ಬೆಂಗಳೂರು: ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿಸುಮಾರು ಎಂಟು ಗಂಟೆ ಆಟೋದಲ್ಲಿಯೇ ಅಲೆದಾಡಿ, ಆಟೋದಲ್ಲಿಯೇ ಮಗುವಿಗೆ ಜನ್ಮನೀಡಿದ ಘಟನೆ ಸೋಮವಾರ ಬೆಳಗಿನಜಾವ ನಗರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ನಡೆದಿದೆ. ಆದರೆ, ಆ ಮಗು ಗರ್ಭದಲ್ಲೇ ಮೃತಪಟ್ಟಿತ್ತು.
ಹೋದಲ್ಲೆಲ್ಲಾ ಕೋವಿಡ್ ಪರೀಕ್ಷೆ ವರದಿ ಇದೆಯೇ ಎಂಬ ಪ್ರಶ್ನೆ ಅಥವಾ ಬೆಡ್ ಇಲ್ಲ ಎಂಬ ಸಿದ್ಧ ಉತ್ತರ ಬಂದಿದೆ ಹೊರೆತು, ಚಿಕಿತ್ಸೆ ನೀಡಲು ಯಾರೂ ಮುಂದೆಬಂದಿಲ್ಲ. ಇದರಿಂದ ರಾತ್ರಿಯಿಡೀ ಸುತ್ತಾಡಿ ಸುಸ್ತಾಗಿದ್ದ ಗರ್ಭಿಣಿ ಕೊನೆಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದಿದ್ದಾರೆ. ದಾಖಲು ಮಾಡಿಕೊಳ್ಳಲು ಅರ್ಧಗಂಟೆ ಕಾಯಿಸಲಾಗಿದೆ. ಈ ಮಧ್ಯೆ ಮಹಿಳೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಗು ಹುಟ್ಟುವಾಗಲೇ ಮೃತಪಟ್ಟಿದೆ.
ಶ್ರೀರಾಂಪುರದ ನಿವಾಸಿ ನಿವೇದಿತಾ (23) ಅವರಿಗೆ ಭಾನುವಾರ ರಾತ್ರಿ 2.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಡುರಾತ್ರಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ್, ಶ್ರೀರಾಂಪುರ ಸರ್ಕಾರಿ ಆಸ್ಪತ್ರೆ ಹೀಗೆ ಹಲವು ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೂ, ಯಾವೊಂದು ಆಸ್ಪತ್ರೆ ದಾಖಲು ಮಾಡಿಕೊಂಡಿಲ್ಲ ಎಂದು ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭದಲ್ಲೇ ಮೃತಪಟ್ಟಿತ್ತು; ವೈದ್ಯರು: ಮಹಿಳೆ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆಯೇ ನಮ್ಮ ವೈದ್ಯರು ಪರೀಕ್ಷಿಸಿದ್ದಾರೆ. ಭ್ರೂಣಕ್ಕೆ 32 ವಾರಗಳಾಗಿವೆ. ಹೊಟ್ಟೆಯಲ್ಲಿನ ಮಗು ಜೀವಂತವಾಗಿಲ್ಲ ಎಂದು ಹೇಳಿದ್ದಾರೆ. ಆ ಮಹಿಳೆಯ ಕುಟುಂಬದವರು ಇದನ್ನು ಒಪ್ಪದೆ, ಬೇರೆ ಆಸ್ಪತ್ರೆಗಳಲ್ಲಿ ತೋರಿಸುತ್ತೇವೆ ಎಂದು ಕರೆದುಕೊಂಡು ಹೋಗಿದ್ದಾರೆ. ಆ ಆಸ್ಪತ್ರೆಗಳಲ್ಲಿ ಇವರನ್ನು ದಾಖಲಿಸಿಕೊಂಡಿಲ್ಲ. ಸೋಮವಾರ ಬೆಳಗಿನ ಜಾವ ಮತ್ತೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮಗುವಿನ ತಲೆ ಗರ್ಭಕೋಶದಿಂದ ಸ್ವಲ್ಪ ಹೊರಗೆ ಬಂದಿತ್ತು. ಸ್ವಲ್ಪ ಕೊಳೆತಿತ್ತು. ಮಗುವನ್ನು ಹೊರಗೆ ತೆಗೆಯಲಾಗಿದೆ. ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ಸ್ಪಷ್ಟಪಡಿಸಿದ್ದಾರೆ.
“ಬೆಳಗ್ಗೆ 2.30 ರ ವೇಳೆಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ಹೋಗಿದ್ದೆವು. ಕೋವಿಡ್ ವರದಿ ಇಲ್ಲವೆಂದು ವಾಪಸ್ ಕಳುಹಿಸಿದರು. ಯಾವುದೇ ರೀತಿಯಲ್ಲಿ ಪರೀಕ್ಷೆ ನಡೆಸಿಲ್ಲ. ಮಗು ಗರ್ಭದಲ್ಲಿ ಮೃತಪಟ್ಟಿದೆ ಎಂದು ಹೇಳಿಲ್ಲ. ಈ ರೀತಿ ಹೇಳಿದ್ದರೆ ನಾವ್ಯಾಕೆ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೆವು? ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ದಾಖಲು ಮಾಡಿಕೊಳ್ಳಲಿಲ್ಲ. ಶ್ರೀರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಬರಲಿಲ್ಲ. ಆದಕ್ಕಾಗಿ ಕೊನೆಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಹೋದೆವು’ ಎಂದು ಸಂತ್ರಸ್ತ ಮಹಿಳೆಯ ಸಹೋದರ ಆರೋಪಿಸಿದರು.
ಟ್ವೀಟ್ ಮಾಡಿದ ಮಾಜಿಸಿಎಂ ಸಿದ್ದರಾಮಯ್ಯ : “ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳೆಲ್ಲ ಸುತ್ತಾಡಿ ಗರ್ಭಿಣಿಯೊಬ್ಬರಿಗೆ ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಆಟೋದಲ್ಲಿಯೇ ಹಡೆದ ಪರಿಣಾಮ ಹಸುಗೂಸನ್ನು ಕಳೆದುಕೊಳ್ಳಬೇಕಾಯಿತು. ಮುಖ್ಯಮಂತ್ರಿ ಅವರೇ ಮೊದಲು ಈ ನತದೃಷ್ಟ ತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಖಂಡಿಸಿ ಟ್ವೀಟ್ ಮಾಡಿರುವ ಅವರು, “ಕೂಡಲೇ ಸಂಬಂಧಪಟ್ಟ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.