Advertisement
ವಿಟ್ಲ: ವಿಟ್ಲಪಟ್ನೂರು ಗ್ರಾಮದ ಕೆಳಗಿನ ಮೂರುಕಜೆಯಲ್ಲಿ ಹಿರಿಯರು 1912ರಲ್ಲಿ ಶಾಲೆ ಆರಂಭಿಸಿದರು. ತೆಂಗಿನಗರಿ ಮತ್ತು ಮುಳಿಹುಲ್ಲಿನ ಛಾವಣಿಯಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳುವ ವ್ಯವಸ್ಥೆ ಆರಂಭಿಸಿದರು. ಕೆಲವು ಸಮಯಗಳ ಬಳಿಕ ಪರ್ತಜೆ ವೆಂಕಟ್ರಮಣ ಭಟ್ ಭೂಮಿ ಖರೀದಿಸಿದರು.
ನದಿಗೆ ಸೇತುವೆಯಿಲ್ಲದೇ ಇದ್ದುದರಿಂದ ವಿಟ್ಲಪಟ್ನೂರು ಗ್ರಾಮದ ಒಂದು ಭಾಗದ ವಿದ್ಯಾರ್ಥಿಗಳು ಮಂಕುಡೆ, ಎತ್ತುಕಲ್ಲು ಇತ್ಯಾದಿ ಶಾಲೆಗೆ ತೆರಳಿದ್ದರು. 1983ರಲ್ಲಿ ನದಿಯ ಮತ್ತೂಂದು ಭಾಗದಲ್ಲಿ ಸುಮಾರು 1.48 ಎಕ್ರೆ ಸರಕಾರಿ ಸ್ಥಳ ಮಂಜೂರಾಗಿ ಸರಕಾರದ ಅನುದಾನ ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಕಟ್ಟಡ ನಿರ್ಮಾಣವಾಯಿತು. ಆಗ ನದಿಗೆ ಸೇತುವೆಯೂ ನಿರ್ಮಾಣವಾಗಿತ್ತು. ಶಾಲೆ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಜನಪ್ರತಿನಿಧಿಗಳು, ದಾನಿಗಳು ನೀಡಿದ ಕೊಡುಗೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುದಾನಗಳು ಬಂದು ಶೌಚಾಲಯ, ಕೊಠಡಿ, ಆವರಣಗೋಡೆ, ಮೈದಾನ, ನಲಿಕಲಿ, ಅಕ್ಷರ ದಾಸೋಹ ಕಟ್ಟಡಗಳು ನಿರ್ಮಾಣಗೊಂಡವು.
Related Articles
ವಿಟ್ಲಪಟ್ನೂರು ಗ್ರಾಮದ ವ್ಯಾಪ್ತಿಯಲ್ಲಿತ್ತು ಈ ಶಾಲೆಗೆ ಕೊಡಂಗಾಯಿ, ಕಾಪುಮಜಲು, ಪಂಜಿಗದ್ದೆ, ಬಲಿಪಗುಳಿ, ಕರ್ಕಳ ಇತ್ಯಾದಿ ಪ್ರದೇಶಗಳ ವಿದ್ಯಾರ್ಥಿಗಳು ಬರುತ್ತಿದ್ದರು. ಇಲ್ಲಿ ಪ್ರಸ್ತುತ 1 ಕಿ.ಪ್ರಾ.ಶಾಲೆ, 3 ಹಿ.ಪ್ರಾ. ಶಾಲೆಗಳಿವೆ.
