Advertisement

ಕಲ್ಲಗುಡ್ಡೆ: ಬಡ ಮಹಿಳೆ ಮನೆಗೆ ಸಮರ್ಪಕ ರಸ್ತೆಯಿಲ್ಲ

10:59 AM Jun 10, 2018 | Team Udayavani |

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ 5 ಸೆಂಟ್ಸ್‌ ಕಾಲನಿಯಲ್ಲಿರುವ ಬಡ ಮಹಿಳೆ ಯಮುನಾ ಎಂಬುವವರು ತನ್ನ ಮನೆಗೆ ಹೋಗಲು ಸಮರ್ಪಕ ದಾರಿಯಿಲ್ಲದೆ ನೆರೆಮನೆಯ ಜಾಗದಲ್ಲಿ ಕಲ್ಲು ಬಂಡೆಯ ಮೇಲಿಂದ ನಿತ್ಯ ಸಂಚರಿಸುವಂತಾಗಿದೆ. ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿರುವ ಇವರು ತನ್ನ ಮಗನೊಂದಿಗೆ ವಾಸವಾಗಿದ್ದಾರೆ.

Advertisement

ಮನವಿಗೆ ಸ್ಪಂದನೆಯಿಲ್ಲ
ಪಂ. ವಸತಿ ಯೋಜನೆಯಲ್ಲಿ ಮನೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿವೆ. ಮನೆ ಕೂಡ ಶಿಥಿಲ ಸ್ಥಿತಿಗೆ ಬಂದಿದ್ದು, ಮನೆ ರಿಪೇರಿಗೆ ಹಣ ವಿಲ್ಲ. ಸಾಲ ಮಾಡಿಯಾದರು ಸೂರು ಗಟ್ಟಿ ಮಾಡುವ ಎಂದರೆ ಮನೆ ತನಕ ಸರಿಯಾದ ರಸ್ತೆ ಇಲ್ಲದೆ ವಾಹನ ಬರುವಂತಿಲ್ಲ . ಈ ಬಗ್ಗೆ ಮಚ್ಚಿನ ಗ್ರಾ. ಪಂ.ಗೆ ಹಲವು ಬಾರಿ ಮನವಿ ನೀಡಿದ್ದು, ಸರ್ವೆ ಮಾಡಿ ಹೋದವರದು ಪತ್ತೆಯಿಲ್ಲ. ಮತದಾನದ ಮೊದಲು ರಸ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅನಂತರ ಸುದ್ದಿ ಇಲ್ಲ ಎನ್ನುತ್ತಾರೆ ಯಮುನಾ.

ಕೂಲಿ ಕೆಲಸದಿಂದ ಜೀವನ
ಯಮುನಾ ಅವರ ಪತಿ ತೀರಿಕೊಂಡಿದ್ದು, ತನ್ನ ಮಗನೊಂದಿಗೆ ಕಲ್ಲಗುಡ್ಡೆ ಎಂಬಲ್ಲಿ ಸೂರು ಮಾಡಿಕೊಂಡು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಸೌಖ್ಯದ ಕಾರಣ ಈಗ ಕೂಲಿ ಕೆಲಸಕ್ಕೆ ಹೋಗಲಾಗದೆ ಮನೆಯಲ್ಲೆ ಇದ್ದಾರೆ. ಮಗ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದು, ದೈನಂದಿನ ಚಟುವಟಿಕೆಗಾಗಿ ಮತ್ತು ಔಷಧಕ್ಕಾಗಿ ಪೇಟೆಗೆ ಹೋಗಲೇ ಬೇಕಾದ ಅನಿವಾರ್ಯವಾಗಿದೆ. ರಸ್ತೆ ಇಲ್ಲದ ಕಾರಣ ಆರೋಗ್ಯ ಸಮಸ್ಯೆ ಇದ್ದರೂ ನಡೆದುಕೊಂಡು ಹೋಗುವ ಪರಿಸ್ಥಿತಿ. ಮಳೆಗಾಲದಲ್ಲಿ ಬಂಡೆಕಲ್ಲು ಪಾಚಿ ಹಿಡಿದು ಜಾರುತ್ತಿದೆ. ಮನೆಯ ಹಿಂಬದಿ ಇರುವ ರಸ್ತೆ ಸರಿ ಇಲ್ಲದೆ ಕೊಳಚೆ ನೀರನ್ನು ಮೆಟ್ಟಿಕೊಂಡೇ ಹೋಗಬೇಕಾಗುತ್ತದೆ. ಇದರಿಂದಾಗಿ ಅನಾರೋಗ್ಯದ ಭೀತಿ ಕೂಡ ಎದುರಾಗುತ್ತಿದೆ.

ಸಾಮಾನ್ಯ ಸಭೆಯಲ್ಲಿ ನಿರ್ಣಯ
ಯಮುನಾ ಅವರಿಗೆ ಪಂ. ವಸತಿ ಯೊಜನೆಯಡಿ 2.75 ಸೆಂಟ್ಸ್‌ ನೀಡಿದ್ದು, ರಸ್ತೆ ಕಾಲು ದಾರಿ. ಸರ್ವೆ ಮಾಡಿ ಕ್ರಿಯಾ ಯೋಜನೆಯಲ್ಲಿ ರಸ್ತೆ ನಿರ್ಮಿ ಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಹೇಳಿದ್ದಾರೆ. 

ಅನುದಾನದ ಕೊರತೆ
ನಿವೇಶನ ನೀಡುವಾಗಲೆ ಸರಿಯಾದ ರಸ್ತೆ ಮಾಡಬೇಕಾದದ್ದು ಆಗಿನ ಪಂ. ಆಡಳಿತದ ಜವಾಬ್ದಾರಿಯಾಗಿತ್ತು. ಈಗ ಹಲವಾರು ಮನೆ ನಿರ್ಮಾಣವಾದ ಕಾರಣ ತೆಂಗಿನ ಸಸಿಗಳನ್ನು ತೆಗೆದೇ ರಸ್ತೆ ಮಾಡಬೇಕಿದೆ. ಪಂ. ರಸ್ತೆ ಆದ ಕಾರಣ ರಸ್ತೆ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಪಂ.ನಲ್ಲಿ ಅನುದಾನದ ಕೊರತೆ ಇರುವ ಕಾರಣ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. 
-ಹರ್ಷಲತಾ
ಅಧ್ಯಕ್ಷರು, ಮಚ್ಚಿನ ಗ್ರಾ.ಪಂ

Advertisement

ಆಟೋ ಬಂದರೂ ಸಾಕು
ಮನೆ ರಿಪೇರಿ ಮಾಡಬೇಕಾದರೆ ಸಾಮಗ್ರಿ ತರಲು ರಸ್ತೆ ಇಲ್ಲ. ಆರೋಗ್ಯ ಕೂಡ ಸರಿ ಇಲ್ಲ. ಬಂಡೆಕಲ್ಲಿನ ಮೇಲೆ ಹತ್ತಿಕೊಂಡು ಹೋಗಲು ಆಗುತ್ತಿಲ್ಲ. ಪಂ. ರಸ್ತೆ ಇದ್ದರೂ ಅದನ್ನು ಸರಿಮಾಡಲು ಮುಂದಾಗುತ್ತಿಲ್ಲ. ಮನೆ ಅಂಗಳಕ್ಕೆ ಆಟೋ ಬಂದರೂ ಸಾಕು ಎನ್ನುವಂತಾಗಿದೆ. 
-ಯಮುನಾ

ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next