ಬೆಂಗಳೂರು: ಈ ನಾಡಿನ ಯುವ ಸಮೂಹಕ್ಕೆ ಸಮಕಾಲೀನ ಸವಾಲುಗಳನ್ನು ಎದುರಿಸುವಂತಹ ವಿದ್ಯೆ, ಉದ್ಯೋಗ ಹಾಗೂ ಸ್ಥಿರವಾದ ಆರ್ಥಿಕ ಬದುಕು ಕೊಟ್ಟಾಗ ಮಾತ್ರ ಸಮೃದ್ಧವಾದ ಕರ್ನಾಟಕ ಕಟ್ಟಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಸೋಮವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಡಳಿತದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಿ ಈ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ತೊಡಬೇಕಾಗಿದೆ. ಕನ್ನಡ ನಾಡಿನ ಯುವ ಸಮೂಹವನ್ನು ಕೇಂದ್ರಿಕರಿಸಿಯೇ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು. ಸರ್ಕಾರ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿಯೇ ಕಾರ್ಯಕ್ರಮ ರೂಪಿಸಿದೆ. ಅದರ ಭಾಗವಾಗಿಯೇ ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನ ನೀಡುವ ಕೆಲಸ ನಡೆದಿದೆ.
ಕನ್ನಡ ಮಾಧ್ಯಮದಲ್ಲೆ ತಾಂತ್ರಿಕ ಶಿಕ್ಷಣ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.ಕನ್ನಡ ಕುರಿತ ಹಲವು ವಿಚಾರಗಳು ಇನ್ನೂ ನ್ಯಾಯಾಲಯದಲ್ಲಿವೆ ಅವುಗಳ ವಿರುದ್ಧ ಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಐಟಿಬಿಟಿ ಸೇರಿದಂತೆ ಕರ್ನಾಟಕ ಇಂದು ಹಲವಾರು ಕ್ಷೇತ್ರಗಳಲ್ಲಿ ಮುಂದಿದೆ.ಆದರೆ ಇನ್ನೂ ಕೆಲವು ಕ್ಷೇತ್ರದಲ್ಲಿ ಸಾಧನೆ ತೋರಬೇಕಾಗಿದೆ. ಕ್ಷೇತ್ರವಾರು, ಪ್ರಾದೇಶಿಕವಾರು ಅಸಮಾನತೆಗಳನ್ನು ಹೋಗಲಾಡಿಸಬೇಕಾಗಿದೆ. ಕನ್ನಡ ನೆಲ,ಜಲವನ್ನು ಒಂದು ಧ್ವನಿ ಯಾಗಿ ರಕ್ಷಣೆ ಮಾಡಬೇಕಾಗಿದೆ.
ಇದನ್ನೂ ಓದಿ:- ಉದ್ಯಮಿಗಳು ಹೃದಯವಂತರಾದಾಗ ಜೀವನ ಸಾರ್ಥಕ: ಶಶಿಕಿರಣ್ ಶೆಟ್ಟಿ
ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾಗಿದೆ ಆ ನಿಟ್ಟಿನಲ್ಲಿಯೇ ಸರ್ಕಾರದ ಕಾರ್ಯಗಳು ಸಾಗಿವೆ ಎಂದು ತಿಳಿಸಿದರು. ಕನ್ನಡ ನಾಡು ನುಡಿಗೆ ಧ್ವನಿಯಾಗಿರುವ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂಬ ವಾಟಾಳ್ ನಾಗರಾಜ್ ಅವರ ಮಾತಿಗೆ ಉತ್ತರಿಸಿದ ಬಸವರಾಜ ಬೊಮ್ಮಾ ಯಿ ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದುವರಿಯುವುದಾಗಿ ತಿಳಿಸಿದರು. ಅಲ್ಲದೆ ಕೇಂದ್ರ ಗೃಹ ಸಚಿವರೊಂದಿಗೂ ಮಾತನಾಡುವ ಭರವೆ ನೀಡಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮಾತನಾಡಿ, ಕರ್ನಾಟಕ ಏಕೀಕರಣದ ರೂಪರೇಷೆಗಳು ಮೊದಲು ಆರಂಭವಾಗಿದ್ದು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ನೆನಪಿಸುವ ಸಂಬಂಧ ಆ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಬಿಬಿಎಂಪಿ ಆಡಳಿತಾಧಿತಾರಿ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇದ್ದರು.