ಗರ್ಭೀಣಿ ಮಹಿಳೆಯನ್ನ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಆಟೋದಲ್ಲೇ ಬ್ಲೀಡಿಂಗ್ ಆಗುತ್ತಿತ್ತು, ಹೋಂ ಸ್ಟೇ, ರೆಸಾರ್ಟ್, ಸಾಹುಕಾರರ ಮನೆ ದಾರಿಗಾದ್ರೆ ಕಾಂಕ್ರೀಟ್, ಡಾಂಬರ್ ರೋಡು, ಬಡವರ ಮನೆ ದಾರಿ ದೇವರಿಗೆ ಪ್ರೀತಿ. ಶಾಸಕ.... ಕುಮಾರಸ್ವಾಮಿಯವರೇ, ನಮಗೆ ದುಡ್ಡು, ಆಸ್ತಿ, ಡಸ್ಟರ್-ಇನ್ನೊವಾ ಕಾರು ಯಾವುದೂ ಬೇಡ. ನಾವು ದುಡಿದು, ನಮ್ಮ ಬೈಕಿನಲ್ಲಿ ಓಡಾಡುತ್ತೇವೆ. ಆದರೆ, ದಯವಿಟ್ಟು ನಮ್ಮ ಊರಿಗೆ ನಮ್ಮ ಬೈಕಿನಲ್ಲಿ ಓಡಾಡಲು ಒಂದು ರಸ್ತೆ ನಿರ್ಮಿಸಿ ಕೊಡಿ ಸಾಕು ಎಂದು ಮೂಡಿಗೆರೆ ತಾಲೂಕಿನ ಚಂದವಳ್ಳಿ ಗ್ರಾಮಸ್ಥರು ಶಾಸಕ ಕುಮಾರಸ್ವಾಮಿಯವರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಚಂದವಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತ ಸುಮಾರು ಐದಾರು ಹಳ್ಳಿಗಳಿವೆ. ಅಂದಾಜು 300ಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ. ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬಗಳು. ಅಂದೇ ದುಡಿದು ಅಂದೇ ತಿನ್ನುವ ಬಡವರು. ಅವರಿಗೆ ರಟ್ಟೆ ಮುರಿಯುವಂತೆ ದುಡಿಯೋದು, ಕಷ್ಟಕ್ಕೆ ಬೇಡಿಕೊಳ್ಳೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಕಳೆದ 20 ವರ್ಷಗಳಿಂದ ಏಳೆಂಟು ಕಿ.ಮೀ. ರಸ್ತೆಗಾಗಿ ಬೇಡದ ರೀತಿ ಉಳಿದಿಲ್ಲ. ಹಾಗೇ ಬೇಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು-ರಾಜಕಾರಣಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದೇ ಹೆಚ್ಚು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಎಲ್ಲರಿಗೂ ಅಂಗಲಾಚಿದ್ದು ಆಯ್ತು. ಆದರೆ, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಬಡ ಕೂಲಿ ಕಾರ್ಮಿಕರ ಮೂಗಿಗೆ ತುಪ್ಪ ಸವರಿದ ಜನಪ್ರತಿನಿಧಿಗಳು-ಜನನಾಯಕರೇ ಹೆಚ್ಚು. ರೆಸಾರ್ಟ್, ಹೋಂ ಸ್ಟೇ, ಸಾಹುಕಾರರ ಮನೆ ದಾರಿಗಾದ್ರೆ ಕಾಂಕ್ರೀಟ್, ಡಾಂಬರ್ ರೋಡು ಮಾಡಿಕೊಡುತ್ತಾರೆ. ಬಡವರ ಮನೆ ದಾರಿ ದೇವರಿಗೆ ಪ್ರೀತಿ ಎಂದು ಜನಪ್ರತಿನಿಧಿಗಳು-ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹತ್ತಾರು ವರ್ಷಗಳಿಂದ ನಾವು ಹೋಗಿ ಕೇಳದಾಗೆಲ್ಲಾ ಒಂದೊಂದು ಕಥೆ ಹೇಳುತ್ತಾರೆ ಎಂದು ತೋಟದಲ್ಲಿ ದುಡಿಯೋ ಕೈಗಳು ಬೀದಿಯಲ್ಲಿ ಹೋರಾಡೋದಕ್ಕೆ ಮುಂದಾಗುತ್ತಿದ್ದಾರೆ. ಚಂದವಳ್ಳಿ ಗ್ರಾಮದ 21 ವರ್ಷದ ಯುವಕ, ಸರ್... ನಾನು ಚಿಕ್ಕವನಿದ್ದಾಗ ಈ ರಸ್ತೆಯಾಗಿದ್ದು. ಮತ್ತೆ ಈ ರಸ್ತೆ ಟಾರ್ ಬೇಡ ನಿರ್ವಹಣೆಯನ್ನೂ ಕಂಡಿಲ್ಲ. ಈ ರಸ್ತೆಯಲ್ಲಿ ಓಡಾಡೋದು ಕಷ್ಟಸಾಧ್ಯವಲ್ಲ ಸರ್ ಅಸಾಧ್ಯ ಎಂದು ಅಧಿಕಾರಿಗಳು-ಶಾಸಕ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ನಮಗೆ ಗೊತ್ತಿರುವಂತೆ ಐದಾರು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಕಳೆದ ಬಾರಿ ಎರಡೇ...ಎರಡು ತಿಂಗಳು ನಿಮ್ಮ ಊರಿಗೆ ರಸ್ತೆಯಾಗುತ್ತೆ ಎಂದವರು ಈ ಕಡೆ ತಲೆಹಾಕಲಿಲ್ಲ. ಆಟೋದವರು 500 ರೂಪಾಯಿ ಕೊಟ್ಟರು ನಿಮ್ಮ ಊರಿಗೆ ಬರಲ್ಲ. ಅಲ್ಲಿಗೆ ಬಂದರೆ ಆಟೋವನ್ನ ಸೀದಾ ಗ್ಯಾರೇಜ್‍ಗೆ ತೆಗೆದುಕೊಂಡು ಹೋಗಬೇಕು. ನಿಮ್ಮ 500 ರೂಪಾಯಿ ಜೊತೆ ನನ್ನದು 500 ಹೋಗುತ್ತೆ ಬರಲ್ಲ ಅಂತಾರೆ. ರೋಗಿಗಳನ್ನ ನಡೆಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬರುತ್ತೇವೆ ಎಂದು ನೊಂದಿದ್ದಾರೆ ಹಳ್ಳಿಗರು. ಹಾಗಾಗಿ, ಚಂದವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶಾಸಕ ಕುಮಾರಸ್ವಾಮಿ ವಿರುದ್ಧ ರೆಬೆಲ್ ಆಗಿದ್ದಾರೆ. ಕುಮಾರಸ್ವಾಮಿಯವರೇ, ನಮಗೆ ನಿಮ್ಮ ಆಸ್ತಿ, ದುಡ್ಡು, ಡಸ್ಟರ್-ಇನೋವಾ ಕಾರು ಬೇಡ. ನಮ್ಮ ದುಡ್ಡಲ್ಲಿ, ನಮ್ಮ ಗಾಡಿಯಲ್ಲಿ ಓಡಾಡುತ್ತೇವೆ. ದಯವಿಟ್ಟು ಒಂದು ರಸ್ತೆ ಮಾಡಿಸಿಕೊಂಡಿ ಎಂದು ಆಗ್ರಹಿಸಿ ಒಂದು ತಿಂಗಳ ಗಡುವು ನೀಡಿದ್ದಾರೆ. ಕೂಡಲೇ ರಸ್ತೆ ನಿರ್ಮಿಸಿ ಕೊಡಿ, ಪಾಪದವರು ಬೀದಿಗೆ ಬಂದರೆ ಯಾರಿಗೂ ಒಳ್ಳೆದಲ್ಲ ಎಂದು ಎಚ್ಚರಿಸಿದ್ದಾರೆ.