Advertisement
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸುದೀರ್ಘ ವಿವರಣೆ ನೀಡಿದರು. ರಾಜಕೀಯ ದ್ವೇಷ ಸಾಧನೆ ಅಥವಾ ಮಾಧ್ಯಮವನ್ನು ಕಟ್ಟಿಹಾಕುವ ಉದ್ದೇಶದಿಂದ ನಾವು ಈ ಚೌಕಟ್ಟು ರೂಪಿಸುತ್ತಿಲ್ಲ. ಸುಳ್ಳು ಸುದ್ದಿ ಪ್ರಸಾರದಿಂದ ಸಮಾಜದ ಮೇಲೆ ಆಗುತ್ತಿರುವ ಒಟ್ಟು ದುಷ್ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ಈ ಪ್ರಯತ್ನ. ಪ್ರಚಾರ, ಅಪಪ್ರಚಾರ ಎರಡನ್ನೂ ಪರಿಶೀಲನೆ ಮಾಡುವ ಗುರುತರ ಜವಾಬ್ದಾರಿ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Related Articles
Advertisement
ತಿರುಚುವ ಸುದ್ದಿಗಳ ಮೇಲೆ ನಿಗಾ
ಎಂದೋ ಹೇಳಿದ ಮಾತುಗಳನ್ನು ಇನ್ಯಾವುದೋ ಸಂದರ್ಭ ಅಥವಾ ಘಟನೆಯ ಜತೆಗೆ ಜೋಡಿಸಿ ತಪ್ಪು ಸಂದೇಶ ರವಾನೆ ಮಾಡುವುದು, ಸಂಬಂಧ ಇಲ್ಲದ ವಿಚಾರಗಳನ್ನು ಪ್ರಚಾರ ಮಾಡುವುದು ಹೆಚ್ಚುತ್ತಿದೆ. ಕೆಲವೊಮ್ಮೆ ಅಚಾತುರ್ಯದಿಂದ ಆದ ಘಟನೆಗಳಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ಮೂರು ಹಂತದಲ್ಲಿ ರಚನೆ ಮಾಡುವ ಸಮಿತಿ ಇದೆಲ್ಲದರ ಬಗ್ಗೆ ನಿಗಾ ವಹಿಸುತ್ತದೆ. ಇದು ಸುಳ್ಳು ಸುದ್ದಿ ಪ್ರಸಾರದ ವಿರುದ್ಧ ನಡೆಸುವ ನಿರ್ಣಾಯಕ ಯುದ್ಧವಾಗಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ರಾಜ್ಯ ಸರಕಾರ ಯಾವುದೇ ನೀತಿ ಅಥವಾ ಕಾನೂನು ತಿದ್ದುಪಡಿ ಮಾಡುವುದಿಲ್ಲ. ಇರುವ ವ್ಯವಸ್ಥೆಯೊಳಗೆ ಚೌಕಟ್ಟು ರೂಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದಕ್ಕಾಗಿ ರಾಜ್ಯಮಟ್ಟದ ಸಮಿತಿ ರಚಿಸುತ್ತೇವೆ. ಇದರ ಅಡಿಯಲ್ಲಿ ಪರಿಶೀಲನ ಸಮಿತಿ ಹಾಗೂ ನೋಡಲ್ ಅಧಿಕಾರಿಗಳು ಇರುತ್ತಾರೆ. ಫಾಕ್ಟ್ ಚೆಕ್ ಹಂತದಲ್ಲಿ ಹಂಚಿಕೆಯಾದ ಮಾಹಿತಿಯ ಸರಿ-ತಪ್ಪುಗಳ ಪರಿಶೀಲನೆ ನಡೆಯುತ್ತದೆ. ಆ ಬಳಿಕ ತಾಂತ್ರಿಕ ಪರಿಣತರನ್ನು ಒಳಗೊಂಡ ವಿಶ್ಲೇಷಕ ಮಂಡಳಿ ಇರುತ್ತದೆ. ಜತೆಗೆ ಸಾಮರ್ಥ್ಯ ವರ್ಧನೆಗೆ ವ್ಯವಸ್ಥೆ ರೂಪಿಸುತ್ತೇವೆ ಎಂದು ವಿವರಿಸಿದರು.
ಸಮಿತಿಯಲ್ಲಿ ಯಾರಿರುತ್ತಾರೆ?
ಈ ಸಮಿತಿಯಲ್ಲಿ ಎಡಿಜಿಪಿ ಸಿಐಡಿ ಅಥವಾ ಅದೇ ದರ್ಜೆಯ ಪೊಲೀಸ್ ಅಧಿಕಾರಿ, ಮಾಹಿತಿ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆಯಿಂದ ಒಬ್ಬ ಪ್ರತಿನಿಧಿ, ಐಟಿಬಿಟಿ ಇಲಾಖೆ, ಐಐಟಿ-ಡೀನ್, ಸೈಬರ್ ಸೆಕ್ಯುರಿಟಿ ಕೇಂದ್ರದ ಒಬ್ಬ ಪ್ರತಿನಿಧಿ, ಜತೆಗೆ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡುತ್ತೇವೆ. ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಿಗೂ ಅವಕಾಶ ನೀಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.