ಹುಣಸೂರು: ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು ಸ್ನೇಹಿತನನ್ನೇ ಇರಿದು ಹತ್ಯೆ ಗೈದಿರುವ ಘಟನೆ ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.ಹುಣಸೂರು ತಾಲೂಕಿನ ಹರವೆ ಗ್ರಾಮದ ಸಣ್ಣಸ್ವಾಮಿನಾಯಕ(48) ಹತ್ಯೆಗೀಡಾದವ. ಇವರಿಗೆ ಪತ್ನಿ, ಒಬ್ಬ ಮಗನಿದ್ದಾನೆ.
ಸಂಬಂಧಿಗಳಾಗಿರುವ ರಾಮನಾಯಕ,ಸಣ್ಣಸ್ವಾಮಿನಾಯಕ ಮತ್ತು ಕುಮಾರನಾಯಕ ಹರವೆ ಗ್ರಾಮದ ಆಸ್ಪತ್ರೆ ಆವರಣದಲ್ಲಿ ಮದ್ಯಸೇವಿಸುತ್ತಿದ್ದರು. ಸಣ್ಣಸ್ವಾಮಿನಾಯಕ ಕುಮಾರ ನಾಯಕ ಎಂಬಾತನಿಗೆ ನಿನಗೆ 38 ವರ್ಷವಾದರೂ ಇನ್ನೂ ಯಾರೂ ಹುಡುಗಿ ಕೊಡುತ್ತಿಲ್ಲವಾ, ಬರೀ ಸುಳ್ಳು ಹೇಳುತ್ತೀಯಾ ನಿನ್ನಲ್ಲಿ ಗಂಡಸ್ತನವೇ ಇಲ್ಲ. ಅದಕ್ಕೆ ನಿನಗೆ ಹುಡುಗಿ ನೀಡಲು ಯಾರೂ ಮುಂದೆ ಬರುತ್ತಿಲ್ಲವೆಂದು ಹೇಳಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕುಮಾರ ನಾಯಕ ಒಮ್ಮೆಲೆ ಚಾಕುವಿನಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ತತ್ ಕ್ಷಣವೇ ಸಣ್ಣಸ್ವಾಮಿನಾಯಕನನ್ನು ಗ್ರಾಮಸ್ಥರ ನೆರವಿನೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ಸಾವನ್ನಪ್ಪಿದ್ದಾರೆ.ಈ ಸಂಬಂಧ ರಾಮನಾಯಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಕುಮಾರ್ ಪತ್ತೆಗೆ ತಂಡ ರಚಿಸಲಾಗಿದೆ.