Advertisement
ಶತಮಾನೋತ್ಸವ2012-13ರಲ್ಲಿ ಶಾಲೆಯು ಪಳ್ಳಗದ್ದೆ ನಾರಾಯಣ ಭಟ್ ಗೌರವಾಧ್ಯಕ್ಷತೆಯಲ್ಲಿ ಶತಮಾನೋತ್ಸವವನ್ನು ಆಚರಿಸಿತು. ಬಲಿಪಗುಳಿ ರಾಮ ಭಟ್ ಧ್ವಜಸ್ತಂಭ ನಿರ್ಮಿಸಿಕೊಟ್ಟರು. ರಂಗ ಮಂದಿರವೂ ನಿರ್ಮಾಣವಾಯಿತು. ಈಗ 4 ಮಂದಿ ಶಿಕ್ಷಕರು, ಓರ್ವ ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 57 ವಿದ್ಯಾರ್ಥಿಗಳಿದ್ದಾರೆ. ಹಳೆ ವಿದ್ಯಾರ್ಥಿಗಳು
ಯೋಧ ನವೀನ ಕಾಪುಮಜಲು, ಅಮೆರಿಕದಲ್ಲಿ ಎಂಜಿನಿಯರ್ ಕೃಷ್ಣಮೂರ್ತಿ, ಆಸ್ಟ್ರೇಲಿಯದಲ್ಲಿ ವೈದ್ಯ ಡಾ| ರಮಾನಂದ ಬಲಿಪಗುಳಿ, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಸದಸ್ಯ ನಾಗೇಶ್ ಶೆಟ್ಟಿ, ಡಾ| ಹಸೈನಾರ್, ಎಂಜಿನಿಯರ್ ಶರೀಫ್ ಚಣಿಲ, ಚಾರ್ಟರ್ಡ್ ಎಕೌಂಟೆಂಟ್, ಹರೀಶ್ ಶೆಟ್ಟಿ ಮುಂಬಯಿ ಮತ್ತಿತರರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಹಿಂದಿನ ಮುಖ್ಯ ಶಿಕ್ಷಕರು
ಮುಖ್ಯ ಶಿಕ್ಷಕರಾಗಿ ಪಕ್ರು ಗೌಡ, ನಾರಾಯಣ ನಾೖಕ್, ರಾಮಕೃಷ್ಣ ಭಟ್, ರತ್ನಾವತಿ, ಸುನಂದಾ, ಮಲ್ಲಿಕಾ, ಸಾವಿತ್ರಿ ಮತ್ತಿತರರು ಸೇವೆ ಸಲ್ಲಿಸಿದ್ದಾರೆ. ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಈಗ ಶಾಲೆಗೆ ಸುಸಜ್ಜಿತ ತರಗತಿ ಕೊಠಡಿಗಳು ಹಾಗೂ ವ್ಯವಸ್ಥಿತ ಶೌಚಾಲಯದ ಆವಶ್ಯಕತೆಯಿದೆ. ವಿಟ್ಲಪಟ್ನೂರು ಗ್ರಾ.ಪಂ. ಆವರಣಗೋಡೆ ನಿರ್ಮಿಸಿಕೊಟ್ಟಿದೆ. ಜನಪ್ರತಿನಿಧಿಗಳು, ಎಸ್‌ಡಿಎಂಸಿ, ಊರಿನ ವಿದ್ಯಾಭಿಮಾನಿಗಳು ಅತ್ಯಪೂರ್ವ ಸಹಕಾರ ನೀಡುತ್ತಿದ್ದಾರೆ.
-ಸರೋಜಾ ಎ., ಮುಖ್ಯ ಶಿಕ್ಷಕಿ. 1989ರಲ್ಲಿ ಈ ಶಾಲೆಗೆ ಸೇರಿದ್ದೆ. ಆಗ ಸುನಂದಾ ಟೀಚರ್, ರತ್ನಾಭಾಯಿ ಟೀಚರ್ ಪಾಠ ಮಾಡಿದ್ದರು. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ಶಿಸ್ತು, ಉತ್ತಮ ಬೋಧನೆ, ಅಲ್ಲಿನ ವಿವಿಧ ರೀತಿಯ ಪ್ರೋತ್ಸಾಹವು ನಮ್ಮನ್ನು ಬೆಳೆಸಿದೆ. ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಅತ್ಯುತ್ತಮವಾಗಿ ನಡೆದಿತ್ತು. ಈ ಶಾಲೆ ಇನ್ನಷ್ಟು ಪ್ರಗತಿ ಸಾಧಿಸಲಿ.
-ಡಾ| ರಮಾನಂದ ಬಲಿಪಗುಳಿ,
ಆಸ್ಟ್ರೇಲಿಯದಲ್ಲಿ ವೈದ್ಯರು
ಹಿರಿಯ ವಿದ್ಯಾರ್ಥಿ - ಉದಯಶಂಕರ್ ನೀರ್ಪಾಜೆ