Advertisement

ಗಣೇಶ ಉತ್ಸವಕ್ಕೆ ದಾಖಲೆ 10 ಸಾವಿರ ಮೂರ್ತಿ ರಚನೆ

03:33 PM Aug 12, 2022 | Team Udayavani |

ಬೆಂಗಳೂರು: ವಜ್ರ ಮಹೋತ್ಸವ ಆಚರಣೆ ಸಂಭ್ರಮದಲ್ಲಿರುವ ಬೆಂಗಳೂರು ಗಣೇಶ ಉತ್ಸವ ಸಮಿತಿಯು ಜನರಲ್ಲಿ ಮಣ್ಣಿನ ಗಣಪತಿ, ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಬಳಕೆ ಪರಿಣಾಮದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ದಾಖಲೆಯ 10 ಸಾವಿರ ಗಣಪತಿ ಮೂರ್ತಿಗಳನ್ನು ರಚಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಸಿದ್ಧತೆ ನಡೆಸಿದೆ.

Advertisement

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮತ್ತು ಮಳೆ ಸುರಿಯದಿದ್ದರೆ, ಇದೇ ತಿಂಗಳ 28ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ 10 ಸಾವಿರ ಗಣಪತಿ ಮೂರ್ತಿಗಳನ್ನು ರಚಿಸ ಲು ಸಿದ್ಧತೆ ನಡೆಯುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಚಿತ್ರಕಲಾ ಪರಿಷತ್ತಿನ ಸಹಯೋಗದಲ್ಲಿ ಗಣಪತಿ ತಯಾರಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಗಣಪತಿ ಉತ್ಸವ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ನಂದೀಶ್‌ ಮರಿಯಪ್ಪ, 2019ರಲ್ಲಿ 3,500 ಗಣೇಶ ಮೂರ್ತಿ ತಯಾರಿಸಲಾಗಿತ್ತು. ಅದರಲ್ಲಿ ವಿಶ್ವದಾಖಲೆ ಲೆಕ್ಕಕ್ಕೆ 2,400 ಮೂರ್ತಿಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಈ ಬಾರಿ ದಾಖಲೆಯ 10 ಸಾವಿರ ಮೂರ್ತಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ತುಳಸಿ, ಹೂವಿನ ಬೀಜಗಳ ಮಿಶ್ರಣ: ಜನರಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಮೂರ್ತಿ ಬಳಸದಂತೆ ಅರಿವು ಮತ್ತು ಪಿಇಒ ಬಳಕೆ ಪರಿಣಾಮಗಳನ್ನು ಜನರಲ್ಲಿ ತಿಳಿಸುವುದು, ಪ್ಲಾಸ್ಟಿಕ್‌ ಬಳಸದಂತೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಗಣಪತಿ ಮೂರ್ತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮೂರ್ತಿ ರಚನೆ ವೇಳೆ ಮಣ್ಣಿನಲ್ಲಿ ತುಳಸಿ ಹಾಗೂ ಹೂವಿನ ಬೀಜಗಳನ್ನು ಮಿಶ್ರಣ ಮಾಡಲಾಗುತ್ತದೆ ಎಂದು ಹೇಳಿದರು.

ಜನರಲ್ಲಿ ಭಾವನಾತ್ಮಕ ಸಂಬಂಧ: ಜನರು ತಾವೇ ರಚಿಸಿದ ಗಣಪತಿ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ತಮ್ಮ ಮನೆಗಳಲ್ಲಿಯೇ ವಿಸರ್ಜನೆ ಮಾಡುವುದರಿಂದ ಜನರಲ್ಲಿ ಒಂದು ರೀತಿಯ ಭಾವನಾತ್ಮಕ ಸಂಬಂಧವಿರಲಿದ್ದು, ಹಬ್ಬದ ಸಂಭ್ರಮ ಹೆಚ್ಚಳವಾಗಲಿದೆ. ವಿಸರ್ಜನೆ ಮಾಡಿದ ಮಣ್ಣನ್ನು ಮನೆಗಳ ಪಾಟ್‌ ನಲ್ಲಿಯೇ ಹಾಕುವಂತೆ ನಿರ್ದೇರ್ಶಿಸಲಾಗುತ್ತದೆ. ಇದರಿಂದ ಮಣ್ಣಿನಲ್ಲಿರುವ ತುಳಸಿ ಹಾಗೂ ಹೂವಿನ ಬೀಜಗಳು ಮೊಳಕೆಯೊಡೆದು ಗಿಡಗಳಾಗಲಿವೆ. ವರ್ಷಪೂರ್ತಿ ಮನೆಗಳಲ್ಲಿಯೇ ಗಿಡಗಳು ಇರಲಿವೆ ಎನ್ನುತ್ತಾರೆ ನಂದೀಶ್‌.

Advertisement

ಬೆಂಗಳೂರು ಉತ್ಸವ ಸಮಿತಿಯು 12 ವರ್ಷಗಳಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದು, ಶೂನ್ಯ ಕಸ ಸಂಗ್ರಹ ನಿರ್ವಹಣೆಗೆ ಯೋಜನೆ ರೂಪಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸಮಿತಿಗೆ 60ರ ಸಂಭ್ರಮ
ಬೆಂಗಳೂರು ಉತ್ಸವ ಸಮಿತಿಯು 60ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಜ್ರ ಮಹೋತ್ಸವ ಆಚರಿಸಲಾಗುತ್ತಿದೆ. ಆ.13ರಿಂದ ಸೆ.10ರ ವರೆಗೆ ಕನ್ನಡ ನಾಟಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಣಪತಿ ಮೂರ್ತಿಗಳ ರಚನೆ ಕಾರ್ಯಕ್ರಮದ ಒಂದು ಭಾಗವಾಗಿದೆ ಎಂದು ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ನಂದೀಶ್‌ ಮರಿಯಪ್ಪ ತಿಳಿಸಿದರು.

ಗಣೇಶ ಮೂರ್ತಿ ಜತೆಗೆ ಮರದ ಹಲಗೆ, ಬ್ಯಾಗ್‌ ಕೂಡ ಉಚಿತ
ಗಣೇಶ ಮೂರ್ತಿಗಳನ್ನು ರಚನೆ ಮಾಡುವವರಿಗೆ ಚಿತ್ರಕಲಾ ಪರಿಷತ್ತಿನ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಇನ್ನಿತರ ಗಣಪತಿ ಮೂರ್ತಿ ರಚನೆಕಾರರು ಮಾರ್ಗದರ್ಶನ ನೀಡಲಿದ್ದಾರೆ. ಅದರಂತೆ ಜನರು ತಮಗೆ ಬೇಕಾದ ಗಾತ್ರದಲ್ಲಿ ಗಣಪತಿ ಮೂರ್ತಿ ತಯಾರಿಸಬಹುದು. ಜನರು ಮೂರ್ತಿಗಳನ್ನು ಮನೆಗೆ ಕೊಂಡೊಯ್ಯಲು ಮರದ ಹಲಗೆ ಹಾಗೂ ಒಂದು ಬ್ಯಾಗ್‌ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next