ಮೈಸೂರು: ಕನಕದಾಸರು ನಾಡು-ನುಡಿಗೆ ಹಾಗೂ ಸಮಾಜಕ್ಕೆ ತಮ್ಮ ಕೀರ್ತನೆಗಳ ಮೂಲಕ ಅಪಾರವಾದ ಕೊಡುಗೆ ನೀಡಿದ್ದಾರೆ. ನಾವೆಲ್ಲರೂ ಕನಕದಾಸರ ಒಂದಷ್ಟು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಹೇಳಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ನಡೆದ ಕನಕ ಜಯಂತಿಯಲ್ಲಿ ಮಾತನಾಡಿದ ಅವರು, ಸುಮಾರು 500 ವರ್ಷಗಳ ಹಿಂದೆಯೇ ಸಮಾಜದಲ್ಲಿ ಸಾಹಿತ್ಯದ ಮೂಲಕ ಎಲ್ಲಾ ಜನರ ಭಾವನೆಗಳನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ. ಆದರೆ, ಇಂದು ಸಮಾಜವು ಅಂತಹ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತವಾಗಿ ನೋಡುತ್ತಿರುವುದು ವಿಷಾದಕರ ಎಂದರು.
ಕನಕದಾಸರು ಸಮರ್ಪಣಾಭಾವ ಹೊಂದಿ, ದಾಸನಾಗಿ ಕೀರ್ತನೆಗಳನ್ನು ಸಮಾಜಕ್ಕೆ ಸಾರುತ್ತಾ ಜಾತಿ-ಧರ್ಮವನ್ನು ಕಿತ್ತೂಗೆಯುವ ಭಾವನೆ ಬಿತ್ತುತ್ತಿದ್ದರು. ಅಂದಿನ ಕಾಲದಲ್ಲೇ ಅಕ್ಕಿ ಮತ್ತು ರಾಗಿಯಲ್ಲಿ ಯಾವುದು ಶ್ರೇಷ್ಠ ಹಾಗೂ ಮಾನವನಿಗೆ ಯಾವುದು ಆರೋಗ್ಯಕರ ಆಹಾರ ಎಂದು ಹೋರಾಟ ಮಾಡಿ ತಿಳಿಸಿದ್ದರು. ಇಂತಹ ವ್ಯಕ್ತಿಯನ್ನು ನಾವು ದ್ವಂದ್ವ ಮನೋಭಾವದಲ್ಲಿ ನೋಡಬಾರದು. ಅವರು ಸ್ಮರಣೆಯ ಸಂಕೇತವಾಗಿ ಎಲ್ಲರಲ್ಲೂ ಉಳಿದಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಸವಣ್ಣ, ಕನಕದಾಸರು ಹಾಗೂ ಕುವೆಂಪು ಅವರು ತಮ್ಮ ಸಾಮಾಜಿಕ ಕಳಕಳಿಯ ಬರಹಗಳಿಂದ ಜನಸಾಮಾನ್ಯರನ್ನು ತಲುಪುತ್ತಿದ್ದರು. ಇವರು ಇಡೀ ಸಮಾಜದ ಆಸ್ತಿ ಎಂದರೆ ತಪ್ಪಾಗಲಾರದು, ಇಂತಹ ವ್ಯಕ್ತಿಗಳನ್ನು ಕೇವಲ ಒಂದು ದಿನ ಮಾತ್ರ ಸ್ಮರಿಸದೇ ಸದಾ ಸ್ಮರಿಸುತ್ತಾ ಗೌರವ ಸಮರ್ಪಣೆ ಮಾಡಬೇಕು ಎಂದು ತಿಳಿಸಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ ನಿನ್ನ ಕುಲದ ನೆಲೆ ಯಾವುದೆಂದು ತಿಳಿದಿದಿಯಾ ಎಂಬಾ ಕನಕದಾಸರ ಕೀರ್ತನೆ ಇಂದಿಗೂ ಪ್ರಸ್ತುತವಾಗಿದೆ. ಇಂದು ಜಾತಿ-ಧರ್ಮಗಳ ಮೇಲೆ ವ್ಯಕ್ತಿಗಳ ಆರಾಧನೆ ಮಾಡುತ್ತಿರುವುದು ಮಾನವನ ಮನಸ್ಥಿತಿ ಏನೆಂಬುದನ್ನು ತಿಳಿಸುತ್ತದೆ ಇದು ಕೊನೆಯಾಗಬೇಕು ಎಂದು ಹೇಳಿದರು.
ನಾವೆಲ್ಲರೂ ಒಂದು ಎಂದು ಸಾರಿದ ವಿಶ್ವ ಮಾನವರು ಅನೇಕರಿದ್ದಾರೆ ಅಂತಹವರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ಅವರ ವಿಚಾರಧಾರೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಜಾತಿಯ ಮನೋಭಾವನೆಯನ್ನು ಕಿತ್ತೂಗೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಪ್ರೊ.ಮಹದೇವಯ್ಯ, ಖಜಾಂಚಿ ಪ್ರೊ.ಮನೋನ್ಮಣಿ ಎಂ.ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಲ್ಲವಿ ಕೆ.ಬಿ., ಕಾರ್ಯದರ್ಶಿ ಸಿ.ಪದ್ಮಾ ಇತರರಿದ್ದರು.