Advertisement

ತಾಯಿ-ಮಕ್ಕಳ ಆಸ್ಪತ್ರೆಗೆ ಬಿಡದ ರಾಜಕೀಯ ನಂಟು!

03:41 PM Aug 03, 2022 | Team Udayavani |

ಸಿಂಧನೂರು: ತಾಲೂಕಿಗೆ ಮಂಜೂರಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ರಾಜಕೀಯಕ್ಕೂ ಬಿಡದ ನಂಟು. ಇದೀಗ ಆಸ್ಪತ್ರೆ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳುವ ಹಂತದಲ್ಲಿ ಚರಂಡಿ ವಿಚಾರದಲ್ಲಿ ಮತ್ತೆ ರಾಜಕೀಯ ಚರ್ಚೆಗೆ ನಾಂದಿಯಾಗಿದೆ.

Advertisement

ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಾಗದಲ್ಲಿತ್ತು ಎನ್ನಲಾದ ಚರಂಡಿ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕಾಮಗಾರಿ ನಿರ್ವಹಣೆ ಹಿನ್ನೆಲೆಯಲ್ಲಿ ಈ ಮೊದಲು ಇದ್ದ ಚರಂಡಿ ಮುಚ್ಚಲಾಗಿದೆ. ಇದು ಮುಚ್ಚಿದ್ದರಿಂದಲೇ ಲಕ್ಷ್ಮೀ ಕ್ಯಾಂಪಿನ ಮಳೆ ನೀರು ಮುಂದೆ ಹೋಗದೇ ಮನೆಗಳಿಗೆ ನುಗ್ಗಿದೆ ಎಂಬುದು ಮೇಲ್ನೋಟಕ್ಕೆ ವಿವಾದ. ಆದರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ತೊಂದರೆ ಒಡ್ಡಲು ಈ ರೀತಿಯಾಗಿ ನಗರಸಭೆ ನಡೆದುಕೊಳ್ಳುತ್ತಿದೆ ಎನ್ನುತ್ತವೆ ಜೆಡಿಎಸ್‌ನ ಮೂಲಗಳು.

ನಾನ್‌ ಬಿಡಲ್ಲ ಎಂಬ ಪಟ್ಟು: ಶಾಸಕ ವೆಂಕಟರಾವ್‌ ನಾಡಗೌಡರ ಪುತ್ರ ಅಭಿಷೇಕ್‌ ನಾಡಗೌಡ ನೇರವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದ ಸ್ಥಳಕ್ಕೆ ಧಾವಿಸಿದ್ದರು. ಮುಚ್ಚಿದ ಚರಂಡಿ ತೆಗೆಯುತ್ತಿದ್ದೇವೆ ಎಂದು ಕಾಂಗ್ರೆಸ್‌ನವರು ವಾದ ಮಾಡಿದಾಗಲೂ, ನಾನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಜೆಸಿಬಿ ವಾಪಸ್‌ ಕಳುಹಿಸಿದರು. ಈ ಹಂತದಲ್ಲಿ ಎರಡೂ ಪಕ್ಷದ ರಾಜಕೀಯ ನಾಯಕರು ಒಂದು ಹಂತದಲ್ಲಿ ಜಿದ್ದಿಗೆ ಬಿದ್ದರೂ ಅಭಿಷೇಕ್‌ ನಾಡಗೌಡ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರಿಂದ ಜೆಸಿಬಿ ಸ್ಥಳದಿಂದ ವಾಪಸ್‌ ಆಗಬೇಕಾಯಿತು.

ಸಿಟಿ ಮೇಲಿನ ಕಣ್ಣು: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಚರಂಡಿ ವಿಚಾರಕ್ಕೂ ರಾಜಕೀಯ ನಂಟು ಬೆಸೆದುಕೊಂಡಿದೆ. ಪುರಾತನ ಕಾಲದ ಕಲ್ವರ್ಟ್‌ ಮುಚ್ಚಿದರೆ, ಮಳೆ ನೀರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಕಾಂಗ್ರೆಸ್‌ ಮುಂದಿಟ್ಟಿದೆ. ಆದರೆ, ನಗರದಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ. ಅತಿಹೆಚ್ಚು ನಗರಸಭೆ ಸದಸ್ಯರು ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಜೊತೆಗೆ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ನೇತೃತ್ವದ ತಂಡ ನಗರದ 31 ವಾರ್ಡಿನ ಮೇಲೂ ಹದ್ದಿನ ಕಣ್ಣಿಟ್ಟು ಸಂಘಟನೆ ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಶಾಸಕರ ಪುತ್ರ ಅಭಿಷೇಕ್‌ ನಾಡಗೌಡ ಕೂಡ ನಗರದಲ್ಲಿ ಗಸ್ತು ಹಾಕಿ, ಪಕ್ಷ ಸಂಘಟಿಸುವ ಪ್ರಯತ್ನ ಚುರುಕಾಗಿಸಿದ್ದಾರೆ. ಸಹಜವಾಗಿಯೇ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ, ನಗರಸಭೆ ಆಡಳಿತ ಮಂಡಳಿ ಕಾಂಗ್ರೆಸ್‌ ಹಿಡಿತದಲ್ಲಿರುವುದರಿಂದ ಜಿದ್ದಾಜಿದ್ದಿ ಏರ್ಪಡುತ್ತಿದೆ. ಇದೀಗ ಚರಂಡಿ ವಿಚಾರದಲ್ಲಿ ಸಾರ್ವಜನಿಕವಾಗಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ರಂಪರಾಟ ಜಗಜ್ಜಾಹೀರಾಗಿದೆ.

ಅನಾದಿ ಕಾಲದಿಂದಲೂ ಇದ್ದ ಚರಂಡಿ ಮುಚ್ಚಿದ್ದರು. ಅದನ್ನು ತೆಗೆಯಿಸಲು ಹೋದಾಗ ಶಾಸಕರ ಪುತ್ರ ಈ ರೀತಿ ವರ್ತಿಸಿದ್ದು, ಸರಿಯಲ್ಲ. ಮೂರು ತಿಂಗಳಲ್ಲೇ ಹೊಸ ಚರಂಡಿ ನಿರ್ಮಿಸುವುದಾಗಿ ಹೇಳಿದ್ದಾರೆ. -ಮುರ್ತುಜಾ ಹುಸೇನ್‌, ಉಪಾಧ್ಯಕ್ಷರು, ನಗರಸಭೆ, ಸಿಂಧನೂರು

Advertisement

ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸುತ್ತಿರುವ ಜಾಗದಲ್ಲಿ ಜೆಸಿಬಿ ಹಚ್ಚಿ ನಗರಸಭೆಯವರು ಚರಂಡಿ ತೆಗೆಯುತ್ತಿದ್ದರು. ಇದರಿಂದ ಜನರಿಗೆ ತೊಂದರೆ ಆಗುತ್ತದೆಂದು ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. -ಅಭಿಷೇಕ್‌ ನಾಡಗೌಡ, ಶಾಸಕರ ಪುತ್ರ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next