ಬೆಳ್ತಂಗಡಿ: ಚರ್ಚ್ ರಸ್ತೆ ಬಳಿ ಡಿ. 31ರಂದು ಮಧ್ಯಾಹ್ನ ಹೊತ್ತಿ ಉರಿದ ನಂಬರ್ ಪ್ಲೇಟ್ ಇಲ್ಲದ ಬೈಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ನಿಲ್ಲಿಸಿದ್ದ ಬೈಕನ್ನು ಯಾರೋ ಕದ್ದೊಯ್ಯುವ ವೇಳೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಕಾರಣ ಬೈಕನ್ನು ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಬೆಳ್ತಂಗಡಿ ಚರ್ಚ್ ರೋಡ್‌ನ ಸೈಂಟ್ ತೆರೇಸಾ ಶಾಲೆ ಬಳಿ ಡಿ. 31ರಂದು ಮಧ್ಯಾಹ್ನ 12ರ ಸುಮಾರಿಗೆ ಬೈಕೊಂದು ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ಗಮನಿಸಿ ನೀರು ಹಾಯಿಸಿ ನಂದಿಸಿದ್ದರು. ಅದರೆ ಬೈಕ್‌ನ ವಾರಸುದಾರರ ವಿವರ ಲಭ್ಯವಾಗಿರಲಿಲ್ಲ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಬೈಕ್ ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು.
ಎಂಜಿನ್ ನಂಬರ್ ಸಂಗ್ರಹಿಸಿ ಆರ್‌ಟಿಒ ಇಲಾಖೆಯ ಮೂಲಕ ಮಾಲಕನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದು ಉಪ್ಪಿನಂಗಡಿಯ ನಿವಾಸಿ ಪೊಲೀಸ್ ಹೆಡ್ ಕಾನೆrಬಲ್ ಒಬ್ಬರಿಗೆ ಸೇರಿದ್ದು. ಅವರು ಅದನ್ನು ಊರಿನ ಓರ್ವ ವ್ಯಕ್ತಿಗೆ ಮಾರಾಟ ಮಾಡಿದ್ದು. ನಾಲ್ಕು ದಿನದ ಬಳಿಕ ಬಂಟ್ವಾಳ ತಾಲೂಕಿನ ಅಜಿಲಮೊಗರು ಬಳಿ ನಿಲ್ಲಿಸಿ ಮಸೀದಿಗೆ ಹೋಗಿ ವಾಪಸ್ ಬರುವಾಗ ಬೈಕ್ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಾಲಕರಿಗೆ ಕರೆ ಮಾಡಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಉಪ್ಪಿನಂಗಡಿ ಠಾಣೆಗೆ ಡಿ. 30ರಂದು ದೂರು ನೀಡಿದ್ದರು.