಂದು ಕಡೆಯಿಂದ ಯಂತ್ರಗಳಿಂದ ಕಲ್ಲನ್ನು ತುಂಡರಿಸಿಕೊಂಡು ಬರಲಾಗುತ್ತದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 10 ದಿನದ ಒಳಗೆ ಕಲ್ಲು ತೆರವು ಕಾರ್ಯಪೂರ್ಣಗೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಕೆಲಸ ಸ್ಥಗಿತ
ಕಾಮಗಾರಿ ಆರಂಭಿಸುವ ಮುನ್ನ ಮೂರು ತಿಂಗಳ ಒಳಗೆ ಓವರ್‌ಪಾಸ್‌ ಫೌಂಡೇಶನ್‌ ಕೆಲಸ ಸಂಪೂರ್ಣ ಮುಗಿಸುವ ಯೋಜನೆ ರೂಪಿಸಲಾಗಿತ್ತು. ಇನ್ನೂ ಫೌಂಡೇಶನ್‌ ಕೆಲಸ ಪೂರ್ಣಗೊಂಡಿಲ್ಲ. ಫೌಂಡೇಶನ್‌ ಕೆಲಸ ಪೂರ್ಣಗೊಂಡಿದ್ದರೆ ಪೂರಕ ಕಾಮಗಾರಿ ನಡೆಸಲು ಅನುಕೂಲವಾಗುತ್ತಿತ್ತು. ಸದ್ಯಕ್ಕೆ ಮಳೆಗಾಲ ದಲ್ಲಿ ಈ ಕೆಲಸ ನಿರ್ವಹಣೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಮಳೆಗಾಲದಲ್ಲಿ
ಕಾಡುವ ಸಮಸ್ಯೆ
ಜನರ ಬಹುಕಾಲದ ಬೇಡಿಕೆಯಂತೆ 27.4 ಕೋ. ರೂ. ವೆಚ್ಚದಲ್ಲಿ 1 ಕಿ. ಮೀ. ಅಂತರದಲ್ಲಿ ಓವರ್‌ಪಾಸ್‌ ನಿರ್ಮಾಣವಾಗುತ್ತಿದೆ. ಮಳೆಗಾಲ ಮೊದಲೇ ಆರಂಭಿಕ ಹಂತದ ಕಾಮಗಾರಿ ಬಹುತೇಕ ಮುಗಿಸಿದ್ದರೆ ಅನುಕೂಲವಾಗುತ್ತಿತ್ತು. ಒಟ್ಟಾರೆ ಯೋಜನೆ ಇನ್ನೂ ಒಂದು ವರ್ಷ ಆಗಬಹುದು ಎನ್ನಲಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಸಾಕಷ್ಟು ಡೈವರ್ಶನ್‌ಗಳನ್ನು ರೂಪಿಸಿಕೊಡಲಾಗಿದೆ. ಆದರೂ ಸಂಚಾರ ದಟ್ಟಣೆ, ವಾಹನ ಸವಾರರಿಗೆ ಕಿರಿಕಿರಿ ತಪ್ಪಿದ್ದಿಲ್ಲ. ನಿತ್ಯ ಬೆಳಗ್ಗೆ, ಸಂಜೆ ಸಮಯದಲ್ಲಿ ಟ್ರಾಫಿಕ್‌ ಒತ್ತಡ ಸಾಕಷ್ಟಿರುತ್ತದೆ. ಈ ಸಮಸ್ಯೆ ಮಳೆಗಾಲದಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಅಪಘಾತ, ಅವಘಡ ಸಂಭವಿಸದಂತೆ ಹೆದ್ದಾರಿ ಪ್ರಾಧಿಕಾರ, ಪೊಲೀಸ್‌ ಇಲಾಖೆ, ಜಿಲ್ಲಾಡಳಿತ ಸಾಕಷ್ಟು ಎಚ್ಚರವಹಿಸಬೇಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next